ಹುಬ್ಬಳ್ಳಿ:
ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಶನಿವಾರ ನಗರದಲ್ಲಿ ಕಾಂಗ್ರೆಸ್ ಹು-ಧಾ ಮಹಾನಗರ ಜಿಲ್ಲಾ ಹಾಗೂ ಗ್ರಾಮಾಂತರ ಘಟಕದ ಕಾರ್ಯಕರ್ತರು ಎತ್ತಿನ ಚಕ್ಕಡಿಯೊಂದಿಗೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ನಗರದ ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು ಎತ್ತು-ಚಕ್ಕಡಿಗಳೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಕಚೇರಿಯಿಂದ ಆರಂಭವಾದ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಮಿನಿ ವಿಧಾನಸೌಧದ ವರೆಗೂ ನಡೆಯಿತು. ಈ ವೇಳೆ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು. ಬಳಿಕ ತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಈ ವೇಳೆ ಗ್ರಾಮೀಣ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರ ಯುದ್ಧದ ನೆಪ ಹೇಳಿ ತೈಲ ದರ ಹೆಚ್ಚಿಸಿದೆ. ಹಿಂದೆ ಮನಮೋಹನ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಜನರಿಗೆ ಹೊರೆಯಾಗದಂತೆ ನೋಡಿಕೊಂಡಿದ್ದರು. ಆದರೆ, ಈಗಿನ ಸರ್ಕಾರ ಎಲ್ಲದರಲ್ಲೂ ಬೆಲೆ ಏರಿಕೆ ಮಾಡುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಂಚ ರಾಜ್ಯ ಚುನಾವಣೆ ವೇಳೆ ಯಾವುದೇ ಕಾರಣಕ್ಕೂ ತೈಲ ಬೆಲೆ ಏರಿಸುವುದಿಲ್ಲ ಎಂದು ಹೇಳಿದ್ದ ಬಿಜೆಪಿ ನಾಯಕರು, ಚುನಾವಣೆ ಮುಗಿಯುತ್ತಿದ್ದಂತೆ ಬೆಲೆ ಏರಿಸುವ ಮೂಲಕ ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ತಕ್ಷಣ ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ ಮಾತನಾಡಿ, ಕೇಂದ್ರ ಸರ್ಕಾರ ತೈಲ ಬೆಲೆ ಹೆಚ್ಚಿಸಿರುವುದು ನೋಡಿದರೆ ಖಜಾನೆ ಖಾಲಿಯಾಗಿದೆ ಎನಿಸುತ್ತಿದೆ. ಅಂಬಾನಿ ಹಾಗೂ ಅದಾನಿಗೆ ಅನುಕೂಲ ಮಾಡುವ ಉದ್ದೇಶದಿಂದ ದರ ಹೆಚ್ಚಿಸಿ ಬಡವರಿಗೆ ಅನ್ಯಾಯ ಮಾಡುತ್ತಿದೆ. ಬಿಜೆಪಿ ಅವರಿಗೆ ಬಹುಶಃ ಇದೇ ಅಚ್ಛೇದಿನ ಇರಬೇಕು. ಕೇಂದ್ರ ಸರ್ಕಾರ ಜನ ವಿರೋಧಿ ನೀತಿಯ ವಿರುದ್ಧ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಹೋರಾಟ ಮಾಡಬೇಕಿದೆ ಎಂದರು.
ಈ ವೇಳೆ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ ಯಲಿಗಾರ, ಕಾಂಗ್ರೆಸ್ ಮುಖಂಡರಾದ ಅಲ್ತಾಫ ಕಿತ್ತೂರ, ಯುವ ಘಟಕದ ಜಿಲ್ಲಾಧ್ಯಕ್ಷ ಅರ್ಜುನ ಪಾಟೀಲ, ಶಿವಾನಂದ ಮುತ್ತಣ್ಣವರ, ಪ್ರೇಮನಾಥ ಚಿಕ್ಕತುಂಬಳ, ಚಂದ್ರಶೇಖರ ಜುಟ್ಟಲ್ ಸೇರಿದಂತೆ ಹಲವರಿದ್ದರು.