ಸಾರಾಂಶ
ಶಿರಾಡಿ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಯು-ಟರ್ನ್ ಇದ್ದು ಇದನ್ನು ಸ್ಥಾನ ಪಲ್ಲಟ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಇಲ್ಲಿ ಯು-ಟರ್ನ್ ಅತೀ ಅಗತ್ಯವಾಗಿದ್ದು ಇದನ್ನು ಹಾಗೇ ಉಳಿಸಬೇಕು ಎಂದು ಗ್ರಾಮಸ್ಥರು ಸಹಾಯಕ ಆಯುಕ್ತರಿಗೆ ಮನವಿ ಮಾಡಿದರು. ಅಡ್ಡಹೊಳೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪ ಯು-ಟರ್ನ್‌ಗೆ ಗ್ರಾಮಸ್ಥರು ಬೇಡಿಕೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಪೇಟೆಯಿಂದ ಉದನೆ ಕಡೆಗೆ ೧ ಕಿ.ಮೀ. ಮುಂದೆ ಇಡತ್ತಡ್ಕ ಎಂಬಲ್ಲಿ ಯು-ಟರ್ನ್ ನೀಡಬೇಂಕ ಬೇಡಿಕೆ ಹಿನ್ನೆಲೆಯಲ್ಲಿ ಪುತ್ತೂರು ಸಹಾಯಕ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಶಿರಾಡಿ ಪೇಟೆಯಿಂದ ಉದನೆ ಕಡೆಗೆ ಸುಮಾರು ೧ ಕಿ.ಮೀ. ಮುಂದೆ ಇಡತ್ತಡ್ಕ ಎಂಬಲ್ಲಿನ ಗ್ರಾಮ ಪಂಚಾಯಿತಿ ರಸ್ತೆ ಸಂಪರ್ಕವಿದ್ದು ಸುಮಾರು ೨೫ ಕುಟುಂಬಸ್ಥರು ಬಳಕೆ ಮಾಡುತ್ತಿದ್ದಾರೆ. ಇಲ್ಲಿ ಯು-ಟರ್ನ್ ನೀಡದಿದ್ದರೆ ಈ ಪ್ರದೇಶದ ನಿವಾಸಿಗಳು ೬ ಕಿ.ಮೀ .ಮುಂದೆ ಬಂದು ಉದನೆ ಪೇಟೆಯಲ್ಲಿರುವ ಯು-ಟರ್ನ್ ಬಳಸಬೇಕಾಗುತ್ತದೆ. ಆದ್ದರಿಂದ ಇಡತ್ತಡ್ಕದಲ್ಲಿ ಯು-ಟರ್ನ್ ನೀಡಲು ಕ್ರಮ ಕೈಗೊಳ್ಳಬೇಕೆಂದು ಶಿರಾಡಿ ಗ್ರಾ.ಪಂ.ನಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಮನವಿ ಮಾಡಲಾಗಿತ್ತು.ಅವೈಜ್ಞಾನಿಕ ಯು- ಟರ್ನ್‌ಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿರಾಡಿ ಗಡಿನಾಡ ರಕ್ಷಣಾ ಸೇನೆ ವತಿಯಿಂದಲೂ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರು ಪುತ್ತೂರು ಉಪವಿಭಾಗಧಿಕಾರಿಯವರಿಗೆ ಸೂಚನೆ ನೀಡಿದ್ದರು. ಅದರಂತೆ ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.
ಯು-ಟರ್ನ್ ಸ್ಥಾನ ಪಲ್ಲಟ ಮಾಡದಂತೆ ಮನವಿ: ಶಿರಾಡಿ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಯು-ಟರ್ನ್ ಇದ್ದು ಇದನ್ನು ಸ್ಥಾನ ಪಲ್ಲಟ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಇಲ್ಲಿ ಯು-ಟರ್ನ್ ಅತೀ ಅಗತ್ಯವಾಗಿದ್ದು ಇದನ್ನು ಹಾಗೇ ಉಳಿಸಬೇಕು ಎಂದು ಗ್ರಾಮಸ್ಥರು ಸಹಾಯಕ ಆಯುಕ್ತರಿಗೆ ಮನವಿ ಮಾಡಿದರು. ಅಡ್ಡಹೊಳೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪ ಯು-ಟರ್ನ್‌ಗೆ ಗ್ರಾಮಸ್ಥರು ಬೇಡಿಕೆ ಸಲ್ಲಿಸಿದರು. ಸರ್ವೀಸ್ ರಸ್ತೆ ಇಲ್ಲದೆ ಸಮಸ್ಯೆ: ಶಿರಾಡಿ ಗ್ರಾಮದ ಶಿರಾಡಿ ಪೇಟೆ ಗ್ರಾಮದ ಕೇಂದ್ರ ಸ್ಥಾನವಾಗಿದೆ. ಆದರೆ ರಾಷ್ಟ್ರೀಯ ಹೆದ್ದಾರಿಯವರು ಈ ಪೇಟೆಗೆ ಸರ್ವೀಸ್ ರಸ್ತೆಯನ್ನು ನಿರ್ಮಿಸದೆ ಇರುವುದರಿಂದ ಈಗ ಸಮಸ್ಯೆ ಎದುರಾಗಿದೆ. ನಾಲ್ಕು ಪಥಗಳ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಪೇಟೆಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸದೇ ಇದ್ದಲ್ಲಿ ಜನರ ಸುಗಮ ಸಂಚಾರಕ್ಕೆ ಹೆಚ್ಚುವರಿ ಯು-ಟರ್ನ್ ಒದಗಿಸಲು ಅವಕಾಶವಿರುವುದರಿಂದ ಈ ಬಗ್ಗೆ ಗಮನ ಹರಿಸಿ ಗೊಂದಲ ಪರಿಹರಿಸುವಂತೆ ಗ್ರಾ.ಪಂ. ಸದಸ್ಯ ಸಣ್ಣಿ ಜೋನ್ ಮನವಿ ಮಾಡಿದ್ದಾರೆ.ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ, ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ, ತಾ.ಪಂ. ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ಶಿರಾಡಿ ಗ್ರಾ.ಪಂ. ಪಿಡಿಒ ಯಶವಂತ, ಗ್ರಾಮ ಆಡಳಿತಾಧಿಕಾರಿ ಸಂತೋಷ್, ಶಿರಾಡಿ ಗ್ರಾ.ಪಂ. ಅಧ್ಯಕ್ಷ ಕಾರ್ತಿಕೇಯನ್, ಸದಸ್ಯ ಸಣ್ಣಿ ಜೋನ್, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಗ್ರಾಮಸ್ಥರು, ವರ್ತಕರು ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದರು.