ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಫೆ.17 ರಂದು ಕಾಂಗ್ರೆಸ್ ಕಾರ್ಯಕರ್ತರ ರಾಜ್ಯ ಮಟ್ಟದ ಸಮಾವೇಶ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಹಿತ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು, ಕಾರ್ಯಕರ್ತರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ರಾ.ಹೆ. 73ರ ರಸ್ತೆಯಲ್ಲಿ ಸಂಚರಿಸುವ ಘನ ವಾಹನಗಳ ಸಂಚಾರದಲ್ಲಿ ಈ ಕೆಳಗಿನಂತೆ ಬದಲಾವಣೆ ಮಾಡಲಾಗಿದೆ. ಸಮಾವೇಶಕ್ಕೆ ಆಗಮಿಸುವ ಕಾರ್ಯಕರ್ತರ ವಾಹನಗಳನ್ನು ನಿಲ್ಲಿಸಲು ಈ ಕೆಳಕಂಡ ಸ್ಥಳಗಳನ್ನು ನಿಗದಿ ಪಡಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಆದೇಶದಲ್ಲಿ ತಿಳಿಸಿದ್ದಾರೆ.ಘನ ವಾಹನಗಳ ಸಂಚಾರದಲ್ಲಿ ಬದಲಾವಣೆ- ಉಡುಪಿ ಕಡೆಯಿಂದ ಮಂಗಳೂರು ನಗರದ ಮೂಲಕ ಬಿ.ಸಿ.ರೋಡ್-ಬೆಂಗಳೂರು ಕಡೆಗೆ ಸಂಚರಿಸುವ ಘನ ವಾಹನಗಳು ನಂತೂರು-ಪಂಪ್‌ವೆಲ್-ತೊಕ್ಕೊಟ್ಟು-ಮುಡಿಪು-ಮೆಲ್ಕಾರ್ ಮೂಲಕ ಸಂಚರಿಸುವುದು.
-ಬೆಂಗಳೂರು -ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಘನ ವಾಹನಗಳು ಮೆಲ್ಕಾರ್- ಮುಡಿಪು-ತೊಕ್ಕೊಟ್ಟು-ಪಂಪ್‌ವೆಲ್ ಮೂಲಕ ಸಂಚರಿಸುವುದು. ಈ ತಾತ್ಕಾಲಿಕ ಸಂಚಾರ ಮಾರ್ಪಾಡು ಫೆ.17ರಂದು ಬೆಳಗ್ಗೆ 9.00 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೆ ಊರ್ಜಿತದಲ್ಲಿರುತ್ತದೆ.ಕಾರ್ಯಕ್ರಮಕ್ಕೆ ಆಗಮಿಸುವ ವಾಹನ ಪಾರ್ಕಿಂಗ್ ಸ್ಥಳಗಳ ವಿವರ:- ಬಂಟ್ವಾಳ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಗಣ್ಯರ ಕಾರುಗಳು ಹಾಗೂ ಸಾರ್ವಜನಿಕರ ಮೋಟಾರು ಸೈಕಲ್‌ಗಳನ್ನು ಕಾಮತ್ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು. ಸಾರ್ವಜನಿಕರ ಕಾರುಗಳನ್ನು ಅಡಾರ್‌ನ ಕರ್ಮಾರ್ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು. ಬಂಟ್ವಾಳ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಬಸ್‌ಗಳು ಕಾರ್ಯಕರ್ತರನ್ನು ಕಾಮತ್ ಪಾರ್ಕಿಂಗ್ ಬಳಿ ಇಳಿಸಿ ಅಲ್ಲಿಂದ ಮುಂದುವರಿದು ಬಸ್‌ನ್ನು ಕಣ್ಣೂರಿನಲ್ಲಿ ಯೂ ಟನ್ ಮಾಡಿ ಮೋತಿಶ್ಯಾಮ್-ಶಾ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.
- ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಗಣ್ಯರ ಕಾರುಗಳನ್ನು ಅಡ್ಯಾರ್ ಗಾರ್ಡನ್‌ನಲ್ಲಿ ಪಾರ್ಕಿಂಗ್ ಮಾಡುವುದು.- ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಬಸ್‌ಗಳ ಚಾಲಕರು ಕಾರ್ಯಕರ್ತರನ್ನು ಅಡ್ಯಾರ್ ಗಾರ್ಡನ್ ಮುಂಭಾಗ ಇಳಿಸಿ ಸೋಮನಾಥಕಟ್ಟೆಯಲ್ಲಿ ಯೂ ಟರ್ನ್ ಮಾಡಿ ಕಣ್ಣೂರು ಮಸೀದಿ ಬಳಿ ಇರುವ ಷಾ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.
-ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಮೋಟಾರ್ ಸೈಕಲ್‌ಗಳನ್ನು ಅಡ್ಯಾರ್ ಗಾರ್ಡನ್ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.-ಅಡ್ಯಾರ್ ಕಟ್ಟೆಯಲ್ಲಿರುವ ಜಯಶೀಲರವರ ಮೈದಾನದಲ್ಲಿ ಕೂಡಾ ಪಾರ್ಕಿಂಗ್ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಇಂದು ಮುಖ್ಯಮಂತ್ರಿಗಳ ಆಗಮನ: ಡ್ರೋನ್ ಹಾರಾಟ ನಿಷೇಧ
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ನಗರದಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಸಮಾವೇಶ ಹಾಗೂ ವಾಮಂಜೂರಿನ ತಿರುವೈಲ್‍ನಲ್ಲಿ ಕಂಬಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರು ನಗರಕ್ಕೆ ಆಗಮಿಸಲಿದ್ದಾರೆ.ಮುಖ್ಯಮಂತ್ರಿಗಳ ಸುರಕ್ಷತೆ ಮತ್ತು ಭದ್ರತೆಯ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಫೆಬ್ರವರಿ 17 ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಂಗಳೂರು ನಗರದ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಆವರಣದ ಸುತ್ತಮುತ್ತ ಐದು ಕಿಲೋಮೀಟರ್ ವ್ಯಾಪ್ತಿಯನ್ನು ಹಾಗೂ ವಾಮಂಜೂರಿನ ತಿರುವೈಲಿನಲ್ಲಿ ನಡೆಯಲಿರುವ ಕಂಬಳ ಕಾರ್ಯಕ್ರಮದ ಸುತ್ತಮುತ್ತ 5 ಕಿ.ಮೀ ವ್ಯಾಪ್ತಿಯನ್ನು ತಾತ್ಕಾಲಿಕವಾಗಿ ರೆಡ್‍ಝೋನ್ ಎಂದು ಪರಿಗಣಿಸಿ ಆ ಪ್ರದೇಶದಲ್ಲಿ ಯಾವುದೇ ಮಾದರಿಯ ಡ್ರೋನ್ ಹಾರಾಟ ಬಳಕೆ ಮತ್ತು ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಆದೇಶಿಸಿದ್ದಾರೆ.