ಪಾಕ್ ಪರ ಘೋಷಣೆಗೆ ಕಾಂಗ್ರೆಸ್ ಮೃದು ಧೋರಣೆ: ಕಾಗೇರಿ

| Published : Apr 04 2024, 01:00 AM IST

ಸಾರಾಂಶ

ಕಾಂಗ್ರೆಸ್ಸಿನ ಆಸೆ, ಆಮಿಷಗಳಿಗೆ ಮರುಳಾಗುವುದಿಲ್ಲ. ಕಾಂಗ್ರೆಸ್ ಪರ ಮತ ಚಲಾಯಿಸುವುದಿಲ್ಲ ಎಂಬ ಆಶ್ವಾಸನೆಯನ್ನು ಕೊಡಬೇಕಾಗಿದೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಹಳಿಯಾಳ: ಇತ್ತೀಚೆಗೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಮೊಳಗಿದೆ. ಘೋಷಣೆ ಕೂಗಿದವರ ಬಗ್ಗೆ ಕಾಂಗ್ರೆಸ್ ಮೃದು ಧೋರಣೆ ತಳೆದಿದೆ ಎಂದು ಉತ್ತರಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿಕಾರಿದರು.

ಬುಧವಾರ ಪಟ್ಟಣದ ಗಣೇಶ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಹಳಿಯಾಳ ತಾಲೂಕು ಮಟ್ಟದ ಬಿಜೆಪಿ ಕಾರ್ಯಕರ್ತರ ಸಮಾವೇಶ ಹಾಗೂ ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್ಸಿನ ಆಸೆ, ಆಮಿಷಗಳಿಗೆ ಮರುಳಾಗುವುದಿಲ್ಲ. ಕಾಂಗ್ರೆಸ್ ಪರ ಮತ ಚಲಾಯಿಸುವುದಿಲ್ಲ ಎಂಬ ಆಶ್ವಾಸನೆಯನ್ನು ಕೊಡಬೇಕಾಗಿದೆ. ಧರ್ಮ, ಸಂಸ್ಕೃತಿ ರಕ್ಷಣೆಗಾಗಿ ಮತ ಕೊಡುತ್ತೇವೆ, ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡುತ್ತಿರುವ ಮೋದಿಯವರ ಪರವಾಗಿ ಮತ ಚಲಾಯಿಸುತ್ತೆವೆ ಎಂದು ಭರವಸೆ ಕೊಡಬೇಕಾಗಿದೆ ಎಂದರು.

ಕಳೆದ ಒಂದು ವರ್ಷದ ಅವದಿಯಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ದೇಶಪಾಂಡೆಯವರು ತಂದಿರುವ ಅನುದಾನ, ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲಿ. ನಮ್ಮ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಳಿಯಾಳ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನ ಮತ್ತು ಅಭಿವೃದ್ಧಿ ಯೋಜನೆಗಳ ಮಾಹಿತಿಯನ್ನು ನೀಡುತ್ತೇವೆ ಎಂದು ಸವಾಲೆಸೆದರು.

ನಿರಂತರ ಪ್ರಚಾರ ಮಾಡಿ: ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಮೂರನೇಯ ಅವಧಿಗೆ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು, ಅದಕ್ಕಾಗಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲೇಬೇಕು ಎಂದರು. ಲೋಕಸಭಾ ಚುನಾವಣೆ ಮುಗಿಯವರೆಗೂ ಎಲ್ಲ ಕಾರ್ಯಕರ್ತರು ನಿತ್ಯ ನಿರಂತರ ಕೇಂದ್ರ ಸರ್ಕಾರ ಕೈಗೊಂಡ ಅಭಿವೃದ್ಧಿ ಯೋಜನೆಗಳ ಬಗ್ಗೆ ಪ್ರತಿ ಮನೆಗೂ ತೆರಳಿ ಮನವರಿಕೆ ಮಾಡಿ ಮತ ಯಾಚಿಸಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಮಾಜಿ ಶಾಸಕ ಸುನೀಲ ಹೆಗಡೆ, ವಿಧಾನಪರಿಷತ್‌ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ, ಪ್ರಮುಖರಾದ ಮಂಗೇಶ ದೇಶಪಾಂಡೆ, ಶಿವಾಜಿ ನರಸಾನಿ, ಅನಿಲ ಮುತ್ನಾಳೆ, ಗಣಪತಿ ಕರಂಜೇಕರ, ವಿ.ಎಂ. ಪಾಟೀಲ, ಜಿ.ಆರ್. ಪಾಟೀಲ ಹಾಗೂ ವಿವಿಧ ಘಟಕಗಳ ಪ್ರಮುಖರು ಇದ್ದರು.