ಸಾರಾಂಶ
ರಾಜ್ಯಪಾಲರಿಂದ ಸಂವಿಧಾನದ ಕಗ್ಗೊಲೆ: ತಂಗಡಗಿ
ಬಿಜೆಪಿ ಷಡ್ಯಂತ್ರ ನಡೆಯಲ್ಲ: ರಾಯರಡ್ಡಿಕನ್ನಡಪ್ರಭ ವಾರ್ತೆ ಕೊಪ್ಪಳ
ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ, ರಾಜ್ಯಪಾಲರ ವಿರುದ್ಧ ನಗರದಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಲಾಯಿತು.ನಗರದ ಅಶೋಕ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತದಲ್ಲಿ ಹೆದ್ದಾರಿಯಲ್ಲಿಯೇ ಗಂಟೆಗೂ ಹೆಚ್ಚುಕಾಲ ನಡೆಯಿತು.
ರಾಜ್ಯಪಾಲರ ಭಾವಚಿತ್ರಗಳಿಗೆ ಚಪ್ಪಲಿಯಿಂದ ಹೊಡೆದು, ಟೈಯರ್‌ಗೆ ಬೆಂಕಿ ಹಚ್ಚಿ, ರಾಜ್ಯಪಾಲರ ಫೋಟೋಗಳನ್ನು ಬೆಂಕಿಯಲ್ಲಿ ಹಾಕಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಬಸವೇಶೇಶ್ವರ ವೃತ್ತದಲ್ಲಿ ಕೆಲಕಾಲ ಸಂಚಾರ ಸಮಸ್ಯೆಯಾಯಿತು. ವಾಹನಗಳ ಸಾಲುಗಟ್ಟಿ ನಿಂತಿದ್ದವು.ಟೈಯರ್‌ಗೆ ಬೆಂಕಿ ಹಚ್ಚುವುದನ್ನು ತಡೆಯಲು ಪೊಲೀಸರು ಪ್ರಯತ್ನ ಮಾಡಿದರು. ಆದರೆ, ಅದಕ್ಕೆ ಅವಕಾಶ ನೀಡದ ಕೈ ಕಾರ್ಯಕರ್ತರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ಷಡ್ಯಂತ್ರ ಇದಾಗಿದ್ದು, ಇದರ ವಿರುದ್ಧ ನ್ಯಾಯಾಲಯದಲ್ಲಿ ನಮ್ಮ ಹೋರಾಟ ಮಾಡುತ್ತೇವೆ, ಸುಪ್ರೀಂಕೋರ್ಟ್‌ನಿಂದಲೇ ರಾಜ್ಯಪಾಲರಿಗೆ ಸರಿಯಾದ ಪಾಠವಾಗುತ್ತದೆ ಎಂದು ಕಿಡಿಕಾರಿದರು.ಈಗಾಗಲೇ ಬಿಜೆಪಿ ಸಿಬಿಐ, ಐಟಿಯನ್ನು ದುರುಪಯೋಗ ಮಾಡಿಕೊಂಡಿದೆ. ಈಗ ರಾಜಭವನವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ.
ಕೇಂದ್ರದಲ್ಲಿ ಈಗಾಗಲೇ ಹಿನ್ನಡೆ ಅನುಭವಿಸಿದರೂ ಬಿಜೆಪಿಗೆ ಬುದ್ದಿ ಬಂದಿಲ್ಲ, ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ತಪ್ಪೇ ಮಾಡದೆ ಇದ್ದರೂ ಸಹ ಕೆಳಗಿಸುವ ಯತ್ನ ಮಾಡುತ್ತಿದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಬಿಜೆಪಿ ನಾಯಕರು ರಾಜಭವನವನ್ನೇ ತಮ್ಮ ಆಡಳಿತದ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ. ರಾಜ್ಯಪಾಲರು ಸುಸ್ಥಿರ ಸರ್ಕಾರದ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ಸಂವಿಧಾನದ ಕಗ್ಗೊಲೆ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಮುಡಾ ವಿಷಯದಲ್ಲಿ ಯಾವುದೇ ಒಂದು ಪತ್ರ ನೀಡಿಲ್ಲ, ಆದರೂ ಸಹ ಅವರ ಮೇಲೆ ವಿನಾಕಾರಣ ಗೂಬೆಕೂರಿಸುವುದನ್ನು ಸಹಿಸುವುದಿಲ್ಲ. ರಾಜ್ಯದ ಸಚಿವರು, ಶಾಸಕರು ಅಷ್ಟೇ ಅಲ್ಲ, ರಾಜ್ಯದ 7 ಕೋಟಿ ಜನರು ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದಾರೆ. ಹೀಗಾಗಿ, ದೊಡ್ಡ ಪರಿಣಾಮವನ್ನು ಬಿಜೆಪಿ ಎದುರಿಸಬೇಕಾಗುತ್ತದೆ ಎಂದರು.ಜನಾರ್ದನರೆಡ್ಡಿ, ಮಾಜಿ ಸಿಎಂ ಯಡಿಯೂರಪ್ಪ ಅವರು ಜೈಲಿಗೆ ಹೋಗಿದ್ದು, ಸ್ವಾತಂತ್ರ್ಯ ಹೋರಾಟ ಮಾಡಿ ಅಲ್ಲ, ಭ್ರಷ್ಟಾಚಾರ ಮಾಡಿ ಎಂಬುದು ಎಲ್ಲರಿಗೂ ಗೊತ್ತಿದೆ. ನೀವು ಸಿಎಂ ಸಿದ್ದರಾಮಯ್ಯ ಅವರ ಕುರಿತು ಮಾತನಾಡುವ ಯಾವ ನೈತಿಕತೆ ಹೊಂದಿಲ್ಲ.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಬಿಜೆಪಿ ನಾಯಕರು ರಾಜಭವನದ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರ ಮಾಡುವ ಹುಚ್ಚಾಟ ನಡೆಸಿದ್ದಾರೆ. ಇದನ್ನು ಸಹಿಸಿಕೊಂಡು ಇರಲು ಸಾಧ್ಯವಿಲ್ಲ, ಇದು ಸಾಂಕೇತಿಕ ಹೋರಾಟವಾಗಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಮಾಡಲಾಗುವುದು ಎಂದರು.ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮಾತನಾಡಿದರು.
ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಮಾಲತಿ ನಾಯಕ, ಕೃಷ್ಣಾ ಇಟ್ಟಂಗಿ, ಜ್ಯೋತಿ ಗೊಂಡಬಾಳ, ರೆಡ್ಡಿ ಶ್ರೀನಿವಾಸ ಮೊದಲಾದವರು ಇದ್ದರು.