ಗ್ಯಾರಂಟಿ ಯೋಜನೆಗಾಗಿ ಅಭಿವೃದ್ಧಿ ಬಲಿಕೊಟ್ಟ ಕಾಂಗ್ರೆಸ್: ರೂಪಾಲಿ ನಾಯ್ಕ

| Published : May 03 2024, 01:03 AM IST

ಗ್ಯಾರಂಟಿ ಯೋಜನೆಗಾಗಿ ಅಭಿವೃದ್ಧಿ ಬಲಿಕೊಟ್ಟ ಕಾಂಗ್ರೆಸ್: ರೂಪಾಲಿ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಜನರ ಮೇಲೆ ಬೆಲೆ ಏರಿಕೆಯ ಹೊರೆ ಹಾಕಿದ ಕೀರ್ತಿಯೇ ಕಾಂಗ್ರೆಸ್‌ ಸರ್ಕಾರದ ಸಾಧನೆಯಾಗಿದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದರು.

ಕಾರವಾರ: ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆ ಜೀವಂತವಾಗಿರಿಸಲು ಅಭಿವೃದ್ಧಿಯನ್ನು ಮರೀಚಿಕೆ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ರೂಪಾಲಿ ಎಸ್. ನಾಯ್ಕ ಆರೋಪಿದರು.

ಅಂಕೋಲಾ ತಾಲೂಕಿನ ಅವರ್ಸಾ ಹಾಗೂ ಹಟ್ಟಿಕೇರಿ, ಕಾರವಾರ ತಾಲೂಕಿನ ಬಿಜೆಪಿ‌ ಗ್ರಾಮೀಣ ಮಂಡಲದ ಅಮದಳ್ಳಿ, ತೋಡುರು, ಚೆಂಡಿಯಾ, ಕಡವಾಡ, ಕಿನ್ನರ, ಶಿರವಾಡ, ವೈಲವಾಡ, ದೇವಳಮಕ್ಕಿ ಚಿತ್ತಾಕುಲ, ಮಾಜಾಳಿ ಹಾಗೂ ಕಾರವಾರ ನಗರದ ಬಿಣಗಾ, ಮಾರುತಿಗಲ್ಲಿ, ಕೆಎಚ್‌ಬಿ ಕಾಲನಿ ಸೇರಿದಂತೆ ವಿವಿಧೆಡೆ ನಡೆದ ಲೊಕಸಭಾ ಅಭ್ಯರ್ಥಿ‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಜನರ ಮೇಲೆ ಬೆಲೆ ಏರಿಕೆಯ ಹೊರೆ ಹಾಕಿದ ಕೀರ್ತಿಯೇ ಕಾಂಗ್ರೆಸ್‌ ಸರ್ಕಾರದ ಸಾಧನೆಯಾಗಿದೆ ಎಂದರು.

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿಯ ಹತ್ಯೆಯು ಸಮಾಜದಲ್ಲಿ ಭಯ ಹುಟ್ಟಿಸಿದೆ. ಮಹಿಳೆಯರಿಗೆ ಸುರಕ್ಷತೆ ಇಲ್ಲದ ವಾತಾವರಣ ಸೃಷ್ಟಿಯಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇಂತಹ ಸರ್ಕಾರವನ್ನು ತೊಲಗಿಸಬೇಕು. ಅದಕ್ಕಾಗಿ ಮೂರನೆ ಬಾರಿಗೆ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕಿದೆ ಎಂದರು.

ದೇಶದ ಅಭಿವೃದ್ಧಿಗೆ ನಮ್ಮೆಲ್ಲರ ರಕ್ಷಣೆಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು. ನರೇಂದ್ರ ಮೋದಿ ಅವರು ನಮಗಾಗಿ ಹಗಲಿರುಳು ಶ್ರಮಿಸುತ್ತಿದ್ದು, ಅವರಿಗೆ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಡುಗೆಯನ್ನು ನೀಡಬೇಕು.

ದೇವಮಾನವ, ಜಗಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿ ಗಳಿಸಿದ ಯಶಸ್ಸು ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದು. ಅವರ ಆಡಳಿತದಲ್ಲಿ ಮಾಡಿದ ಸಾಧನೆ ಎಲ್ಲರಿಗೂ ತಿಳಿದಿದೆ. ಶ್ರೀರಾಮಲಲ್ಲಾ ಮಂದಿರ ನಿರ್ಮಾಣ ಆಗಬೇಕು ಎಂಬುದು ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಯಾವ ಪ್ರಧಾನಿಯೂ ಮಾಡದೆ ಇರುವಂತಹ ಸಾಧನೆಯನ್ನು ಮೋದಿ ಜೀ ಅವರು ಮಾಡಿದ್ದಾರೆ ಎಂದರು.

ದೇಶದ ಎಲ್ಲ ನಾಗರಿಕರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಅದಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡೋಣ. ಅದಕ್ಕಾಗಿ ಮೇ 7ರಂದು ಕಮಲದ ಗುರುತಿಗೆ ಮತ ನೀಡಿ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ಕಾರವಾರ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಸುಭಾಷ ಗುನಗಿ, ನಗರ ಮಂಡಲದ ನಾಗೇಶ ಕುರ್ಡೇಕರ, ಅಂಕೋಲಾ ಮಂಡಲದ ಗೋಪಾಲಕೃಷ್ಣ ವೈದ್ಯ, ಜಿಲ್ಲಾ ಪ್ರಮುಖರಾದ ನಾಗರಾಜ ನಾಯಕ, ಪ್ರಧಾನ ಕಾರ್ಯದರ್ಶಿಗಳಾದ ಸೂರಜ ದೇಸಾಯಿ, ಉದಯ ನಾಯ್ಕ, ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ ಶಕ್ತಿ ಕೇಂದ್ರ, ಬೂತ್‌ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.