ಸಾರಾಂಶ
ಹುಬ್ಬಳ್ಳಿ: ಇಂಧನ, ಅಡುಗೆ ಸಿಲಿಂಡರ್ ದರ ಏರಿಕೆ ಮಾಡಿದ ಕೇಂದ್ರ ಸರ್ಕಾರದ ನೀತಿ ಖಂಡಿಸಿ ನಗರದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಳಿದು ಪ್ರತಿಭಟನೆ ನಡೆಸಿದರು.
ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಿನಿ ವಿಧಾನಸೌಧದ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಅಡುಗೆ ಸಿಲಿಂಡರ್ ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಲೀಟರ್‌ಗೆ ₹2 ಹೆಚ್ಚಳ, ಎಲ್‌ಪಿಜಿ ಗ್ಯಾಸ್‌ಗೆ ₹50 ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಬೆಲೆ ಏರಿಕೆಯಿಂದಾಗಿ ಜನರು ಜೀವನ ನಡೆಸುವುದು ದುಸ್ತರವಾಗಿದೆ ಎಂದು ಆರೋಪಿಸಿದರು.ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದರಿಂದ ಇತರ ದಿನಬಳಕೆ ವಸ್ತುಗಳ ಬೆಲೆಗಳು ಏರಿಕೆಯಾಗುತ್ತದೆ. ಆದಕಾರಣ, ಕೂಡಲೇ ಬೆಲೆ ಏರಿಕೆಯ ನಿರ್ಧಾರವನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಬಳಿಕ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ, ಧಾರವಾಡ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಅನಿಲಕುಮಾರ ಪಾಟೀಲ, ಪಾಲಿಕೆ ಸದಸ್ಯ ಹಾಗೂ ಹು-ಧಾ ಮಹಾನಗರ ಯುವ ಕಾಂಗ್ರೆಸ್ ಅಧ್ಯಕ್ಷ ಅರ್ಜುನ ಪಾಟೀಲ, ಸದಾನಂದ ಡಂಗನವರ, ಎಂ.ಎಚ್. ಚಳ್ಳಮರದ ಸೇರಿದಂತೆ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.14ರ ರಾತ್ರಿಯಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ
ಹುಬ್ಬಳ್ಳಿ: ರಾಜ್ಯ ಸರಕಾರದ ಬೆಲೆ ಏರಿಕೆ ನೀತಿ ಖಂಡಿಸಿ "ಫೆಡರೇಶನ್ ಆಫ್ ಕರ್ನಾಟಕ ಲಾರಿ ಓನರ್ಸ್ ಆ್ಯಂಡ್ ಏಜೆಂಟರ್ಸ್ ಅಸೋಸಿಯೇಷನ್ " ವತಿಯಿಂದ ಏ. 14ರ ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಅಸೋಸಿಯೇಷನ್ ಅಧ್ಯಕ್ಷ ಡಾ. ಜಿ.ಆರ್. ಷಣ್ಮುಗಪ್ಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ 2024 ಜೂನ್ ತಿಂಗಳಲ್ಲಿ ಡಿಸೇಲ್ ದರ ₹3 ಹೆಚ್ಚಳ ಮಾಡಿದೆ. 2025 ಏಪ್ರಿಲ್ 1 ರಿಂದ ಏಕಾಏಕಿ ಡಿಸೇಲ್ ದರವನ್ನು ಮತ್ತೆ ₹2 ಹೆಚ್ಚಳ ಮಾಡಿದೆ. ಇದರಿಂದ ಲಾರಿ ಉದ್ಯಮದ ಮೇಲೆ ಬರೆ ಬಿದ್ದಿದೆ. ಹೊರರಾಜ್ಯದ ಲಾರಿಗಳು ನಮ್ಮ ರಾಜ್ಯದಲ್ಲಿ ಲಕ್ಷಾಂತರ ಲೀಟರ್ ಡಿಸೇಲ್ ತುಂಬಿಸಿಕೊಳ್ಳುತ್ತಿದ್ದವು, ದರ ಹೆಚ್ಚಳದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಡಿಸೇಲ್ ದರವನ್ನು ಕೂಡಲೇ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಒಟ್ಟಾರೆ 18 ರಾಜ್ಯ ಹೆದ್ದಾರಿ ಟೋಲ್ ಬೂತ್‌ಗಳಿವೆ. ಅನಧಿಕೃತವಾಗಿ ವಾಹನಗಳಿಂದ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ. ಚಾಲಕರಿಗೆ ಮೂಲಭೂತ ಸೌಕರ್ಯ ಒದಗಿಸದೇ ಹಾಗೂ ರಸ್ತೆ ಅಪಘಾತ ತಡೆಯದೇ, ಟೋಲ್ ಗಳಿಗೆ ಕೇವಲ ಬಣ್ಣ ಬಳಿದು, ಶುಲ್ಕ ವಸೂಲಿ ಮಾಡುತ್ತಿರುವುದು ಖಂಡನೀಯ, ಟೋಲ್ ಶುಲ್ಕವನ್ನು ರಾಜ್ಯ ಸರ್ಕಾರ ಕೂಡಲೇ ಕೈಬಿಡಬೇಕು ಎಂದರು.ಡಿಜಿಟಲೀಕರಣದ ಕಾಲಘಟ್ಟದಲ್ಲಿರುವ ಸಂದರ್ಭದಲ್ಲಿ ಆರ್‌ಟಿಒ ಇಲಾಖೆಯ ಬಾರ್ಡರ್ ಚೆಕ್ ಪೋಸ್ಟ್ ಅಗತ್ಯವಿಲ್ಲ. ದೇಶದ ವಿವಿಧ ರಾಜ್ಯದಲ್ಲಿ ಈ ಎಲ್ಲ ಚೆಕ್ ಪೋಸ್ಟ್ ರದ್ದುಪಡಿಸಲಾಗಿದೆ. ಸರಕು ಸಾಗಣೆ ವೆಚ್ಚ ದುಬಾರಿಯಾಗಿದೆ. ರಾಜ್ಯ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ನಾವು ಅನಿವಾರ್ಯವಾಗಿ ಹೋರಾಟದ ಹಾದಿ ತುಳಿದಿದ್ದೇವೆ. ಜತೆಗೆ ದೇಶದಾದ್ಯಂತ ಏ. 27ರಿಂದ ಕೇಂದ್ರ ಸರ್ಕಾರದ ವಿರುದ್ದವೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಲಿಂಗರಾಜು, ಮುಕ್ತುಂ ಮದ್ರಾಸ್, ಸರ್ಫರಾಜ್ ಬಾರದವಾಲೆ, ವಿಜಯ ಮಿಸ್ಕಿನ್, ಗಿರೀಶ ಮಲ್ನಾಡ್ ಸೇರಿದಂತೆ ಹಲವರಿದ್ದರು.ನಾಳೆ ನಲವಡಿ ಟೋಲ್ ಎದುರು ಬೃಹತ್ ಪ್ರತಿಭಟನೆ
ಹುಬ್ಬಳ್ಳಿ: ಬೆಲೆ ಏರಿಕೆ, ಟೋಲ್ ಶುಲ್ಕ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಏ. 11ರಂದು ಹುಬ್ಬಳ್ಳಿ- ಗದಗ ರಸ್ತೆಯಲ್ಲಿನ ನಲವಡಿ ಟೋಲ್ ಪ್ಲಾಜಾ ಹತ್ತಿರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡಪರ ಸಂಘಟನೆಯ ಮುಖಂಡ ಮಂಜುನಾಥ ಲೂತಿಮಠ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡಪರ, ರೈತಪರ, ದಲಿತಪರ, ಆಟೋ ಚಾಲಕರ ಸಂಘ, ವಾಹನ ಚಾಲಕರ ಸಂಘ, ಸಾಮಾಜಿಕ ಕಾರ್ಯಕರ್ತರ ನೇತೃತ್ವದಲ್ಲಿ ಅಂದು ಬೆಳಗ್ಗೆ 10ಕ್ಕೆ ಟೋಲ್ ನಾವೇಕೆ ಕಟ್ಟಬೇಕು ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರತಿಭಟಿಸಲಾಗುತ್ತಿದೆ ಎಂದರು.
ಮೊದಲೇ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದೆ, ಇದಲ್ಲದೇ ಸರ್ಕಾರಗಳು ಟೋಲ್, ಪೆಟ್ರೋಲ್, ಡಿಸೇಲ್, ಸಿ.ಎನ್.ಜಿ, ಬೆಲೆ ಏರಿಕೆ ಮಾಡಿದೆ. ಇದು ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆಯದಂತಾಗಿದೆ. ಹೀಗಾಗಿ, ಕೂಡಲೇ ಟೋಲ್, ಪೆಟ್ರೋಲ್, ಡಿಸೇಲ್, ಸಿಎನ್‌ಜಿ ದರ ಇಳಿಕೆ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಜೀವ್ ದುಮಕನಾಳ, ಪ್ರಕಾಶ ನಾಯಕ್, ಚಿದಾನಂದ ಸವದತ್ತಿ, ಹನುಮಂತ ಪವಾಡಿ, ಹುಸೇನಬಾಷಾ ತಳೇವಾಡ, ಕುಮಾರ ಲಕ್ಕಮ್ಮನವರ, ಪ್ರವೀಣ ಗಾಯಕವಾಡ, ಪ್ರಶಾಂತ ಆರ್.ಕೆ ಸೇರಿದಂತೆ ಹಲವರಿದ್ದರು.