ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಹು-ಧಾ ಮಹಾನಗರ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಬುಧವಾರ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಯಿತು.

ಹುಬ್ಬಳ್ಳಿ:

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಹು-ಧಾ ಮಹಾನಗರ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ಇಲ್ಲಿನ ಮುಖ್ಯ ಅಂಚೆ ಕಚೇರಿ ಎದುರಿನ ಡಾ. ಬಿ.ಆರ್‌. ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಈ ವೇಳೆ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಜ್ಞಾನೇಶಕುಮಾರ ಸೇರಿಕೊಂಡು ಎಸ್‌ಐಆರ್‌ ಮೂಲಕ ಮತಗಳ್ಳತನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಮತಗಳ್ಳತನದ ವಿರುದ್ಧ ಹೋರಾಟ ನಡೆಸುತ್ತಿದ್ದ ರಾಹುಲ್ ಗಾಂಧಿ ಅವರನ್ನು ಬಂಧಿಸಿರುವುದು ಖಂಡನೀಯ. ಎಸ್‌ಐಆರ್ ಪ್ರಕ್ರಿಯೆಯನ್ನು ರದ್ದುಪಡಿಸಿ, ಹೊಸದಾಗಿ ಪ್ರಕ್ರಿಯೆ ನಡೆಸಲು ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು. ಪ್ರತಿಭಟನಾಕಾರರನ್ನು ಬಂಧಿಸುವುದು ಸಂವಿಧಾನದ ಕಗ್ಗೊಲೆಯಾಗಿದ್ದು, ರಾಹುಲ್‌ ಗಾಂಧಿಯನ್ನು ಬಂಧಿಸಿ ಅವಮಾನಿಸಿರುವ ಕ್ರಮ ಖಂಡನೀಯ. ಪ್ರಧಾನಿಗಳು ಈ ಕೂಡಲೇ ರಾಹುಲ್‌ ಗಾಂಧಿ ಬಳಿ ಕ್ಷಮೆ ಕೋರಬೇಕು. ಅಲ್ಲಿಯ ವರೆಗೂ ಈ ಹೋರಾಟ ನಿರಂತರವಾಗಿರಲಿದೆ ಎಂದು ಎಚ್ಚರಿಸಿದರು.

ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಜುಟ್ಟಲ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದ ರಾಹುಲ್ ಗಾಂಧಿ ಅವರನ್ನು ಬಂಧಿಸಿರುವುದು ಸರಿಯಲ್ಲ. ಜ್ಞಾನೇಶಕುಮಾರ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಕೇಂದ್ರ ಸರ್ಕಾರವನ್ನು ವಜಾಗೊಳಿಸಲು ರಾಷ್ಟ್ರಪತಿಗಳು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಂಬೇಡ್ಕರ್‌ ವೃತ್ತದಿಂದ ತಹಸೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದ 50ಕ್ಕೂ ಅಧಿಕ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.

ಈ ವೇಳೆ ಪಾಲಿಕೆ ಸದಸ್ಯ ಆರೀಫ್ ಭದ್ರಾಪುರ, ಕಾಂಗ್ರೆಸ್ ಮುಖಂಡರಾದ ವೇದವ್ಯಾಸ ಕೌಲಗಿ, ಅನ್ವರ್ ಮುಧೋಳ, ಶಿವಾನಂದ ಮುತ್ತಣ್ಣವರ, ಅಶಪಾಕ್ ಕುಮಟಾಕರ, ಯಾಸೀನ್ ಹಾವೇರಿಪೇಟ, ಶಿವಾನಂದ ಬೆಂತೂರ, ದಾನಪ್ಪ ಕಬ್ಬೇರ, ಅರ್ಜುನ ಪಾಟೀಲ ಸೇರಿದಂತೆ ಹಲವರಿದ್ದರು.