ಕಾಂಗ್ರೆಸ್‌ನ ಕಪಟ ನೀತಿಯ ಅಸಲಿ ಮುಖ ಬಯಲಾಗಿದೆ: ಶಾಸಕ ಚನ್ನಬಸಪ್ಪ

| Published : Jul 03 2025, 11:49 PM IST

ಕಾಂಗ್ರೆಸ್‌ನ ಕಪಟ ನೀತಿಯ ಅಸಲಿ ಮುಖ ಬಯಲಾಗಿದೆ: ಶಾಸಕ ಚನ್ನಬಸಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಆರ್ಥಿಕ ಹಗರಣದ ಪಾರದರ್ಶಕ ತನಿಖೆಗೆ ಹೈಕೋರ್ಟ್ ಸಿಬಿಐಗೆ ನೀಡಿರುವುದು ಸ್ವಾಗತಾರ್ಹ ಮತ್ತು ನ್ಯಾಯದ ದಿಕ್ಕಿನಲ್ಲಿ ನಡೆದಿರುವ ಮಹತ್ವದ ಹೆಜ್ಜೆಯಾಗಿದೆ ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಆರ್ಥಿಕ ಹಗರಣದ ಪಾರದರ್ಶಕ ತನಿಖೆಗೆ ಹೈಕೋರ್ಟ್ ಸಿಬಿಐಗೆ ನೀಡಿರುವುದು ಸ್ವಾಗತಾರ್ಹ ಮತ್ತು ನ್ಯಾಯದ ದಿಕ್ಕಿನಲ್ಲಿ ನಡೆದಿರುವ ಮಹತ್ವದ ಹೆಜ್ಜೆಯಾಗಿದೆ ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ತಿಳಿಸಿದ್ದಾರೆ.

ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅವರು, ಈ ಮೂಲಕ ಸುಮಾರು 87 ಕೋಟಿ ರು. ದುರುಪಯೋಗದ ಒತ್ತಡಕ್ಕೆ ಬಲಿಯಾಗಿದ್ದ ಶಿವಮೊಗ್ಗದ ನಿವಾಸಿ ಚಂದ್ರಶೇಖರನ್ ಅವರ ಸಾವಿಗೆ ನ್ಯಾಯ ಕೊಡಿಸುವ ಕಾರ್ಯಕ್ಕೆ ಜಯ ಸಿಕ್ಕಂತಾಗಿದೆ. ಇದು ಭಾರತೀಯ ಜನತಾ ಪಕ್ಷದ ನಿರಂತರ ಹೋರಾಟಕ್ಕೆ ಸಿಕ್ಕ ಫಲ. ಜೊತೆಗೆ ಇದು ವಾಸ್ತವದ ಗೆಲುವು ಮತ್ತು ಕಾಂಗ್ರೆಸ್‌ನ ಕಪಟ ನೀತಿಯ ಅಸಲಿ ಮುಖ ಬಯಲಾಗಿದೆ.

ಈ ಹಗರಣ ಕೇವಲ ಆರ್ಥಿಕ ಅಕ್ರಮವಷ್ಟೇ ಅಲ್ಲ, ಇದು ವಾಲ್ಮೀಕಿ ಸಮುದಾಯದ ಹಕ್ಕುಗಳನ್ನು ದುರ್ಬಳಕೆ ಮಾಡಿದ ರಾಜಕೀಯ ಧಿಕ್ಕಾರದ ಉದಾಹರಣೆ ಎಂದು ಕಿಡಿಕಾರಿದ್ದಾರೆ.

ಸಮುದಾಯದ ಕಲ್ಯಾಣಕ್ಕಾಗಿ ಮೀಸಲಾದ ಕೋಟಿಗಟ್ಟಲೆ ಹಣವನ್ನು ಕಾಂಗ್ರೆಸ್ ಸರ್ಕಾರ ತನ್ನ ರಾಜಕೀಯ ದುರಾಸೆಗಾಗಿ ಲೂಟಿ ಮಾಡಿದ್ದು, ಬಳ್ಳಾರಿ ಉಪಚುನಾವಣೆ, ತೆಲಂಗಾಣ ಮತ್ತು ವಯನಾಡ್ ಚುನಾವಣೆಯಲ್ಲಿ ಅಕ್ರಮವಾಗಿ ಹಣ ಹರಿಸುತ್ತಾ ಭಾರತೀಯ ಪ್ರಜಾಪ್ರಭುತ್ವಕ್ಕೆ ಅಪಮಾನ ಎಸಗಿದೆ ಎಂದು ದೂರಿದ್ದಾರೆ.

ವಾಲ್ಮೀಕಿ ನಿಗಮದಲ್ಲಿ ನಡೆದ ಈ ಭಾರೀ ಹಗರಣದಲ್ಲಿ ಕಾಂಗ್ರೆಸ್‌ ಸರ್ಕಾರದ ಹಲವು ಹಿರಿಯ ನಾಯಕರು ನೇರವಾಗಿ ಸಂಬಂಧ ಹೊಂದಿದ್ದು, ಸರ್ಕಾರದ ನೈತಿಕತೆ ಮತ್ತು ಜವಾಬ್ದಾರಿತ್ವಕ್ಕೆ ಗಂಭೀರ ಆಘಾತ ನೀಡಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಈ ಹಗರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೇರ ಹೊಣೆಗಾರರಾಗಿದ್ದು, ಅವರು ತಕ್ಷಣವೇ ತಮ್ಮ ಹುದ್ದೆಯಿಂದ ರಾಜೀನಾಮೆ ನೀಡಿ ತನಿಖೆಗೆ ಸಂಪೂರ್ಣ ಸಹಕರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಮುದಾಯದ ಹೆಸರಿನಲ್ಲಿ ಮತ ಯಾಚಿಸಿ, ನಂತರ ಅವರ ಅಭಿವೃದ್ಧಿಗೆ ಮೀಸಲಾದ ನಿಧಿಗಳನ್ನು ದುರುಪಯೋಗಪಡಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷದ ರಾಜಕೀಯ ಸಂಸ್ಕೃತಿಯಲ್ಲಿಯೇ ಅಡಗಿದೆ. ಇಂತಹ ಅಕ್ರಮಗಳನ್ನು ಭಾರತೀಯ ಜನತಾ ಪಕ್ಷ ಎಂದಿಗೂ ಸಹಿಸುವುದಿಲ್ಲ. ಇವುಗಳ ವಿರುದ್ಧ ಈಗಾಗಲೇ ಹೋರಾಟ ನಡೆಸುತ್ತಿದ್ದು, ಮುಂದೆಯೂ ನಿರಂತರವಾಗಿ ಹೋರಾಡುವ ದೃಢ ಪ್ರತಿಜ್ಞೆಯೊಂದಿಗೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.