ಶರಣು ಸೊಲಗಿಮುಂಡರಗಿ: ಬೇಸಿಗೆ ವೇಳೆ ಪಟ್ಟಣ ಸೇರಿದಂತೆ ತಾಲೂಕಿನ ಸುಮಾರು 59 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯೇ ಆಸರೆಯಾಗಿದೆ.
ತಾಲೂಕಿನ ಚಿಕ್ಕವಡ್ಡಟ್ಟಿ, ಗುಡ್ಡದ ಬೂದಿಹಾಳ, ಹಳ್ಳಿಕೇರಿ, ಯಕ್ಲಾಸಪುರ, ಬೆಣ್ಣಿಹಳ್ಳಿ ಮತ್ತು ಕೊರ್ಲಹಳ್ಳಿ ಗ್ರಾಮಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುವ ಸಾಧ್ಯತೆಗಳಿವೆ.ತಾಲೂಕಿನ ಹಮ್ಮಿಗಿ ಬಳಿ ಇರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜಿನಲ್ಲಿ 1.9 ಟಿಎಂಸಿ ನೀರು ಸಂಗ್ರಹವಿದೆ. ತಾಲೂಕಿನ ಜಾಲವಾಡಗಿ ಬಳಿ ಇರುವ ನೀರು ಶುದ್ಧೀಕರಣ ಘಟಕದಿಂದ ಮುಂಡರಗಿ ಪಟ್ಟಣ ಸೇರಿದಂತೆ ತಾಲೂಕಿನ 59 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಈ ಹಿಂದೆ 2013ರಲ್ಲಿ ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ರಾಜ್ಯದಲ್ಲಿಯೇ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಪ್ರಾರಂಭಿಲಾಗಿತ್ತು. ಅದು ಇಂದು ಎಲ್ಲ ಗ್ರಾಮಗಳಿಗೂ ಕುಡಿಯುವ ನೀರಿಗೆ ಆಸರೆಯಾಗಿದೆ.ಜಾಲವಾಡಗಿ ಸಂಪ್ ಮೂಲಕ ನಿತ್ಯವೂ ಎಲ್ಲ ಗ್ರಾಮಗಳಿಗೆ ನೀರು ಸರಬರಾಜು ಆಗುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಸಮಸ್ಯೆ ಅಥವಾ ಮಷಿನ್‌ಗಳ ಗಂಭೀರ ಸಮಸ್ಯೆಗಳಾದಾಗ ಮಾತ್ರ ಅದು ಸರಿಯಾಗುವವರೆಗೂ ನೀರು ಸರಬರಾಜು ಮಾಡುವಲ್ಲಿ ವಿಳಂಬವಾಗುತ್ತದೆ. ಯಾವುದೇ ಸಮಸ್ಯಯಾಗದೇ ಇದ್ದಲ್ಲಿ ನಿತ್ಯವೂ ನಿಗದಿಯಂತೆ ಆಯಾ ಪ್ರದೇಶಗಳಿಗೆ ನೀರು ಸರಬರಾಜು ಆಗುತ್ತಿರುತ್ತದೆ. ಹೀಗಾಗಿ ಇದುವರೆಗೂ ತಾಲೂಕಿನ ಯಾವುದೇ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿರುವುದು ಕಂಡುಬಂದಿಲ್ಲ.ಜಾಲವಾಡಗಿಯಿಂದ ಪಟ್ಟಣಕ್ಕೆ ಸರಬರಾಜು ಆಗುವ ನೀರನ್ನು ಮುಂಡರಗಿ ಪುರಸಭೆಯವರು 23 ವಾರ್ಡ್‌ಗಳ ಪೈಕಿ ಕೆಲವು ವಾರ್ಡ್‌ಗಳಿಗೆ 5 ದಿನಕ್ಕೊಮ್ಮೆ ಇನ್ನು ಕೆಲವು ವಾರ್ಡುಗಳಿಗೆ 4 ದಿನಕ್ಕೊಮ್ಮೆ ಈ ನೀರನ್ನು ಸರಬರಾಜು ಮಾಡುತ್ತಾ ಬಂದಿದ್ದಾರೆ. ಅಲ್ಲದೇ ಪಟ್ಟಣದಲ್ಲಿ 12 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಎಲ್ಲವೂ ಸುಸೂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, 23 ವಾರ್ಡ್‌ಗಳ ಜನತೆಗೆ ಅನುಕೂಲವಾಗಿವೆ.ಪಟ್ಟಣದ ಜನತೆಗೆ ಬಳಕೆ ನೀರನ್ನು ಒಂದು ದಿನ ಬಿಟ್ಟು ಒಂದು ದಿನ ಸರಬರಾಜು ಮಾಡುತ್ತಿದ್ದು, ಅದಕ್ಕಾಗಿ 59 ಬೋರ್‌ಗಳಿದ್ದು, ಅವುಗಳಿಂದ ಎಲ್ಲ 23 ವಾರ್ಡುಗಳಿಗೂ ಬಳಕೆ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಅಲ್ಲದೇ ಪಟ್ಟಣದ ಶಿರೋಳ, ಬ್ಯಾಲವಾಡಗಿ, ರಾಮೇನಹಳ್ಳಿ, ಕೋಟೆ ಆಂಜನೇಯ ದೇವಸ್ಥಾನದ ಹತ್ತಿರ, ಪೊಲೀಸ್ ಠಾಣೆ ಹತ್ತಿರ ಸೇರಿ ಸುಮಾರು 8 ದನಕರುಗಳಿಗೆ ನೀರು ಕುಡಿಸಲು ನೀರಿನ ಬಾನಿಗಳನ್ನು ನಿರ್ಮಿಸಲಾಗಿದ್ದು, ಅವುಗಳಿಗೆ ನೀರು ತುಂಬಿಸಿ ಜಾನುವಾರುಗಳಿಗೆ ನೀರು ಕುಡಿಸಲು ಪುರಸಭೆ ಅನುಕೂಲ ಮಾಡಿಕೊಟ್ಟಿದೆ.ಟ್ಯಾಂಕರ್ ನೀರು: ಈಗಾಗಲೇ ಗುರುತಿಸಿರುವ ಕೆಲವು ಗ್ರಾಮಗಳಲ್ಲಿ ಅತ್ಯಂತ ಬಿರುಬೇಸಿಗೆ ಸಂದರ್ಭಕ್ಕೆ ಕುಡಿಯುವ ನೀರಿನ ಸಮಸ್ಯೆಯಾದರೆ ಚಿಕ್ಕವಡ್ಡಟ್ಟಿ, ಗುಡ್ಡದ ಬೂದಿಹಾಳ, ಬೆಣ್ಣಿಹಳ್ಳಿ ಮತ್ತು ಕೊರ್ಲಹಳ್ಳಿ ಗ್ರಾಮಗಳ ರೈತರೊಂದಿಗೆ ಚರ್ಚಿಸಿದ್ದು, ಅವರ ಪಂಪ್‌ಸೆಟ್ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲು ಯೋಚಿಸಲಾಗಿದೆ. ಅದೇ ರೀತಿ ಹಳ್ಳಿಕೇರಿ ಮತ್ತು ಯಕ್ಲಾಸಪುರ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ನಿರ್ಧರಿಸಲಾಗಿದೆ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಇಇ ಆನಂದಕುಮಾರ ತಿಳಿಸಿದರು.
ರಿಪೇರಿಗೆ ಕ್ರಮ: ಬೇಸಿಗೆ ಈ ಸಂದರ್ಭದಲ್ಲಿ ಪಟ್ಟಣದ ಜನತೆಗೆ ಕುಡಿಯುವ ನೀರಿಗೆ ಯಾವುದೇ ರೀತಿಯಿಂದ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ನದಿ ನೀರಿನ ಜತೆಗೆ 12 ಶುದ್ದ ಕುಡಿಯುವ ನೀರಿನ ಘಟಕಗಳಿವೆ. ಏನಾದರೂ ಮೋಟರ್ ಸಮಸ್ಯೆಗಳಾದರೆ ತಕ್ಷಣವೇ ರಿಪೇರಿಗೆ ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಪುರಸಭೆ ಶಂಕರ ಹುಲ್ಲಮ್ಮನವರ ತಿಳಿಸಿದರು.