ಸಾರಾಂಶ
ಕೊಪ್ಪಳ:
ಕೇಂದ್ರ ಸರ್ಕಾರ ಚುನಾವಣೆ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಮತಗಳ್ಳತನ ಮಾಡಿದೆ ಎಂದು ಆರೋಪಿಸಿ, ಮತಗಳ್ಳರೇ ಅಧಿಕಾರ ಬಿಡಿ ಎಂದು ಆಗ್ರಹಿಸಿ ಕಾಂಗ್ರೆಸ್ ವತಿಯಿಂದ ನಗರದ ಅಶೋಕ ವೃತ್ತದಲ್ಲಿ ಗುರುವಾರ ಸಂಜೆ ಮೊಂಬತ್ತಿ ಪ್ರತಿಭಟನೆ ಮಾಡಲಾಯಿತು.ನಗರದ ಪ್ರವಾಸಿ ಮಂದಿರದಿಂದ ಮೆಣದ ಬತ್ತಿ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಅಶೋಕ ವೃತ್ತದ ವರೆಗೂ ತೆರಳಿ, ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ಜಿಟಿಜಿಟಿ ಮಳೆ ಲೆಕ್ಕಿಸದೆ ಕಾಂಗ್ರೆಸ್ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಚುನಾವಣೆ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಮತಗಳ್ಳತನದ ಕುರಿತು ಪ್ರತಿಯೊಂದು ದಾಖಲೆ ನೀಡಿದ್ದರೂ ಚುನಾವಣೆ ಆಯೋಗ ತನಿಖೆಗೆ ಮುಂದಾಗುತ್ತಿಲ್ಲ. ಮತಗಳ್ಳತನ ಪ್ರಜಾಪ್ರಭುತ್ವದ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಕಿಡಿಕಾರಿದರು.ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶಾದ್ಯಂತ ನಡೆದಿರುವ ಮತಗಳ್ಳತನದ ದಾಖಲೆ ಬಿಡುಗಡೆ ಮಾಡಿದ್ದರೂ ಚುನಾವಣೆ ಆಯೋಗ ಆಗಿರುವ ತಪ್ಪಿನ ಬಗ್ಗೆ ಪರಿಶೀಲನೆ ಮಾಡಲು ಮುಂದಾಗಿಲ್ಲ ಎಂದರೇ ಏನರ್ಥ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಕ್ಷೇತ್ರದವೊಂದರಲ್ಲಿ ಮತಗಳ್ಳತನ ಹೇಗೆ ಆಗಿದೆ ಎನ್ನುವುದನ್ನು ಉದಾಹರಣೆ ಸಮೇತ ವಿವರಿಸಿದ್ದಾರೆ. ಆದರೂ ಅದನ್ನು ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಚುನಾವಣಾ ಆಯೋಗ ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಭಯ್ಯಾಪುರ ಮಾತನಾಡಿ, ದೇಶದಲ್ಲಿಯೇ ಇದು ಅತ್ಯಂತ ದುರಂತ. ರಾಹುಲ್ ಗಾಂಧಿ ಅವರು ದಾಖಲೆ ಸಮೇತ ಆರೋಪ ಮಾಡಿದರೂ ಅದನ್ನು ಪರಿಶೀಲಿಸದೆ ಇದ್ದರೇ ಹೇಗೆ ಎಂದು ಕಿಡಿಕಾರಿದರು.ಮತಗಳ್ಳತನ ಎಲ್ಲೆಲ್ಲಿ ಆಗಿದೆ. ಹೇಗೆ ಆಗಿದೆ. ಅದರಿಂದ ದುರ್ಬಳಕೆ ಹೇಗೆ ಆಗಿದೆ. ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಹೇಗೆ ಬೀರಿದೆ ಎನ್ನುವ ಅಂಕಿ-ಸಂಖ್ಯೆ ನೀಡಿದ್ದರೂ ಕೇಂದ್ರ ಸರ್ಕಾರವಾಗಲಿ, ಚುನಾವಣೆ ಆಯೋಗವಾಗಲಿ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದಿಂದಲೇ ಸರ್ಕಾರ ರಚನೆಯಾಗುತ್ತದೆ. ಮತದಾರರಿಗೆ ಇರುವ ಬಹುದೊಡ್ಡ ಅಧಿಕಾರ ಅದು. ಹೀಗಿರುವಾಗ ಅದನ್ನೇ ಕಳ್ಳತನವಾದರೇ ಹೇಗೆ ಎಂದು ಪ್ರಶ್ನೆ ಮಾಡಿದರು.ಕೇಂದ್ರದಲ್ಲಿ ಜನರಿಂದ ಆಯ್ಕೆಯಾಗಲು ಆಗದ ಬಿಜೆಪಿ ಚುನಾವಣೆ ಆಯೋಗದ ಮೂಲಕ ಮತಗಳ್ಳತನ ಮಾಡುವ ಮೂಲಕ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದರು.
ಈ ವೇಳೆ ಸಂಸದ ಸಂಗಣ್ಣ ಕರಡಿ, ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಕಾಟನ ಪಾಶಾ, ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಕಿಶೋರಿ ಬುದನೂರು, ಮಾಲತಿ ನಾಯಕ, ರವಿ ಕುರಗೋಡ, ಜ್ಯೋತಿ ಗೊಂಡಬಾಳ, ಸುರೇಶ ದಾಸರಡ್ಡಿ, ಸಲೀಂ ಅಳವಂಡಿ ಸೇರಿದಂತೆ ಅನೇಕರು ಇದ್ದರು.