ವಿಶೇಷ ತೀವ್ರ ಮತದಾರರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕುರಿತು ಅನುಮಾನ ವ್ಯಕ್ತಪಡಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಕೊಪ್ಪಳ: ವಿಶೇಷ ತೀವ್ರ ಮತದಾರರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕುರಿತು ಅನುಮಾನ ವ್ಯಕ್ತಪಡಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಜ್ಞಾನೇಶ್ ಕುಮಾರ್ ಅವರ ಪ್ರತಿಕೃತಿ ದಹಿಸಲು ಮುಂದಾದಾಗ ಪೊಲೀಸರು ತಡೆದರು. ಬಳಿಕ ಪ್ರತಿಕೃತಿಯನ್ನು ಪ್ರತಿಭಟನಾ ಸ್ಥಳದಿಂದ ಬೇರೆಡೆ ಕೊಂಡೊಯ್ಯಲಾಯಿತು.ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಚುನಾವಣಾ ಆಯುಕ್ತರ ರಾಜೀನಾಮೆ ಮಾತ್ರ ಕೇಳಿದರೆ ಸಾಲದು. ಚುನಾವಣಾ ವ್ಯವಸ್ಥೆಯ ಮೇಲೆಯೇ ಅನುಮಾನಗಳು ಮೂಡಿರುವಾಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಮತದಾರರ ಹಕ್ಕು ಕಸಿಯುವಂತಾಗಬಾರದು: ಎಸ್‌ಐಆರ್ ಹೆಸರಿನಲ್ಲಿ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈತಪ್ಪುವ ಆತಂಕವಿದೆ ಎಂದು ತಂಗಡಗಿ ಆರೋಪಿಸಿದರು. ಕಾಂಗ್ರೆಸ್ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗುತ್ತಿದೆ ಎಂಬ ಅನುಮಾನವನ್ನು ಹಿಂದಿನಿಂದಲೂ ವ್ಯಕ್ತಪಡಿಸುತ್ತಿದ್ದೇವೆ. ಬಿಜೆಪಿ ಶಾಸಕರೊಬ್ಬರು ತಮಗೆ ಬೇಡವಾದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವಂತೆ ಪತ್ರ ಬರೆದಿದ್ದಾರೆ ಎನ್ನಲಾಗಿರುವುದು ಈ ವಿಚಾರಕ್ಕೆ ಮತ್ತಷ್ಟು ಅನುಮಾನ ಮೂಡಿಸಿದೆ ಎಂದರು.ಚುನಾವಣಾ ಆಯೋಗ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಎಸ್‌ಐಆರ್ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಾರ್ವಜನಿಕರಲ್ಲಿ ಮೂಡಿರುವ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರ ಪಾರದರ್ಶಕ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದು: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ತಂಗಡಗಿ, ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ರಾಮನ ಹುಂಡಿಗೂ ಕೈ ಹಾಕಿದ್ದಾರೆ. ಮುಂದೆ ರಾಮನನ್ನೇ ಬಿಜೆಪಿಯವರು ಕದ್ದರು ಎಂದು ಹೇಳುವ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ ಎಂದು ಟೀಕಿಸಿದರು.ಅಭಿವೃದ್ಧಿ ವಿಚಾರದಲ್ಲಿ ಮಾತನಾಡಲು ವಿಷಯವಿಲ್ಲದೆ ಬಿಜೆಪಿ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಗಮನ ಬೇರೆಡೆ ಸೆಳೆಯುತ್ತಿದೆ ಎಂದು ಆರೋಪಿಸಿದರು.
ಜ್ಞಾನೇಶ್ ದಲಿತರಾದರೆ ನಾಗೇಂದ್ರ ಏನು?: ಬಿಜೆಪಿ ಸಂಸದ ಗೋವಿಂದ ಕಾರಜೋಳ ಅವರು ಜ್ಞಾನೇಶ್ ಕುಮಾರ್ ದಲಿತರು ಎಂಬ ಕಾರಣಕ್ಕೆ ಕಾಂಗ್ರೆಸ್ ಆರೋಪ ಮಾಡುತ್ತಿದೆ ಎಂದು ಹೇಳಿರುವುದು ಸರಿಯಲ್ಲ. ಹಾಗಾದರೆ ನಾಗೇಂದ್ರ ಅವರು ಏನು? ಅವರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದೇಕೆ? ಎಂದು ಪ್ರಶ್ನಿಸಿದ ತಂಗಡಗಿ, ದಲಿತರನ್ನು ಬಲಿಪಶು ಮಾಡಲಾಗಿದೆ ಎಂಬ ಆರೋಪಗಳಿಗೆ ಬಿಜೆಪಿ ಉತ್ತರಿಸಬೇಕು ಎಂದರು.ಚುನಾವಣೆ ವ್ಯವಸ್ಥೆ ಪಾರದರ್ಶಕವಾಗಲಿ: ಮಾಜಿ ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿ, ಚುನಾವಣಾ ವ್ಯವಸ್ಥೆಯಲ್ಲಿ ಮತದಾರರ ವಿಶ್ವಾಸ ಅತ್ಯಂತ ಮುಖ್ಯ. ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದ್ದು, ಅದನ್ನು ಕಸಿಯುವಂತಹ ಯಾವುದೇ ಕ್ರಮಕ್ಕೆ ಅವಕಾಶ ಇರಬಾರದು. ಎಸ್‌ಐಆರ್ ಕುರಿತು ಇರುವ ಅನುಮಾನಗಳನ್ನು ನಿವಾರಿಸಿ, ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ಎಸ್.ಬಿ. ನಾಗರಳ್ಳಿ, ಯಂಕಣ್ಣ ಯರಾಶಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಗೂಳಪ್ಪ ಹಲಿಗೇರಿ, ಜ್ಯೋತಿ ಗೊಂಡಬಾಳ, ಕೃಷ್ಣಾರಡ್ಡಿ ಗಲಬಿ, ಕೃಷ್ಣ ಇಟ್ಟಂಗಿ, ಗಾಳೆಪ್ಪ ಪೂಜಾರ, ಕಾಟನ್ ಪಾಷಾ ಪಾಲ್ಗೊಂಡಿದ್ದರು.