ಸಾರಾಂಶ
- ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಶೆಟ್ಟಿ ಹೇಳಿಕೆ । ವಾರ್ಡ್‌ಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಲು ಸಲಹೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಪಾಲಿಕೆ ಸದಸ್ಯರ ಅವಧಿ ಫೆಬ್ರವರಿ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ರಾಜ್ಯ ಸರ್ಕಾರ ಯಾವುದೇ ಸಮಯದಲ್ಲಾದರೂ ಚುನಾವಣೆ ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಮ್ಮೆಲ್ಲಾ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಚುನಾವಣೆಗೆ ಸನ್ನದ್ಧವಾಗಿರಬೇಕು ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ದಕ್ಷಿಣ ವಿಧಾನಸಭಾ ಕ್ಷೇತ್ರದ ಪಾಲಿಕೆ ಸದಸ್ಯರು, 2018ರ ಚುನಾವಣೆಯ ಸ್ಪರ್ಧಿಗಳು, ವಾರ್ಡ್ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತರ-ದಕ್ಷಿಣ ಸೇರಿದಂತೆ ಎಲ್ಲ 45 ವಾರ್ಡ್‌ಗಳಲ್ಲೂ ಪಕ್ಷವು ಚುನಾವಣೆಗೆ ಸಜ್ಜಾಗಿರಬೇಕು ಎಂದರು.ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ನಿರ್ದೇಶನದಂತೆ ನಾವು ಪಾಲಿಕೆ ಚುನಾವಣೆಗೆ ಸಜ್ಜಾಗಿದ್ದೇವೆ. ನಮ್ಮೆಲ್ಲಾ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ತಮ್ಮ ತಮ್ಮ ವಾರ್ಡ್‌ಗಳಲ್ಲಿ ಮುಖಂಡರೊಂದಿಗೆ ಸೇರಿ, ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಉತ್ತಮ ಸರ್ಕಾರ ಮತ್ತು ಪಕ್ಷ ಸಂಘಟನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಪಾಲಿಕೆಗೆ ಚುನಾವಣೆ ನಡೆದರೆ ಎಲ್ಲಾ 45 ವಾರ್ಡ್‌ಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ. ಮತ್ತೊಮ್ಮೆ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೂ ಬರಲಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಅಯೂಬ್ ಪೈಲ್ವಾನ್ ಮಾತನಾಡಿ, ಈಗಾಗಲೇ ದಾವಣಗೆರೆ ಪಾಲಿಕೆ ಚುನಾವಣೆಗೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ. ಸದಸ್ಯರು ಮತ್ತು ಮುಖಂಡರ ಸಂಘಟನೆಯ ಕಡೆಗೂ ನಿಗಾ ವಹಿಸಲಾಗಿದೆ. ಪಾಲಿಕೆ ಚುನಾವಣೆಯಲ್ಲಿ ಮತ್ತೆ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ನಮ್ಮ ನಾಯಕರ ಕೈಗಳನ್ನು ಮತ್ತಷ್ಟು ಬಲಪಡಿಸೋಣ ಎಂದರು.
ಉಪ ಮೇಯರ್ ಸೋಗಿ ಶಾಂತಕುಮಾರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ, ಮಾಜಿ ಮೇಯರ್ ಅನಿತಾಬಾಯಿ ಮಾಲತೇಶ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಧಾ ಇಟ್ಟಿಗುಡಿ ಮಂಜುನಾಥ, ಸವಿತಾ ಗಣೇಶ ಹುಲ್ಮನಿ, ಆಶಾ ಉಮೇಶ, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಸುಭಾನ್ ಸಾಬ್, ಇಂಟೆಕ್ ಜಿಲ್ಲಾಧ್ಯಕ್ಷ ಮಂಜುನಾಥ ಇತರರು ಮಾತನಾಡಿದರು. ನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಮಾಜಿ ಸದಸ್ಯರು, ವಾರ್ಡ್‍ಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.- - -
ಬಾಕ್ಸ್ ಕಾಂಗ್ರೆಸ್ ಬಡವರ ಪಕ್ಷವಾಗಿದೆ. ಈ ಹಿನ್ನೆಲೆಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ನಮ್ಮ ಯೋಜನೆಗಳು ಪ್ರತಿಯೊಂದು ಕುಟುಂಬಕ್ಕೂ ಒಂದಲ್ಲ ಒಂದು ರೀತಿ ತಲುಪಿವೆ. ನಮ್ಮೆಲ್ಲಾ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಮನೆ ಮನೆಗೂ ಹೋಗಿ, ನಮ್ಮ ಸರ್ಕಾರದ ಸಾಧನೆಗಳನ್ನು ತಿಳಿಸಬೇಕು. ಪ್ರತಿಯೊಬ್ಬ ಕಾರ್ಯಕರ್ತರ ಶಕ್ತಿಯನ್ನೂ ಪಕ್ಷ ಗುರುತಿಸಲಿದೆ- ಕೆ.ಚಮನ್ ಸಾಬ್, ಮೇಯರ್
- - - -24ಕೆಡಿವಿಜಿ14, 15.ಜೆಪಿಜಿ:ದಾವಣಗೆರೆ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪಕ್ಷದ ದಕ್ಷಿಣ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ದಿನೇಶ ಶೆಟ್ಟಿ ಮಾತನಾಡಿದರು.