ಕನ್ನಡಪ್ರಭ ವಾರ್ತೆ ಬಾಗಲಕೋಟೆ1975 ಜೂನ 25 ದೇಶದ ಪ್ರಜಾಪ್ರಭುತ್ವದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯ. ತುರ್ತು ಪರಿಸ್ಥಿತಿ ಹೇರಿದ ದಿನ. ತಮ್ಮ ಸ್ವಾರ್ಥ ಅಧಿಕಾರದ ಹಪಾಹಪಿಗೆ ಅಂದಿನ ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ ಅಪಚಾರ ಬಗೆದು, ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿತು ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

1975 ಜೂನ 25 ದೇಶದ ಪ್ರಜಾಪ್ರಭುತ್ವದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯ. ತುರ್ತು ಪರಿಸ್ಥಿತಿ ಹೇರಿದ ದಿನ. ತಮ್ಮ ಸ್ವಾರ್ಥ ಅಧಿಕಾರದ ಹಪಾಹಪಿಗೆ ಅಂದಿನ ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ ಅಪಚಾರ ಬಗೆದು, ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿತು ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಶಿವಾನಂದ ಜಿನನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ತುರ್ತು ಪರಿಸ್ಥಿತಿಯ ಕರಾಳ ದಿನದ ಆಚರಣೆಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ಸೆರೆವಾಸ ಅನುಭವಿಸಿದ ಹಿರಿಯರಿಗೆ ಗೌರವ ಸನ್ಮಾನ ನೆರವೇರಿಸಿ ಮಾತನಾಡಿದರು.

ಜೂನ್ 25, 1975ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಸಲಹೆ ಮೇರೆಗೆ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು. ಆಂತರಿಕ ಭದ್ರತೆ ನೆಪದಲ್ಲಿ ಹೇರಲಾದ ಈ ತುರ್ತು ಪರಿಸ್ಥಿತಿಯು ಸುಮಾರು 21 ತಿಂಗಳ ಕಾಲ ಮುಂದುವರೆಯಿತು.

ಈ ಅವಧಿಯಲ್ಲಿ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲಾಯಿತು, ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲಾಯಿತು. ಲಕ್ಷಾಂತರ ರಾಜಕೀಯ ನಾಯಕರು ಹಾಗೂ ಕಾರ್ಯಕರ್ತರನ್ನು ಜೈಲಿನಲ್ಲಿ ಇರಿಸಲಾಯಿತು. ಇದು ಕಾಂಗ್ರೆಸ್ ಮಾಡಿದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದ ಅವರು, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಡಿದ ಎಲ್ಲ ಮಹನೀಯರ ಧೈರ್ಯ, ತ್ಯಾಗ ಮತ್ತು ಬಲಿದಾನಗಳಿಗೆ ಗೌರವಪೂರ್ವಕ ಪ್ರಣಾಮಗಳನ್ನು ತಿಳಿಸಿದರು.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿದರು. ತುರ್ತು ಪರಿಸ್ಥಿತಿಯಲ್ಲಿ ಸೆರೆವಾಸ ಅನುಭವಿಸಿದ ಬಾಗಲಕೋಟೆಯ ಹಿರಿಯರಾದ ಕಲ್ಲಪ್ಪ ಡಂಗೆ, ರಾಮಣ್ಣ ಬಾರಕೇರ, ವಿಠ್ಠಲ್ ಸಾಳುಂಕೆ, ಗುಂಡುರಾವ ಶಿಂಧೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸೆರೆವಾಸ ಅನುಭವಿಸಿದ ಗುಂಡು ಶಿಂಧೆ ಮಾತನಾಡಿದರು.

ಮಹೇಶ ಅಥಣಿ, ಬಸವರಾಜ ಯಂಕಂಚಿ, ಡಾ.ಎಂ.ಎಸ್.ದಡ್ಡೆನ್ನವರ, ಮುತ್ತಣ್ಣ ಬೇಣ್ಣೂರ, ಬಸವರಾಜ ಹುನಗುಂದ, ಸತ್ಯನಾರಾಯಣ ಹೆಮಾದ್ರಿ, ಶಿವಾನಂದ ಟವಳಿ, ದುಂಡಪ್ಪ ಏಳಮ್ಮಿ, ಸುರೇಶ ಮಜ್ಜಿಗಿ, ಶಶಿಕಲಾ ಮಜ್ಜಗಿ, ಶಿವಲೀಲಾ ಸಂಬಣ್ಣವರ, ಜ್ಯೋತಿ ಚವ್ಹಾಣ, ನಾಗರತ್ನ ಹಡಗಲಿ, ವಿಜಯಲಕ್ಷ್ಮಿ ಭದ್ರಶೆಟ್ಟಿ, ರವಿ ಧಾಮಜಿ, ಶ್ರೀಧರ ನಾಗರಬೇಟ್ಟ, ಗಿರೀಶ ಬಾಂಡಗೆ, ರಾಜು ತಾಳಿಕೋಟಿ ಇತರರು ಪಾಲ್ಗೊಂಡಿದ್ದರು.

ಒಂದು ಕೋಟಿಗೂ ಅಧಿಕ ಜನರ ಮೇಲೆ ಬಲವಂತದ ಸಂತಾನಹರಣ ಶಸ್ತ್ರಚಿಕಿತ್ಸೆ, ಲಕ್ಷಕ್ಕೂ ಹೆಚ್ಚು ರಾಜಕೀಯ ಮುಖಂಡರು ಹಾಗೂ ಕಾರ್ಯಕರ್ತರ ಬಂಧನ ಮತ್ತು ಪತ್ರಿಕಾ ಸ್ವಾತಂತ್ರ್ಯದ ಹರಣದಂತಹ ಭಯಾನಕ ದೌರ್ಜನ್ಯಗಳನ್ನು ಇತಿಹಾಸ ಎಂದಿಗೂ ಮರೆಯುವುದಿಲ್ಲ. ದೇಶದ ಜನತೆ ಈ ಪ್ರಮಾದವನ್ನು ಎಂದಿಗೂ ಕ್ಷಮಿಸುವುದಿಲ್ಲ. ಬಿಜೆಪಿಯವರು ನಿಜವಾದ ಸಂವಿಧಾನ ರಕ್ಷಕರು.-ನಾರಾಯಣಸಾ ಭಾಂಡಗೆ, ರಾಜ್ಯಸಭಾ ಸದಸ್ಯ