ಕಲ್ಲೇಸೋಮನಹಳ್ಳಿ ಏತ ನೀರಾವರಿ ಯಶಸ್ಸಿಗೆ ಕಾಂಗ್ರೆಸ್ ಕಾರಣ: ಗೋಪಾಲಸ್ವಾಮಿ

| Published : Sep 14 2025, 01:04 AM IST

ಕಲ್ಲೇಸೋಮನಹಳ್ಳಿ ಏತ ನೀರಾವರಿ ಯಶಸ್ಸಿಗೆ ಕಾಂಗ್ರೆಸ್ ಕಾರಣ: ಗೋಪಾಲಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಯೋಜನೆಗೆ ಮೊದಲು ಜೀವ ಬಂದಿದ್ದು ರಾಮಕೃಷ್ಣ ಹೆಗ್ಗಡೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ರಾಜಕೀಯ ಕಾರಣಗಳಿಂದ ಯೋಜನೆ ಮೂಲೆಗುಂಪಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಯೋಜನೆ ಪರಿಪೂರ್ಣವಾಗಿದ್ದು, ಪ್ರಾರಂಭದಲ್ಲೇ ಎಂ.ಶಿವರ ಕೆರೆ ತುಂಬಿದೆ .

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಕಲ್ಲೇಸೋಮನಹಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಂಡು ಯಶಸ್ವಿಯಾಗಲು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಮಾಜಿ ಶಾಸಕ ಎಂ.ಎ. ಗೋಪಾಲಸ್ವಾಮಿ ತಿಳಿಸಿದರು.

ಅವರು ತಾಲೂಕಿನ ಬಾಗೂರು ಹೋಬಳಿಯ ಎಂ. ಶಿವರ ಗ್ರಾಮದ ಕೆರೆ ಸಂಪೂರ್ಣವಾಗಿ ತುಂಬಿದ ಹಿನ್ನೆಲೆ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಏರ್ಪಡಿಸಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಯೋಜನೆಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಬಾರ್ಡ್ ನೆರವಿನೊಂದಿಗೆ ಸುಮಾರು ? ೩೫ ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೀರಾವರಿ ಸಚಿವರಾಗಿದ್ದ ಎಂ.ಬಿ. ಪಾಟೀಲ್ ಅವರಿಗೆ ನನ್ನನ್ನು ಸೇರಿ ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡರು ಹಾಗೂ ಈ ಭಾಗದ ರೈತರು ರೈತ ಸಂಘದ ಮುಖಂಡರು ಒತ್ತಡ ತರುವ ಮೂಲಕ ಈ ಯೋಜನೆ ಅನುಷ್ಠಾನಕ್ಕೆ ಬಂದಿದೆ ಎಂದರು.

ಕ್ಷೇತ್ರದ ಜೆಡಿಎಸ್ ಶಾಸಕರು ನೀರಾವರಿ ವಿಚಾರದಲ್ಲಿ ಸುಳ್ಳು ಹೇಳುವ ಮೂಲಕ ತಾಲೂಕಿನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಆಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೀರಾವರಿ ಸಚಿವರಾದ ಮೇಲೆ ಯೋಜನೆಗೆ ಹೆಚ್ಚಿನ ಬಲ ತುಂಬಿ ಅನುದಾನ ನೀಡಿದ್ದಾರೆ. ಅವರು ಸ್ವಂತವಾಗಿ ತಾಲೂಕಿನಲ್ಲಿ ಒಂದು ನೀರಾವರಿ ಯೋಜನೆಯನ್ನೂ ಹೊಸದಾಗಿ ತಂದಿಲ್ಲ ಎಂದು ಟೀಕಿಸಿದರು.

ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡ ಮಾತನಾಡಿ, ಈ ಯೋಜನೆಗೆ ಮೊದಲು ಜೀವ ಬಂದಿದ್ದು ರಾಮಕೃಷ್ಣ ಹೆಗ್ಗಡೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ರಾಜಕೀಯ ಕಾರಣಗಳಿಂದ ಯೋಜನೆ ಮೂಲೆಗುಂಪಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಯೋಜನೆ ಪರಿಪೂರ್ಣವಾಗಿದ್ದು, ಪ್ರಾರಂಭದಲ್ಲೇ ಎಂ.ಶಿವರ ಕೆರೆ ತುಂಬಿದೆ ಎಂದರು.

ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣತಿ ಆನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜತ್ತೇನಹಳ್ಳಿ ರಾಮಚಂದ್ರು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ. ಎ. ಮಂಜೇಗೌಡ, ರಾಜ್ಯ ವಿದ್ಯುತ್ ಕಾರ್ಖಾನೆ ನಿಗಮದ ಅಧ್ಯಕ್ಷ ಲಲಿತ ರಾಘವ ದೀಪು ಮಾತನಾಡಿದರು. ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ತೆಂಕನಹಳ್ಳಿ ಎಂ. ಶಂಕರ್, ಯುವ ಕಾಂಗ್ರೆಸ್ ಮುಖಂಡರಾದ ಯುವರಾಜ್, ದಿಂಡಗೂರು ಆನಂದ್, ಜೆ.ಕೆ. ಮಂಜುನಾಥ್, ಕೃಷಿ ಪತ್ತಿನ ನಿರ್ದೇಶಕ ತಿಮ್ಮಪ್ಪ ಗೌಡ, ಜಗದೀಶ್ ಸೇರಿ ರೈತ ಸಂಘದ ಮುಖಂಡರು ಗ್ರಾಮಸ್ಥರು ಹಾಜರಿದ್ದರು.