ಸಾರಾಂಶ
ನಮ್ಮ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದೆ. ಈ ಯೋಜನೆಯಿಂದ ಮನೆ ಮನೆ ಬಾಗಿಲಿಗೆ ಹೋಗಿ ಮತ ಕೇಳಲು ಕಾರ್ಯಕರ್ತರಿಗೆ, ಅಭ್ಯರ್ಥಿಗಳಿಗೆ ಅವಕಾಶ ಸಿಕ್ಕಿದೆ ಎಂದು ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ ಹೇಳಿದರು.
ಕನ್ನಡಪ್ರಭ ವಾರ್ತೆ ಕಾರವಾರ
ರಾಜ್ಯ ವಿಧಾನಸಭಾ ಚುನಾವಣೆಗೂ ಮೊದಲು ಐದು ಗ್ಯಾರಂಟಿ ಕಾರ್ಡ್ ಹಂಚಿ ಮತದಾರರಿಗೆ ಭರವಸೆ ನೀಡಲಾಗಿತ್ತು. ಮತದಾರರು ಬಹುಮತದಿಂದ ಕಾಂಗ್ರೆಸ್‌ಗೆ ಅಧಿಕಾರ ನೀಡಿದರು. ಅವರ ನಂಬಿಕೆ ಉಳಿಸಿಕೊಂಡಿದ್ದೇವೆ. ಕೆಲವೇ ಕೆಲವು ದಿನದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಲಾಗಿದೆ ಎಂದು ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ ಅಭಿಪ್ರಾಯಿಸಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ವಿಧಾಸಭಾ ಚುನಾವಣೆಗಳು ಹಿಂದುತ್ವದ ಆಧಾರದಲ್ಲಿ ನಡೆದಿತ್ತು. ಆದರೆ, ಕಳೆದ ರಾಜ್ಯ ವಿಧಾಸಭಾ ಚುನಾವಣೆ ಜನರ ಅವಶ್ಯಕತೆ ಬಗ್ಗೆ ನಡೆದ ಚುನಾವಣೆ ಆಗಿತ್ತು. ಇದನ್ನು ಅರಿತು ಕಾಂಗ್ರೆಸ್ ಗ್ಯಾರಂಟಿ ಯೋಜನೆ ಘೋಷಿಸಿದ್ದು, ಜನತೆ ಕೈಹಿಡಿದಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳಲಾಗಿದೆ. ಇದನ್ನೆ ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆಯನ್ನೂ ಎದುರಿಸುತ್ತೇವೆ. ಮತ ಕೇಳುತ್ತೇವೆ. ಕಾಂಗ್ರೆಸ್‌ಗೆ ಲೋಕಸಭಾ ಚುನಾವಣೆಯಲ್ಲೂ ಗೆಲವು ಸಿಗಲಿದೆ ಎಂದರು.
ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೆ ಯೋಜನೆ ರೂಪಿಸುವುದು ಸಹಜವಾಗಿದೆ. ಆದರೆ, ಪರಿಣಾಮಕಾರಿಯಾಗಿ ಅನುಷ್ಠಾನ ಆಗುವುದು ಕಷ್ಟಸಾಧ್ಯ. ಆದರೆ, ನಮ್ಮ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದೆ. ಈ ಯೋಜನೆಯಿಂದ ಮನೆ ಮನೆ ಬಾಗಿಲಿಗೆ ಹೋಗಿ ಮತ ಕೇಳಲು ಕಾರ್ಯಕರ್ತರಿಗೆ, ಅಭ್ಯರ್ಥಿಗಳಿಗೆ ಅವಕಾಶ ಸಿಕ್ಕಿದೆ. ರಾಜ್ಯದಲ್ಲಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ಒಲವಿದೆ. ಉತ್ತರ ಕನ್ನಡದಲ್ಲಿ ೨೦ ವರ್ಷದ ಬಳಿಕ ಕಾಂಗ್ರೆಸ್ ಅಧಿಪತ್ಯ ಸ್ಥಾಪಿಸಲಿದೆ. ನಮ್ಮ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿರುವ ಡಾ. ಅಂಜಲಿ ನಿಂಬಾಳಕರ ವಿದ್ಯಾವಂತೆ ಕೂಡಾ ಆಗಿದ್ದಾರೆ. ಖಾನಾಪುರ ಶಾಸಕರಾಗಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಹೀಗಾಗಿ, ಈ ಬಾರಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಅಭಿಪ್ರಾಯಿಸಿದ್ದಾರೆ. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಅಭ್ಯರ್ಥಿ ಬೇರೆ ಜಿಲ್ಲೆಯವರಾಗಿರಬಹುದು. ಆದರೆ, ಇದೇ ಕ್ಷೇತ್ರದವರು. ಅಂಜಲಿ ಆಯ್ಕೆ ಅನಿವಾರ್ಯತೆವಾಗಿ ನಡೆದಿಲ್ಲ. ಮರಾಠಾ ಪ್ರಾತಿನಿಧ್ಯದ ಆಧಾರದ ಮೇಲೆ ಅವರನ್ನು ನಿಲ್ಲಿಸಲಾಗಿದೆ. ಲೋಕಸಭೆ, ವಿಧಾನಸಭೆ ಮಾನದಂಡ ಬೇರೆ ಬೇರೆ ಇರುತ್ತದೆ. ಮಾರ್ಗರೇಟ್ ಆಳ್ವ ನಂತರ ನಮ್ಮ ಜಿಲ್ಲೆಯ ಮಹಿಳಾ ಸಂಸದೆ ಆಗುತ್ತಾರೆ ಎನ್ನುವ ನಂಬಿಕೆಯಿದೆ ಎಂದು ಹೇಳಿದರು.ಪುರುಷೋತ್ತಮ ನಾಯ್ಕ, ಅಣ್ಣಪ್ಪ ನಾಯ್ಕ, ನಾಗರಾಜ ಮುರುಡೇಶ್ವರ, ಅಶೋಕ ಗೌಡ, ಪಾಂಡುರಂಗ ಗೌಡ, ಶಂಕರ ಅಡಿಗುಂದಿ, ಚಂದ್ರಕಾಂತ ಆಗೇರ ಮೊದಲಾದವರು ಇದ್ದರು.