ಸಾರಾಂಶ
ವಿಜಯಪುರ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಬಿಜೆಪಿಯಲ್ಲಿನ ಒಳಜಗಳವೇ ಕಾರಣ. ನಾವು ಮೈಮರೆತಿದ್ದರಿಂದ ಅವರು ಅಧಿಕಾರಕ್ಕೆ ಬಂದಿದ್ದಾರೆ. ಈಗಲೂ ಅವರ ದುರಾಡಳಿತವನ್ನು ಖಂಡಿಸುವಂತಹ ಕೆಲಸ ಮಾಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.
ಪಟ್ಟಣದ ಬೈಪಾಸ್ ರಸ್ತೆಯಲ್ಲಿ, ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ದೇವನಹಳ್ಳಿ ಮಂಡಲದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಸಂಘಟನಾ ಪರ್ವ-2025 ಬೂತ್ ಸಮಿತಿ ಸಭೆ, 121ನೇ ಮನ್ ಕೀ ಬಾತ್ ವೀಕ್ಷಣೆ ಕಾರ್ಯಕ್ರಮದಲ್ಲಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ, ಅವರು ಮಾತನಾಡಿದರು. ಪಕ್ಷದ ಕಾರ್ಯಕರ್ತರು ಒಗ್ಗಟ್ಟು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
ರಾಜ್ಯದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ನಾವು ಇಂದಿಗೂ ಖಂಡಿಸದಿದ್ದರೆ, ನಾವು ಜನರಿಗೆ ಮೋಸ ಮಾಡಿದವರಾಗುತ್ತೇವೆ. ಪಕ್ಷದಲ್ಲಿ ಒಗ್ಗಟ್ಟು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಮಾಧ್ಯಮಗಳಲ್ಲಿ ಮುಖ ಕಾಣಿಸಬೇಕೆನ್ನುವ ಕಾರಣಕ್ಕೆ, ಕೆಲವು ನಾಯಕರು, ಸಿಕ್ಕಾಪಟ್ಟೆ ಮಾತನಾಡುತ್ತಿರುತ್ತಾರೆ. ಇದೇ ಸಮಯವನ್ನು ಪಕ್ಷ ಕಟ್ಟುವುದಕ್ಕಾಗಿ ಉಪಯೋಗ ಮಾಡಿದರೆ, ಪಕ್ಷ ಮತ್ತಷ್ಟು ಸದೃಢವಾಗುತ್ತದೆ. ಭಾರತವನ್ನು ಸಂರಕ್ಷಣೆ ಮಾಡಲು ಬಿಜೆಪಿಯಿಂದ ಮಾತ್ರವೇ ಸಾಧ್ಯವಾಗುತ್ತದೆ.
ಈಗಾಗಲೇ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ನಡುಕ ಶುರುವಾಗಿದೆ. ಅವರ ಮೇಲೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೋ ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಳ್ಳುತ್ತಿದ್ದಾರೆ. ಅವರ ಕಾರ್ಯವೈಖರಿಗೆ ಇಡೀ ದೇಶವೇ ಬೆನ್ನೆಲುಬಾಗಿ ನಿಂತಿದೆ. ಮುಂದಿನ ಚುನಾವಣೆಯಲ್ಲಿ ದೇವನಹಳ್ಳಿಯಲ್ಲಿ ಬಿಜೆಪಿಯ ಬಾವುಟ ಹಾರಬೇಕು. ಕಮಲ ಹರಳುವುದನ್ನು ನಾವು ನೋಡಬೇಕು. ಪಕ್ಷದ ಕಾರ್ಯಕರ್ತರು, ಬೂತ್ ಮಟ್ಟದಲ್ಲಿ ಕೈಗೊಳ್ಳಬೇಕಾಗಿರುವ ಕಾರ್ಯಕ್ರಮಗಳನ್ನು ಚಾಚೂ ತಪ್ಪದೆ ಮಾಡುವವರಾಗಬೇಕು ಎಂದರು.
ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್ ಮಾತನಾಡಿ, ಸಂಘಟನಾ ಪರ್ವ-2025 ಕಾರ್ಯಕ್ರಮದ ಮೂಲಕ ಪಕ್ಷದ ಕಾರ್ಯಕರ್ತರನ್ನು ಬಲಪಡಿಸುವಂತಹ ಕೆಲಸ ಮಾಡುತ್ತಿದ್ದೇವೆ. ಪ್ರಧಾನಮಂತ್ರಿ ನರೇಂದ್ರಮೋದಿ ಅವರು, ತಿಳಿಸಿಕೊಟ್ಟಿರುವ ಎಲ್ಲಾ ವಿಚಾರಗಳನ್ನು ಮನದಟ್ಟು ಮಾಡಿಕೊಂಡು, ಬೂತ್ ಮಟ್ಟದಿಂದ ಸಂಘಟನೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸರ್ಕಾರದ ವೈಫಲ್ಯಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಎನ್.ಎನ್.ಅಂಬರೀಶ್ ಗೌಡ ಮಾತನಾಡಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದು, ಪಕ್ಷಕ್ಕಾಗಿ ನಿಷ್ಟೆಯಿಂದ, ಪ್ರಾಮಾಣಿಕತೆಯಿಂದ ದುಡಿಯುವಂತಹ ಕಾರ್ಯಕರ್ತರನ್ನು ಗುರ್ತಿಸಿ, ಅವರಿಗೆ ಜವಾಬ್ದಾರಿಗಳನ್ನು ಹಂಚುವಂತಹ ಕೆಲಸವನ್ನು ನಾವೆಲ್ಲರೂ ಮಾಡಲಿದ್ದೇವೆ. ಬೂತ್ ಮಟ್ಟದಿಂದಲೇ ಪಕ್ಷವನ್ನು ಸಂಘಟಿಸಿ, ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲೂ ಉತ್ತಮ ಸಾಧನೆ ಮಾಡುತ್ತೇವೆ.
ಮುಖಂಡರಾದ ಮಾಜಿ ಶಾಸಕ ಜಿ.ಚಂದ್ರಣ್ಣ, ನಾರಾಯಣಗೌಡ, ಓಬದೇನಹಳ್ಳಿ ಮುನಿಯಪ್ಪ, ದೇ.ಸು.ನಾಗರಾಜ್, ಆರ್.ಕೆ.ನಂಜೇಗೌಡ, ವೆಂಕಟೇಶ್ ಪ್ರಭು, ರಾಮಕೃಷ್ಣ ಹೆಗಡೆ, ರಾಮುಭಗವಾನ್, ರವಿಕುಮಾರ್, ಧರ್ಮಪುರ ಅನಿಲ್ ಕುಮಾರ್, ಜೆ.ಎಸ್.ರಾಮಚಂದ್ರಪ್ಪ, ಪುನೀತಾ, ವೀಣಾಶ್ರೀನಿವಾಸ್, ರಾಘವ, ಗಿರೀಶ್, ಸಂದೀಪ್, ಅಶ್ವಥಗೌಡ, ಪ್ರೇಮಾದೇವರಾಜ್, ದಿನೇಶ್,ಚಂದನ್, ಸಾಗರ್, ನಿರಂಜನ್, ಸುಜನ್, ಮಂಜುನಾಥ್, ಶಾಮಣ್ಣ, ಗೋವಿಂದರಾಜು, ಮುಂತಾದವರು ಹಾಜರಿದ್ದರು.
ಸಿದ್ದರಾಮಯ್ಯ ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಶತ್ರು ರಾಷ್ಟ್ರ ಪಾಕಿಸ್ತಾನದೊಂದಿಗೆ ಯುದ್ಧಬೇಡ ಎಂದು ಹೇಳುವ ಮೂಲಕ ಅವರು ಒಂದು ಸಮುದಾಯಕ್ಕೆ ಹತ್ತಿರವಾಗಬಹುದು. ಆದರೆ, ಭಾರತೀಯರ ಹೃದಯದಿಂದ ದೂರವಾಗುತ್ತಾರೆ. ಸಿದ್ದರಾಮಯ್ಯ ಅವರ ಮನೆಯಲ್ಲಿ ಯಾರನ್ನಾದರೂ ಸುಟ್ಟಿದ್ದರೆ, ಅವರಿಗೆ ನೋವು ಅರ್ಥವಾಗುತ್ತಿತ್ತು.
ಸದಾನಂದಗೌಡ, ಮಾಜಿ ಸಿಎಂ