ಕೇಂದ್ರ ಚುನಾವಣಾ ಆಯೋಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದೆ. ಅಧಿಕಾರದ ಆಸೆಗಾಗಿ ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ಗೆಲುವು ಸಾಧಿಸಿದೆ.

ಹೊಸಪೇಟೆ: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರನ್ನು ಕರ್ತವ್ಯದಿಂದ ವಜಾಗೊಳಿಸಿ, ಬಂಧಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಕೈಗೆ ಕಪ್ಪು ಪಟ್ಟಿ ಧರಿಸಿ ಬೃಹತ್‌ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿರಾಜ್‌ಶೇಖ್, ಜ್ಞಾನೇಶಕುಮಾರ ಅವರ ಏಕಪಕ್ಷೀಯ ನಿರ್ಧಾರದಿಂದ ದೇಶದ 13 ಕೋಟಿಗೂ ಅಧಿಕ ಮತದಾರರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಿ ಮತದಾನದ ಹಕ್ಕಿನಿಂದ ವಂಚಿಸಲಾಗಿದೆ. ಹೀಗಾಗಿ ತಕ್ಷಣ ಅವರನ್ನು ಸೇವೆಯಿಂದ ವಜಾಗೊಳಿಸಿ ಬಂಧಿಸಬೇಕೆಂದು ಒತ್ತಾಯಿಸಿದರು.

ಕೇಂದ್ರ ಚುನಾವಣಾ ಆಯೋಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದೆ. ಅಧಿಕಾರದ ಆಸೆಗಾಗಿ ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ಗೆಲುವು ಸಾಧಿಸಿದೆ. ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಇತರೆ ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿರುವುದು ಅಯೋಗದ ಕಾರ್ಯವೈಖರಿಯ ಬಗ್ಗೆ ಅನುಮಾನ ಪಡುವಂತಾಗಿದೆ ಎಂದರು.

ಎಐಸಿಸಿ ಹಾಗೂ ಕೆಪಿಸಿಸಿ ಸೂಚನೆ ಮೇರೆಗೆ ಸೋಮವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಜ್ಞಾನೇಶ್‌ ಕುಮಾರ ಅವರು ಅಧಿಕಾರದಿಂದ ತೊಲಗುವ ವರೆಗೆ ಕಾಂಗ್ರೆಸ್ ನಿರಂತರ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.

ಶಾಸಕ ಡಾ. ಎನ್.ಟಿ. ಶ್ರೀನಿವಾಸ ಮಾತನಾಡಿ, ಚುನಾವಣಾ ಆಯೋಗದ ಅವೈಜ್ಞಾನಿಕ ನೀತಿಯಿಂದ ರಾಜ್ಯದಲ್ಲಿ ಲಕ್ಷಾಂತರ ಮತದಾರರು ತಮ್ಮ ಮೂಲಭೂತ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಕಿಡಿಕಾರಿದರು.

ಬಳಿಕ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಉಪಾಧ್ಯಕ್ಷರಾದ ಕೆ.ಎಂ. ಹಾಲಪ್ಪ, ಹುಡಾ ಅಧ್ಯಕ್ಷ ಹೆಚ್.ಎನ್. ಮಹಮದ್ ಇಮಾಮ್ ನಿಯಾಜಿ, ನಗರಸಭೆ ಸದಸ್ಯ ಕೆ. ಗೌಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರವಿಕುಮಾರ, ಅಲ್ಲಾಭಕ್ಷಿ, ಕಾಂಗ್ರೆಸ್‌ ಮುಖಂಡರಾದ ರಶ್ಮಿ ಹಿಟ್ನಾಳ್, ಗುಜ್ಜಲ ನಾಗರಾಜ, ಸೋಮಶೇಖರ್ ಬಣ್ಣದಮನೆ, ಡಿ. ವೆಂಟಕರಮಣ, ಕೆ. ರಮೇಶ, ಬಿ. ಮಾರೆಣ್ಣ, ಮರಡಿ ಮಂಜುನಾಥ, ದಾದಾ ಖಲಂದರ್, ಸಿ.ಆರ್. ಭರತ್ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.