ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕು ದಂಡಾಧಿಕಾರಿ ವಿರುದ್ಧ ಮಾಡುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷದ ಬೆಂಬಲವೂ ಇದೆ ಎಂದು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಎಲ್. ಪಿ. ಪ್ರಕಾಶ್ ಗೌಡ ತಿಳಿಸಿದರು.ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕು ದಂಡಾಧಿಕಾರಿ ನವೀನ್ ಕುಮಾರ್ ಅವರು ಕಾಂಗ್ರೆಸ್ ಸರ್ಕಾರದ ಬಗ್ಗೆ ಕೆಟ್ಟ ಶಬ್ಧ ಬಳಕೆ ಮಾಡಿರುವುದನ್ನು ಖಂಡಿಸಿ ತಾಲೂಕಿನ ವಿವಿಧಪರ ಸಂಘಟನೆಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷದ ಬೆಂಬಲವೂ ಇದೆ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರು ಸಾರ್ವಜನಿಕರಿಗೆ ಮತ್ತು ಪ್ರತಿಭಟನಾಕಾರರಿಗೆ ಲಿಖಿತ ರೂಪದಲ್ಲಿ ದೂರು ಅರ್ಜಿಯನ್ನು ನೀಡುವಂತೆ ಕೇಳಿರುವುದು ಸರಿಯಲ್ಲ. ತಾಲೂಕಿನ ಜನಪ್ರತಿನಿಧಿಯಾಗಿ ಹಾಗೂ ತಾಲೂಕಿನ ಸ್ಥಳೀಯ ಶಾಸಕರಾಗಿ ಎಲ್ಲಾ ಇಲಾಖೆಯ ಆಡಳಿತವು ತಮ್ಮ ಕೈಯಲ್ಲಿದೆ. ಆದರೆ ಇಂತಹ ವಿಷಯದಲ್ಲಿ ಸಾರ್ವಜನಿಕರಿಂದ ಮತ್ತು ಪ್ರತಿಭಟನಾಕಾರರಿಂದ ತಾಲೂಕು ದಂಡಾಧಿಕಾರಿಗಳ ಮೇಲೆ ಲಿಖಿತ ಹೇಳಿಕೆಯನ್ನು ನೀಡುವಂತೆ ಕೇಳಿರುವುದು ಎಷ್ಟರ ಮಟ್ಟಿಗೆ ಸರಿ. ಈಗಾಗಲೇ ನಡೆಯುತ್ತಿರುವ ಕೆಲ ಭ್ರಷ್ಟಾಚಾರಗಳ ಬಗ್ಗೆ ಸಾರ್ವಜನಿಕರಿಂದ ಮತ್ತು ಪ್ರತಿಭಟನಾಕಾರರಿಂದ ಅರ್ಜಿಯನ್ನು ಪಡೆದು ದೂರಿನ ಬಗ್ಗೆ ತನಿಖೆ ಮಾಡಿದ್ದೀರಾ ಒಮ್ಮೆ ಆಲೋಚಿಸಿ.
ಯಾರೇ ತಪ್ಪು ಮಾಡಿದರು ಕೂಡ ತಪ್ಪೇ ಹೊರತು ಸರಿ ಎಂದು ನಾವು ಹೇಳುವುದಿಲ್ಲ. ಆದರೆ ಶಾಸಕರು ನೀಡಿರುವ ಹೇಳಿಕೆ ಲಘುವಾಗಿದೆ. ಇಂತಹ ಹೇಳಿಕೆಗಳನ್ನು ನೀಡುವ ಮೊದಲು ಆಲೋಚನೆ ಮಾಡಿ ಹೇಳಿಕೆ ನೀಡುವುದು ಸೂಕ್ತವಾಗಿದೆ. ಜನ ಮರಳೋ ಜಾತ್ರೆ ಮರಳೋ ಎಂದಂತೆ ಶಾಸಕರು ಎಲ್ಲಾ ವಿಚಾರದಲ್ಲೂ ಕೂಡ ಮೂಗು ತೂರಿಸುವರು ಸಾಮಾನ್ಯ. ಆದರೆ ಇಂತಹ ವಿಷಯದಲ್ಲಿ ಹಿಂದೇಟು ಹಾಕುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬುವುದು ಆಲೋಚನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಪುರಸಭಾ ಸದಸ್ಯ ಹಾಗೂ ಭೂ ನ್ಯಾಯಮಂಡಳಿ ಸದಸ್ಯ ಪ್ರಕಾಶ್ ಮಾತನಾಡಿ, ಶಾಸಕರು ಎಲ್ಲಾ ವಿಷಯದಲ್ಲೂ ಮುಂದೆ ಇರುತ್ತಾರೆ. ಆದರೆ ಇಡೀ ರಾಜ್ಯವೇ ನಮ್ಮ ತಾಲೂಕಿನ ಭ್ರಷ್ಟಚಾರದ ಬಗ್ಗೆ ನೋಡುತ್ತಿದ್ದರೂ ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಇರುತ್ತಾರೆ, ಜನ ಮೊದಲಿನಂತಲ್ಲ ಎಲ್ಲವನ್ನೂ ಸೂಕ್ಷವಾಗಿ ಗಮನಿಸುತ್ತಿದ್ದಾರೆ. ಸರ್ಕಾರಕ್ಕೆ ಪತ್ರ ವ್ಯವಹಾರ ಮಾಡಿ ಕೂಡಲೆ ವರ್ಗಾವಣೆ ಮಾಡಿಸುವುದು ಕ್ಷೇತ್ರದ ಶಾಸಕರ ಜವಾಬ್ದಾರಿಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ. ಆರ್. ಮೂರ್ತಿ, ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ರಾಕೇಶ್, ತಾಲೂಕು ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಕಮಿಟಿಯ ಸದಸ್ಯ ಮೋಹನ್ ಕಲ್ಕೆರೆ ಹಾಜರಿದ್ದರು.