ಸಾರಾಂಶ
ಶ್ರೇಯಸ್ ಪಟೇಲ್ ಪರ ಅಧಿಕೃತ ಮತಯಾಚನೆ । ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗಿ
ಕನ್ನಡಪ್ರಭ ವಾರ್ತೆ ಹಾಸನನಗರದ ಸಾಲಗಾಮೆ ರಸ್ತೆ ಬಳಿ ಇರುವ ಶ್ರಿ ಸರಸ್ಪತಿ ದೇವಾಲಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಕೇಂದ್ರದ ಗ್ಯಾರಂಟಿ ಕಾರ್ಡ್ ಇಟ್ಟು ವಿಶೇಷ ಪೂಜೆ ಸಲ್ಲಿಸಿ ಕಾರ್ಡ್ ಪ್ರದರ್ಶಿಸುವುದರ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಪ್ರಚಾರವನ್ನು ಅಧಿಕೃತವಾಗಿ ಆರಂಭಿಸಿದರು.
ನಂತರ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಮಾಧ್ಯಮದೊಂದಿಗೆ ಮಾತನಾಡಿ, ‘ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಮತ್ತು ಮುಖಂಡರು ಸೇರಿ ಶಾರದಾ ಮಾತೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಲು ಮನಸ್ಸು ಕೊಟ್ಟು ಜಯಶೀಲರನ್ನಾಗಿ ಮಾಡಬೇಕೆಂದು ಪ್ರಾರ್ಥಿಸಿ ಚುನಾವಣಾ ಪ್ರಚಾರ ಶುರು ಮಾಡಲಾಗಿದೆ. ನುಡಿದಂತೆ ನಡೆದ ಸರಕಾರವಿದ್ದರೆ ಅದು ಕಾಂಗ್ರೆಸ್ ಸರ್ಕಾರ. ರಾಜ್ಯದಂತೆ ಕೇಂದ್ರದಲ್ಲೂ ಕೂಡ ೫ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಈ ಬಾರಿ ನಮ್ಮ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರಿಗೆ ಹೆಚ್ಚಿನ ಮತಗಳನ್ನು ಕೊಡುವಂತೆ ಹಾಸನ ಜಿಲ್ಲೆಯ ಎಲ್ಲಾ ಮತದಾರರ ಬಂಧುಗಳಲ್ಲಿ ಪ್ರಾರ್ಥನೆ ಮಾಡುತ್ತೇವೆ’ ಎಂದು ಹೇಳಿದರು.ಪರಾಜಿತ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಎಲ್ಲರೂ ಒಳಗೂಡಿ ಸರಸ್ವತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚಾಲನೆ ಕೊಡಲಾಗಿದೆ. ಎರಡು ಲಕ್ಷ ಲೀಡ್‌ನಲ್ಲಿ ಶ್ರೇಯಸ್ ಪಟೇಲ್ ಗೆಲುವು ಸಾಧಿಸುವುದರಲ್ಲಿ ಯಾವ ಸಂಶಯವಿಲ್ಲ ಎಂದು ಹೇಳಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ತಾರಾ ಚಂದನ್ ಮಾತನಾಡಿ, ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ಪರವಾಗಿ ಎಲ್ಲರೂ ಸಹ ಪ್ರಚಾರಕ್ಕೆ ಚಾಲನೆ ಕೊಟ್ಟಿದ್ದು, ನಮ್ಮದು ಜನಪರ, ಬಡವರ ಪಕ್ಷವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಎಲ್ಲಾರೂ ಶ್ರಮಿಸೋಣ’ ಎಂದರು.ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕೇಂದ್ರದ ಭರವಸೆ ಕಾರ್ಡ್ ಬಿಡುಗಡೆ ಮಾಡಲಾಗಿದೆ. ಈ ಕಾರ್ಡ್‌ನಲ್ಲಿ ಐದು ಭರವಸೆಯನ್ನು ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷರು ಸಹಿ ಮಾಡಿದ್ದು, ಇನ್ನು ರಾಷ್ಟ್ರದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಸಹಿ ಮಾಡಿ ಈ ಕಾರ್ಡ್ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಎಚ್.ಕೆ.ಜವರೇಗೌಡ, ಕಾಂಗ್ರೆಸ್ ಮುಖಂಡ ಬಿ.ಕೆ.ಮಂಜುನಾಥ್, ಸತ್ಯಮಂಗಲದ ಮುಖಂಡರಾದ ಮೋಹನ್ ಕುಮಾರ್, ಜಮೀಲಾ, ಅಬ್ದೂಲ್ ಕಯಿಂ, ಕಬ್ಬಳ್ಳಿ ರಾಮಚಂದ್ರ, ಶಂಕರರಾಜು, ನವೀನ್ ಇದ್ದರು.ಮಕ್ಕಳ ಭ್ರಷ್ಟಾಚಾರ ಮುಚ್ಚಲು ಎನ್‌ಡಿಎ ಜತೆ ಮೈತ್ರಿ: ದಲಿತ ಮುಖಂಡ ಶ್ರೀಧರ್ ಕಲಿವೀರ್ಸಕಲೇಶಪುರ: ಭ್ರಷ್ಟಾಚಾರದಲ್ಲಿ ತೊಡಗಿ ಜೈಲು ಸೇರುವ ಹೆದರಿಕೆ ಹೊಂದಿರುವ ಹಲವು ಪ್ರಾದೇಶಿಕ ಪಕ್ಷದ ನಾಯಕರು ಎನ್‌ಡಿಎ ಬೆಂಬಿಸಲಿಸುತ್ತಿದ್ದಾರೆ. ಕರ್ನಾಟಕದ ಜೆಡಿಎಸ್ ನಾಯಕ ಎಚ್.ಡಿ.ದೇವೆಗೌಡ ಬಿಜೆಪಿ ಸಿದ್ಧಾಂತದ ವಿರುದ್ಧವಿದ್ದರು. ಮಕ್ಕಳ ಭವಿಷ್ಯ ಹಾಗೂ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಮುಚ್ಚಿಹಾಕುವ ಕಾರಣದಿಂದ ಎನ್‌ಡಿಎ ಕೂಟ ಸೇರಿದ್ದಾರೆ ಎಂದು ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಶ್ರೀಧರ್ ಕಲೀವಿರ್ ಹೇಳಿದರು.ನಗರದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಭಾರತೀಯ ಜನತಾ ಪಕ್ಷದ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಸಂವಿಧಾನಕ್ಕೆ ಧಕ್ಕೆ ಬರುವುದು ನಿಶ್ಚಿತವಾಗಿದೆ. ಎನ್‌ಡಿಎ ಸರ್ಕಾರ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಸಂಪೂರ್ಣ ಬಹುಮತ ಹೊಂದುವ ಮೂಲಕ ಸಂವಿಧಾನ ಬದಲಾವಣೆಯ ಗುಪ್ತಗುರಿ ಹೊಂದಿದ್ದು ಈ ಮೂಲಕ ದೇಶದಲ್ಲಿ ಮನುವಾದ ಹೇರುವ ಷಡ್ಯಂತ್ರ ನಡೆದಿದೆ. ಆದ್ದರಿಂದ, ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ಬೆಂಬಲ ನೀಡಬೇಕು. ಈ ಮೂಲಕ ಸಂವಿಧಾನ ರಕ್ಷಿಸಲು ಪ್ರಮುಖ ೨೫ ಹಿಂದುಳಿದ ಸಂಘಟನೆಗಳ ಒಕ್ಕೂಟದ ಮುಖಂಡರು ಕಾಂಗ್ರೆಸ್ ಬೆಂಬಲಿಸುವ ಮೂಲಕ ರಾಜ್ಯಾದ್ಯಂತ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ಭಾಗ್ಯ ಕಲೀವಿರ್, ಯಸಳೂರು ಮಂಜು, ಕೆ.ವೈ.ಜಗದೀಶ್, ಡಿಎಸ್‌ಎಸ್ ನಾಯಕ ನಾರಾಯಣದಾಸ್, ಕ್ರೈಸ್ತ ಸಂಘಟನೆಗಳ ಮುಖಂಡ ಸುನೀಲ್ ಕುಮಾರ್ ಇದ್ದರು.
ಫೋಟೋ: ಹಾಸನದ ಸಾಲಗಾಮೆ ರಸ್ತೆ ಬಳಿ ಇರುವ ಶ್ರಿ ಸರಸ್ಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಪಕ್ಷದ ಮುಖಂಡರು ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಪ್ರದರ್ಶಿಸಿದರು.