ರಾಮನಗರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮತ್ತು ವೋಟ್ ಚೋರಿ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸಿರುವ ಕಮ್ಯೂನಿಸ್ಟ್ ಪಕ್ಷಗಳು ಮತ್ತು ರಾಷ್ಟ್ರ ವಿರೋಧಿ ಸಂಘಟನೆಗಳು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿದ್ದು, ಇದಕ್ಕೆ ಬಿಜೆಪಿ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ತಿಳಿಸಿದರು

ರಾಮನಗರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮತ್ತು ವೋಟ್ ಚೋರಿ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸಿರುವ ಕಮ್ಯೂನಿಸ್ಟ್ ಪಕ್ಷಗಳು ಮತ್ತು ರಾಷ್ಟ್ರ ವಿರೋಧಿ ಸಂಘಟನೆಗಳು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿದ್ದು, ಇದಕ್ಕೆ ಬಿಜೆಪಿ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 12ನೇ ಬಾರಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಕಾಂಗ್ರೆಸ್ ನಾಯಕತ್ವದ ವೈಫಲ್ಯವನ್ನು ಎಸ್‌ಐಆರ್ ಮೇಲೆ ಹೊರೆಸಿ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಇದರ ವಿರುದ್ಧ ಬಿಜೆಪಿ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಆಂದೋಲನ ಕೈಗೊಳ್ಳುತ್ತಿದೆ ಎಂದರು.

ನಿಧನರಾದವರ ಹೆಸರು ಕೈಬಿಡುವುದು, ಸ್ಥಳಾಂತರವಾದವರ ಬದಲಾವಣೆ ಎಸ್‌ಐಆರ್ ಸಹಜ ಪ್ರಕ್ರಿಯೆ. ಇದನ್ನು ಯಾವುದೇ ಸರ್ಕಾರಿ ಅಧಿಕಾರಿಗಳು ಮಾಡುವುದಿಲ್ಲ. ಪ್ರತಿ ಮತಗಟ್ಟೆಗೆ ನಿಯೋಜಸಿರುವ ನೋಂದಾಯಿತ ರಾಜಕೀಯ ಪಕ್ಷಗಳ ಬಿಎಲ್‌ಒ -2 ಜೊತೆಗೆ ಓರ್ವ ಕಂದಾಯ ಅಧಿಕಾರಿ ಸಮ್ಮುಖದಲ್ಲಿ ಪಾರದರ್ಶಕವಾಗಿ ಈ ಪ್ರಕ್ರಿಯೆ ನಡೆಯುತ್ತದೆ. ಹೀಗಿರುವಾಗ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಈಗಾಗಲೇ ಪಶ್ಚಿಮ ಬಂಗಾಳ, ಬಿಹಾರ, ಕೇರಳ ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಗಿದಿದೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗಲೇ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹೇಗೆ ಭಾಗವಹಿಸಬೇಕೆಂದು ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಆ ಪಕ್ಷದ ನಾಯಕರಿಗೆ ವಿವರಿಸಿದ್ದರು. ಕಾಂಗ್ರೆಸ್ ಆಡಳಿತವಿರುವ ಕೇರಳದ ಮುಖ್ಯಮಂತ್ರಿಗಳೇ ಎಸ್‌ಐಆರ್ ಒಪ್ಪಿಕೊಂಡಿದ್ದಾರೆ. ರಾಹುಲ್‌ಗಾಂಧಿ ಅವರ ಕಾರಣಕ್ಕಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು.

ಈಗ ಎಸ್‌ಐಆರ್ ಮೂಲಕ ದೇಶದಲ್ಲಿ 12 ಕೋಟಿ ಮತ್ತು ಕರ್ನಾಟಕದಲ್ಲಿ 57 ಲಕ್ಷ ಮತದಾರರನ್ನು ಕೈಬಿಟ್ಟಿದ್ದಾರೆ. ದೇಶದಲ್ಲಿ ರಾಜಕಾರಣ ಬದಲಾವಣೆ ಮಾಡಲು ಹೋರಾಟದ ನೇತೃತ್ವ ವಹಿಸಿದವರು ರೆಜಿಮ್ ಚೇಂಜ್ ಮಾತುಗಳನ್ನು ಆಡುತ್ತಿದ್ದಾರೆ. ಇದಕ್ಕಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಅಪಪ್ರಚಾರ ಮಾಡಿ ಅರಾಜಕತೆ ಸೃಷ್ಟಿಸಲು ಹೊರಟಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ನಾಯಕರು ಪ್ರತಿಯೊಂದು ವಿಚಾರಕ್ಕೂ ಸಾಂವಿಧಾನಿಕ ಸಂಸ್ಥೆಗಳಾದ ಚುನಾವಣಾ ಆಯೋಗ, ಸಿಬಿಐ, ಐಟಿ, ಇಡಿ ವಿರುದ್ಧ ಅಪಪ್ರಚಾರ ಮಾಡುತ್ತಾ ಜನರ ಮುಂದೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಹೊರಟಿದ್ದಾರೆ. ಮುಂದಿನ ವರ್ಷ ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಜನರೇ ಕಾಂಗ್ರೆಸ್‌ಗೆ ಬುದ್ಧಿ ಕಲಿಸುತ್ತಾರೆ ಎಂದು ಅಶ್ವತ್ಥ ನಾರಾಯಣಗೌಡ ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ರೆಜಿಮ್ ಚೇಂಜ್ ಆಗಬೇಕು :

ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಮತಪಟ್ಟಿ ಪರಿಷ್ಕರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಎಸ್‌ಐಆರ್ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಈಗಾಗಲೇ ಮೂವರು ಚುನಾವಣಾ ಆಯುಕ್ತರು ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದರೆ ಎಲ್ಲವೂ ಸರಿ, ಸೋತರೆ ವೋಟ್ ಚೋರಿ ಎನ್ನುವುದು ಕಾಂಗ್ರೆಸ್ ಮನಸ್ಥಿತಿ. ಆ ಪಕ್ಷದ ನಾಯಕರು ಪ್ರತಿ ದಿನ ಸುಳ್ಳು ಹೇಳಿಕೊಂಡು ಅದನ್ನು ಸತ್ಯ ಮಾಡಲು ಹೊರಟಿದ್ದಾರೆ ಎಂದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ,ರಾಮನಗರ ಮಂಡಲ ಅಧ್ಯಕ್ಷ ಗೌತಮ್ ಗೌಡ, ಮಾಗಡಿ ಮಂಡಲ ಅಧ್ಯಕ್ಷ ಪ್ರಸಾದ್ ಗೌಡ, ಪರಿಷತ್ ಸದಸ್ಯ ಆರ್.ವಿ.ಸುರೇಶ್, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಕಾಳಯ್ಯ, ನಗರ ಘಟಕ ಅಧ್ಯಕ್ಷ ಚಂದನ್ ಮೋರೆ, ಮುಖಂಡರಾದ ಜಿ.ವಿ. ಪದ್ಮನಾಭ್ , ರುದ್ರದೇವರು, ಸಿದ್ದು, ಜೆಡಿಎಸ್ ಮುಖಂಡರಾದ ಜಯಕುಮಾರ್, ಚನ್ನಪ್ಪ, ಕೆಂಪರಾಜು, ಚಂದ್ರಶೇಖರ್, ಚೇತನ್, ಶಿವಮುತ್ತು ರಾಮಕೃಷ್ಣಯ್ಯ, ಲೋಕೇಶ್, ಮಹಾದೇವ್ ಇತರರಿದ್ದರು.

ಕೋಟ್ ..............

ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ದೇಶದ 22 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಇಲ್ಲ. ಆಗ ಜ್ಞಾನೇಶ್ ಕುಮಾರ್ ಮುಖ್ಯ ಚುನಾವಣಾ ಆಯುಕ್ತರಾಗಿರಲಿಲ್ಲ. ಎಸ್‌ಐಆರ್ ಗಿಂತ ಮೊದಲೂ ಕಾಂಗ್ರೆಸ್ ಸೋಲುತ್ತಲೇ ಬಂದಿದೆ. ಕಾಂಗ್ರೆಸ್ ನಾಯಕತ್ವದ ವೈಫಲ್ಯ ಚುನಾವಣಾ ಆಯೋಗದ ಮೇಲೆ ಹೊರಿಸಲಾಗುತ್ತಿದೆ.

- ಅಶ್ವತ್ಥ ನಾರಾಯಣಗೌಡ, ರಾಜ್ಯ ಮುಖ್ಯ ವಕ್ತಾರರು, ಬಿಜೆಪಿ

ಕೋಟ್ ...........

ದೇಶದಲ್ಲಿ ನಡೆದ 28 ವಿಧಾನ ಪರಿಷತ್ ಸ್ಥಾನಗಳಲ್ಲಿ ಪ್ರಬುದ್ಧ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಥಾನವನ್ನೂ ನೀಡಿಲ್ಲ. ಕರ್ನಾಟಕದಲ್ಲೂ 4 ವಿಧಾನ ಪರಿಷತ್ ಸ್ಥಾನಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಬ್ಯಾಲೆಟ್ ಪೇಪರ್‌ನಲ್ಲೇ ಚುನಾವಣೆ ನಡೆದಿದೆ. ಆದರೂ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆ.

- ಡಾ.ಸಿ.ಎನ್.ಮಂಜುನಾಥ್, ಸಂಸದರು

29ಕೆಆರ್ ಎಂಎನ್ 1.ಜೆಪಿಜಿ

ರಾಮನಗರದಲ್ಲಿ ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥ್ ನಾರಾಯಣಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.