ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಅಡುಗೆ ಅನಿಲದ ಬೆಲೆ ಹೆಚ್ಚಿಸಿದ್ದಲ್ಲದೇ, ಇದೀಗ ದೇಶವ್ಯಾಪಿ ವಾಣಿಜ್ಯ ಸಿಲಿಂಡರ್ ಕೊರತೆ ಖಂಡಿಸಿ ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದಿಂದ ನಗರದಲ್ಲಿ ಬುಧವಾರ ಸಿಲಿಂಡರ್‌ಗಳ ಚಿತ್ರ ಹಿಡಿದು, ಸ್ಥಳದಲ್ಲೇ ಅಡುಗೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಲಾಯಿತು.

- ಶ್ರೀ ಜಯದೇವ ವೃತ್ತದಲ್ಲಿ ಅಡುಗೆ ಮಾಡಿ ಪ್ರತಿಭಟಿಸಿದ ಮಹಿಳಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಅಡುಗೆ ಅನಿಲದ ಬೆಲೆ ಹೆಚ್ಚಿಸಿದ್ದಲ್ಲದೇ, ಇದೀಗ ದೇಶವ್ಯಾಪಿ ವಾಣಿಜ್ಯ ಸಿಲಿಂಡರ್ ಕೊರತೆ ಖಂಡಿಸಿ ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದಿಂದ ನಗರದಲ್ಲಿ ಬುಧವಾರ ಸಿಲಿಂಡರ್‌ಗಳ ಚಿತ್ರ ಹಿಡಿದು, ಸ್ಥಳದಲ್ಲೇ ಅಡುಗೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಲಾಯಿತು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಪಕ್ಷದ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ, ಮಾಜಿ ಮೇಯರ್ ಅನಿತಾಬಾಯಿ ಮಾಲತೇಶ ಹಾಗೂ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಇತರರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಪಕ್ಷದ ಮುಖಂಡರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಅನಿತಾ ಬಾಯಿ ಮಾಲತೇಶ ಮಾತನಾಡಿ, ಕಡುಬಡವರು, ಬಡವರು, ಮಧ್ಯಮ ವರ್ಗದ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹೊರಿಸುವಂತೆ ಕೇಂದ್ರ ಸರ್ಕಾರವು ವಿಶ್ವ ಮಹಿಳಾ ದಿನದಂದೇ ಅಡುಗೆ ಅನಿಲದ ಬೆಲೆ ಹೆಚ್ಚಿಸಿದೆ. ಆ ಮೂಲಕ ದೇಶದ ಸಮಸ್ತ ಮಹಿಳೆಯರಿಗೆ ಬೆಲೆ ಏರಿಕೆಯ ಗಿಫ್ಟ್ ನೀಡಿದೆ. ಮಹಿಳೆಯರಿಗೆ ಆರ್ಥಿಕ ಹೊರೆ ಹೇರುವ ಮೂಲಕ ಕೇಂದ್ರ ಏನು ಸಾಧಿಸಲು ಹೊರಟಿದೆ ಎಂದು ಪ್ರಶ್ನಿಸಿದರು.

ಮಧ್ಯ ಪ್ರಾಚ್ಯದಲ್ಲಿ ಅಮೆರಿಕ- ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡುವುದು, ಇರಾನ್ ನೆರೆಹೊರೆಯ ದೇಶಗಳ ಮೇಲೂ ದಾಳಿಯಾಗುವುದು ಮೂರು ತಿಂಗಳ ಮುಂಚೆಯೇ ಕೇಂದ್ರದ ಗಮನಕ್ಕೆ ಬಂದಿದ್ದರೂ ಎಚ್ಚೆತ್ತುಕೊಳ್ಳದ ನರೇಂದ್ರ ಮೋದಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇಂದು ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ. ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವದಿಯಲ್ಲಿ ಅಡುಗೆ ಅನಿಲದ ಬೆಲೆ ₹10 ಹೆಚ್ಚಾದರೂ ಬೀದಿಗಿಳಿಯುತ್ತಿದ್ದ ಬಿಜೆಪಿ ಮಹಿಳಾ ಮೋರ್ಚಾ, ಬಿಜೆಪಿ ಮಹಿಳಾ ನಾಯಕಿಯರು ಈಗ ಯಾಕೆ ಚಕಾರ ಎತ್ತುತ್ತಿಲ್ಲ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಕೆ.ಜಿ. ಶಿವಕುಮಾರ, ಜಿ.ಎಸ್‌.ಮಂಜುನಾಥ ಗಡಿಗುಡಾಳ, ಎ.ನಾಗರಾಜ, ಮಂಜುಳಮ್ಮ, ಕವಿತಾ ಚಂದ್ರಶೇಖರ, ಸಲ್ಮಾಭಾನು, ಕಾವ್ಯ, ಮಣಿ, ಇಂದ್ರಮ್ಮ, ಉಮಾ ಕುಮಾರ, ಶುಭಮಂಗಳ, ದಾಕ್ಷಾಯಣಮ್ಮ, ರಾಜೇಶ್ವರಿ, ಮಂಜಮ್ಮ, ಕಲ್ಲೇಶಪ್ಪ, ವೆಂಕಟೇಶ ನಾಯ್ಕ, ತಿಪ್ಪಣ್ಣ, ವರುಣ್ ಬೆಣ್ಣೆಹಳ್ಳಿ, ಗಾಂಧಿ ನಗರ ರಮೇಶ ಇತರರು ಇದ್ದರು.

- - -

(ಬಾಕ್ಸ್‌) * ಭಾರತವನ್ನು ದುಸ್ಥಿತಿಗೆ ನೂಕಿದ ಮೋದಿ: ದಿನೇಶ ಶೆಟ್ಟಿ ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಮಾತನಾಡಿ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಸುಳ್ಳು ಹೇಳಿಕೊಂಡೇ ಬರುತ್ತಿದ್ದಾರೆ. ಇಡೀ ದೇಶಾದ್ಯಂತ ಅನಿಲ ತುಂಬಿದ ವಾಣಿಜ್ಯ ಸಿಲಿಂಡರ್ ₹4 ಸಾವಿರಕ್ಕೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಮೊದಲೇ ಸಂಕಷ್ಟದಲ್ಲಿರುವ ಹೋಟೆಲ್ ಉದ್ಯಮ, ಬೀದಿಬದಿಯ ತಿಂಡಿ, ತಿನಿಸು ಮಾರಾಟಗಾರರು ಜೀವನ ನಡೆಸುವುದೇ ಕಷ್ಟವಾಗಿದೆ. ಬಹುತೇಕ ಹೋಟೆಲ್‌ಗಳಲ್ಲಿ ನಾನಾ ಬಗೆಯ ಭಕ್ಷ್ಯ ಭೋಜನಗಳ ಬದಲಿಗೆ ಸೀಮಿತ ತಿನಿಸುಗಳನ್ನಷ್ಟೇ ಗ್ರಾಹಕರಿಗೆ ನೀಡುವುದಕ್ಕೆ ಈಗ ಮುಂದಾಗಿವೆ. ಇಡೀ ದೇಶ ಹಿಂದೆಂದೂ ಇಂತಹ ದುಸ್ಥಿತಿ ತಲುಪಿರಲಿಲ್ಲ. ನರೇಂದ್ರ ಮೋದಿ ಸರ್ಕಾರ ಅಂತಹ ಸ್ಥಿತಿಗೆ ದೇಶವನ್ನು ನೂಕಿದೆ ಎಂದು ಟೀಕಿಸಿದರು.

- - -

-11ಕೆಡಿವಿಜಿ1.ಜೆಪಿಜಿ:

ದಾವಣಗೆರೆಯಲ್ಲಿ ಮಹಿಳಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಅಡುಗೆ ಅನಿಲ ದರ ಹೆಚ್ಚಳ ಖಂಡಿಸಿ ಸಿಲಿಂಡರ್ ಚಿತ್ರ ಹಿಡಿದು, ರಸ್ತೆಯಲ್ಲೇ ಅಡುಗೆ ಮಾಡಿ ಪ್ರತಿಭಟಿಸಿದರು.