ಕಾಂಗ್ರೆಸ್ ಸಾಧನಾ ಸಮಾವೇಶವಲ್ಲ ಎರಡನೇ ವರ್ಷದ ಪುಣ್ಯತಿಥಿ: ಮಾಜಿ ಸಚಿವ ಬಿ ಸಿ ಪಾಟೀಲ

| Published : May 20 2025, 01:13 AM IST

ಕಾಂಗ್ರೆಸ್ ಸಾಧನಾ ಸಮಾವೇಶವಲ್ಲ ಎರಡನೇ ವರ್ಷದ ಪುಣ್ಯತಿಥಿ: ಮಾಜಿ ಸಚಿವ ಬಿ ಸಿ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ ಹಣ ದುಂದುವೆಚ್ಚ ಮಾಡಿ, ಜಾಹೀರಾತಿಗೆ ಕೋಟ್ಯಂತರ ಹಣ ಖರ್ಚು ಮಾಡುತ್ತಿದ್ದಾರೆ. ಜಾಹೀರಾತಿಗೂ ಸರ್ಕಾರದ ಅಭಿವೃದ್ದಿ ಕೆಲಸಗಳಿಗೆ ತಾಳೆ ಆಗುವುದಿಲ್ಲ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ಹಾವೇರಿ: ಕಾಂಗ್ರೆಸ್ಸಿನವರು ಸುಳ್ಳು ಗ್ಯಾರಂಟಿ ನೀಡಿ, ಜನರಿಂದ ಹಣ ಲೂಟಿ ಮಾಡಿ ಮೇ 20ರಂದು ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ್ದು ಎರಡನೇ ವರ್ಷದ ಸಾಧನೆಯಲ್ಲ, ಇದು ಎರಡನೇ ವರ್ಷದ ಪುಣ್ಯತಿಥಿ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಲೇವಡಿ ಮಾಡಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಹಣ ದುಂದುವೆಚ್ಚ ಮಾಡಿ, ಜಾಹೀರಾತಿಗೆ ಕೋಟ್ಯಂತರ ಹಣ ಖರ್ಚು ಮಾಡುತ್ತಿದ್ದಾರೆ. ಜಾಹೀರಾತಿಗೂ ಸರ್ಕಾರದ ಅಭಿವೃದ್ದಿ ಕೆಲಸಗಳಿಗೆ ತಾಳೆ ಆಗುವುದಿಲ್ಲ. ಜನರ ತೆರಿಗೆ ಹಣವನ್ನು ಜಾಹೀರಾತು ರೂಪದಲ್ಲಿ ಪೋಲು ಮಾಡುತ್ತಿದ್ದಾರೆ. ಇದೊಂದು ಜಾಹೀರಾತಿನ ಸರ್ಕಾರ ಎಂದು ಆರೋಪಿಸಿದರು.ಕಾಶ್ಮೀರದ ಪಹಲ್ಗಾಮ್ ಘಟನೆ ದೊಡ್ಡ ದುರಂತ. ಆಪರೇಷನ್ ಸಿಂದೂರ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೇವಲ 23 ನಿಮಿಷದಲ್ಲಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿ ತಕ್ಕಪಾಠ ಕಲಿಸಿದ್ದಾರೆ. ಭಾರತದ ಮುಸ್ಲಿಮರು ಕೂಡ ಮೋದಿ ಅವರನ್ನು ಶ್ಲಾಘಿಸಿದ್ದಾರೆ. ಆದರೆ, ಕಾಂಗ್ರೆಸ್ಸಿನವರು ಪಾಕಿಸ್ತಾನದ ವಕ್ತಾರರಂತೆ ಮಾತನಾಡುತ್ತಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಅವರು ಮೇ 7ರಿಂದ 11ರ ತನಕ ಪ್ರಧಾನಿ ಎಲ್ಲಿ ಇದ್ದರು ಎಂದು ಪ್ರಶ್ನಿಸುತ್ತಾರೆ. ಒಬ್ಬ ಜವಾಬ್ದಾರಿಯುತ ಸಚಿವರಾಗಿ ಯಾವ ಮಟ್ಟದ ಮನಸ್ಥಿತಿಯಲ್ಲಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮೋದಿಯವರು ಸರಣಿ ಸಭೆ ಮಾಡಿ, ಗುಪ್ತಚರ ಮಾಹಿತಿ ಪಡೆದು ದಾಳಿ ಮಾಡಲು ಸಭೆ ಮಾಡಿದ್ದಾರೆ. ಇದು ಅವರಿಗೆ ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿ ಬ್ರಹ್ಮೋಸ್ ಯುದ್ಧ ವಿಮಾನಗಳು ಸೃಷ್ಟಿಯಾಗಿವೆ ಹೊರತು ಕಾಂಗ್ರೆಸ್ ಅವಧಿಯಲ್ಲಿ ಅಲ್ಲ ಎಂದು ಸಚಿವ ಮಧು ಬಂಗಾರಪ್ಪ ಅವರಿಗೆ ಟಾಂಗ್ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಜನನ ಪ್ರಮಾಣ ಪತ್ರದಿಂದ ಹಿಡಿದು, ಮರಣ ಪ್ರಮಾಣ ಪತ್ರದವರೆಗೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದೊಂದು ವಸೂಲಿ ಸರ್ಕಾರವಾಗಿದೆ. ರಾಜ್ಯ ಇಂದು ಆರ್ಥಿಕವಾಗಿ ದಿವಾಳಿಯಾಗಿದ್ದು, ಆಡಳಿತ ಯಂತ್ರ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ. ಕಾನೂನು ಸುವ್ಯವಸ್ಥೆ, ಸಾಮಾಜಿಕ ನ್ಯಾಯದ ಕಗ್ಗೊಲೆ ಮತ್ತು ವ್ಯಾಪಕ ಭ್ರಷ್ಟಾಚಾರದಿಂದ ನರಳುತ್ತಿದೆ ಎಂದು ಕಿಡಿಕಾರಿದರು.

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಾಯಿಗೆ ಬಂದಂತೆ ಮಾತಾಡುತ್ತಾರೆ. ಆದರೆ ಗ್ರಾಮೀಣ ರಸ್ತೆಗಳ ದುರಸ್ತಿ ಮಾಡಿಸಲು ಮುಂದಾಗುತ್ತಿಲ್ಲ. ಕಾರ್ಮಿಕ ಸಚಿವ ಸಂತೋಷ್ ಲಾಡ್ ತಮ್ಮದೇ ಕಾರ್ಮಿಕ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಸಚಿವರೆ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಅನುಮಾನ ಕಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಗವಿಸಿದ್ದಪ್ಪ ದ್ಯಾಮಣ್ಣವರ, ನಂಜುಂಡೇಶ ಕಳ್ಳೇರ, ಸಂತೋಷ ಆಲದಕಟ್ಟಿ, ಪರಮೇಶ್ವರಪ್ಪ ಮೇಗಳಮನಿ, ವೆಂಕಟೇಶ ನಾರಾಯಣಿ ಇತರರು ಇದ್ದರು.