ಚಿಕ್ಕಮಗಳೂರುಮತದಾರರ ಹಕ್ಕುಗಳ ಕಸಿತ, ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಸ್ವಾಯತ್ತ ಸಂಸ್ಥೆಗಳ ದುರುಪಯೋಗದ ಆರೋಪ ಮುಂದಿಟ್ಟುಕೊಂಡು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಬುಧವಾರ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿತು.
- ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ, ನಗರದ ಟೌನ್ ಕ್ಯಾಂಟೀನ್ ವೃತ್ತದಿಂದ ಅಜಾದ್ ಪಾರ್ಕ್ವರೆಗೆ ಪಾದಯಾತ್ರೆಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಮತದಾರರ ಹಕ್ಕುಗಳ ಕಸಿತ, ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಸ್ವಾಯತ್ತ ಸಂಸ್ಥೆಗಳ ದುರುಪಯೋಗದ ಆರೋಪ ಮುಂದಿಟ್ಟುಕೊಂಡು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಬುಧವಾರ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿತು.ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ವಜಾಗೊಳಿಸಬೇಕು ಎಂದು ಆಗ್ರಹಿಸಿದ ಕಾಂಗ್ರೆಸ್ ಮುಖಂಡರು, ನಗರದ ಟೌನ್ ಕ್ಯಾಂಟೀನ್ ವೃತ್ತದಿಂದ ಅಜಾದ್ ಪಾರ್ಕ್ವರೆಗೆ ಸುಮಾರು ಎರಡೂವರೆ ಕಿ.ಮೀ. ಪಾದಯಾತ್ರೆ ನಡೆಸಿ, ಜ್ಞಾನೇಶ್ ಕುಮಾರ್ ಪ್ರತಿಕೃತಿ ದಹಿಸಿ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮತ ರಕ್ಷಣೆ, ದೇಶ ರಕ್ಷಣೆ’ ಘೋಷಣೆಯೊಂದಿಗೆ ನಡೆದ ಪ್ರತಿಭಟನೆಯಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಮೂಲಕ ಅರ್ಹ ಮತದಾರರ ಹೆಸರನ್ನು ಕೈಬಿಡುವ ಆತಂಕವಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.2029ಕ್ಕೆ ಮೋದಿ ಮನೆ ಸೇರುವುದು ಖಚಿತ: ಮಂಜೇಗೌಡ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ ಮಾತನಾಡಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯಕ್ಕೆ ಸಿಲುಕಿದ್ದು, ಮತದಾನದ ಹಕ್ಕುಗಳ ರಕ್ಷಣೆಗೆ ಕಾಂಗ್ರೆಸ್ ನಿರಂತರ ಹೋರಾಟ ನಡೆಸಲಿದೆ ಎಂದರು.ಸ್ವಾಯತ್ತ ಸಂಸ್ಥೆಗಳನ್ನು ರಾಜಕೀಯ ಹಿತಾಸಕ್ತಿಗೆ ಬಳಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯ ದುರ್ಬಲ ಗೊಳಿಸ ಲಾಗುತ್ತಿದೆ. ಬ್ರಿಟಿಷರ ಆಡಳಿತದ ಕಾಲದ ದಮನಕಾರಿ ಪ್ರವೃತ್ತಿ ನೆನಪಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ದೇಶದ 15 ಕೋಟಿ ಮತದಾರರ ಹಕ್ಕು ಕಸಿದುಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಮುಂದಿಟ್ಟ ಅವರು, ಮತದಾರರ ಪಟ್ಟಿಯಿಂದ ಅರ್ಹರ ಹೆಸರುಗಳನ್ನು ಕೈಬಿಡುವ ಪ್ರಯತ್ನ ಸಹಿಸಲ್ಲ ಎಂದರು.
2029ರ ಚುನಾವಣೆಯಲ್ಲಿ ಮೋದಿ ಅಧಿಕಾರದಿಂದ ನಿರ್ಗಮಿಸುವುದು ಖಚಿತ. ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ. 2028ರಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂಬುದು ಕಾಂಗ್ರೆಸ್ನ ಆಶಯ. ಬಿಜೆಪಿ ಸ್ವಾಯತ್ತ ಸಂಸ್ಥೆಗಳ ದುರುಪಯೋಗ ನಿಲ್ಲಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.ಚುನಾವಣಾ ಆಯೋಗದ ನಿಷ್ಪಕ್ಷಪಾತಕ್ಕೆ ಪ್ರಶ್ನೆ:ಕಾಂಗ್ರೆಸ್ ಹಿರಿಯ ಮುಖಂಡ ಎಂ.ಎಲ್. ಮೂರ್ತಿ ಮಾತನಾಡಿ, ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪಾತ್ರವನ್ನು ತೆಗೆದುಹಾಕಿರುವುದು ಆಯೋಗದ ಸ್ವಾಯತ್ತತೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದರು. ಚುನಾವಣಾ ಆಯೋಗ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಪಾರದರ್ಶಕ ವಾಗಿ ಕಾರ್ಯನಿರ್ವಹಿಸಬೇಕು. ಮತದಾರರ ಹಕ್ಕುಗಳಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ನ್ಯಾಯಸಮ್ಮತಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.ಮತ ಅಳಿಸುವ ಬಗ್ಗೆ ತನಿಖೆಯಾಗಲಿ:ಕಾಂಗ್ರೆಸ್ ಮುಖಂಡ ಡಾ. ವಿಜಯಕುಮಾರ್ ಮಾತನಾಡಿ, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ವಾತಾವರಣ ನಿರ್ಮಾಣ ವಾಗಿದೆ ಎಂದು ಆರೋಪಿಸಿದರು. 2029ರ ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸವಿಲ್ಲದ ಕಾರಣ ಬಿಜೆಪಿ ನಾಯಕರು ಮತದಾರರ ಪಟ್ಟಿ ಪರಿಷ್ಕರಣೆಯನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂದು ಟೀಕಿಸಿದರು.ಜಾತಿ ಮತ್ತು ಧರ್ಮದ ಆಧಾರದಲ್ಲಿ ಮತದಾರರ ಹೆಸರನ್ನು ಅಳಿಸಲಾಗುತ್ತಿದೆ ಎಂಬ ಆರೋಪದ ಕುರಿತು ತನಿಖೆ ಯಾಗಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವ ಜತೆಗೆ, ಈ ವಿಚಾರದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಹುನ್ನಾರ: ರವೀಶ್ಮುಖಂಡ ರವೀಶ್ ಬಿ. ಕ್ಯಾತನಬೀಡು ಮಾತನಾಡಿ, ದೇಶದ ಬಹುತ್ವದ ಸ್ವರೂಪ ದುರ್ಬಲಗೊಳಿಸಿ ಏಕತ್ವದತ್ತ ಕೊಂಡೊ ಯ್ಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಮೂಲ ನಿವಾಸಿಗಳು ಮತ್ತು ಮುಸ್ಲಿಮರ ಮತಗಳನ್ನು ಪಟ್ಟಿ ಯಿಂದ ತೆಗೆದುಹಾಕುವ ಆತಂಕವಿದ್ದು, ಈ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. ಪ್ರಜಾಪ್ರಭುತ್ವವನ್ನು ಹಂತಹಂತವಾಗಿ ದುರ್ಬಲಗೊಳಿಸುವ ಪ್ರಯತ್ನಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯ ಎಂದರು.ಮೋದಿ ಮತ್ತು ಅಮಿತ್ ಶಾ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸಿ, ಮತದಾರರ ಹಕ್ಕುಗಳನ್ನು ರಕ್ಷಿಸುವವರೆಗೂ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಚ್.ಎಚ್. ದೇವರಾಜ್, ಬಿ.ಎಚ್. ಹರೀಶ್, ಹಿರೇಮಗಳೂರು ರಾಮಚಂದ್ರ, ಬೆಟ್ಟಿಗೆರೆ ಪ್ರವೀಣ್, ಶ್ರೀಕಾಂತ್, ರಾಕೇಶ್, ಪ್ರಕಾಶ್, ಮಧು, ಅತಿಕ್ ಕೈಸರ್, ನಾಗಭೂಷಣ್, ನಾಗೇಶ್, ಮಂಜಣ್ಣ, ಸುನಿಲ್, ಕುಸುಮ, ಫಾತಿಮಾ, ಗುಣವತಿ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ನಗರಸಭೆ ಸದಸ್ಯರಾದ ಗುರುಮಲ್ಲಪ್ಪ, ಪರಮೇಶ್, ರಾಜ ಅರಸ್, ಶಾದಾಬ್, ಜಾವೀದ್, ಲಕ್ಷ್ಮಣ್ ಮತ್ತು ಕಲಂದರ್ ಉಪಸ್ಥಿತರಿದ್ದರು.