ಗ್ಯಾರಂಟಿ ಬಂದ್‌ ಮಾಡ್ತೇವೆಂದು ಕಾಂಗ್ರೆಸ್‌ ಧಮ್ಕಿ ವಿಜಯೇಂದ್ರ

| Published : Feb 02 2024, 01:01 AM IST

ಗ್ಯಾರಂಟಿ ಬಂದ್‌ ಮಾಡ್ತೇವೆಂದು ಕಾಂಗ್ರೆಸ್‌ ಧಮ್ಕಿ ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸೋಲಾಗಿದೆ. ಆದರೆ ಲೋಕಸಭೆ ಚುನಾವಣೆ ನಮ್ಮ ಮುಂದಿರುವ ದೊಡ್ಡ ಸವಾಲು. ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಗ್ಯಾರಂಟಿ

ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿದ್ದ ಬಿ.ವೈ. ವಿಜಯೇಂದ್ರಗೆ ಅದ್ಧೂರಿ ಸ್ವಾಗತ ದೊರೆಯಿತು. ಲೋಕಸಭೆ ಚುನಾವಣೆಯೇ ನಮ್ಮ ಮುಂದಿರುವ ದೊಡ್ಡ ಸವಾಲು ಈ ಸವಾಲನ್ನು ಎದುರಿಸಲು ಎಲ್ಲರೂ ಸಜ್ಜಾಗಬೇಕು ಎಂದು ಕಾರ್ಯಕರ್ತರಿಗೆ ಇದೇ ವೇಳೆ ಕರೆ ನೀಡಿದರು. ಅಲ್ಲದೇ, ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿಯೇ ಗೆಲ್ಲುತ್ತದೆ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲದಿದ್ದಲ್ಲಿ ಗ್ಯಾರಂಟಿ ಬಂದ್‌ ಮಾಡ್ತೇವೆ ಎಂದು ಕಾಂಗ್ರೆಸ್‌ ಮತದಾರರಿಗೆ ಧಮ್ಕಿ ಹಾಕುತ್ತಿದೆ ಎಂದು ಕಿಡಿಕಾರಿದರು.

ಇಲ್ಲಿನ ಹಳೇ ಕೋರ್ಟ್‌ ಸರ್ಕಲ್‌ ಬಳಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಮಹಾನಗರ ಹಾಗೂ ಗ್ರಾಮೀಣ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಸ್ವಾಗತ ಕಾರ್ಯಕ್ರಮ ನಡೆಯಿತು. ಸೇಬುಹಣ್ಣು, ಚಂಡು ಹೂ ಹಾಗೂ ಗುಲಾಬಿ ಹೂವಿನಿಂದ ತಯಾರಿಸಲಾದ ಬೃಹತ್‌ ಮಾಲೆಗಳನ್ನು ಕ್ರೇನ್‌ ಮೂಲಕ ಬಿ.ವೈ.ವಿಜಯೇಂದ್ರ ಅವರಿಗೆ ಅರ್ಪಿಸಲಾಯಿತು.

ಇಲ್ಲಿಯ ಹಳೇ ಕೋರ್ಟ್‌ ವೃತ್ತ, ದೇಶಪಾಂಡೆ ನಗರ ಕ್ರಾಸ್‌ ಮಾರ್ಗವಾಗಿ ತೆರೆದ ವಾಹನದಲ್ಲಿ ಪಕ್ಷದ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಪಕ್ಷದ ಧ್ವಜ ಹಿಡಿದು ಕಾರ್ಯಕರ್ತರು ಮತ್ತು ಅಭಿಮಾನಿಗಳು ಬಿಎಸ್‌ವೈ ಮತ್ತು ಬಿ.ವೈ.ವಿಜಯೇಂದ್ರ ಪರ ಘೋಷಣೆ ಕೂಗಿದರು. ಜೈ ಶ್ರೀರಾಮ ಜೈ ಜೈ ಶ್ರೀರಾಮ ಎಂದು ಘೋಷಣೆ ಮುಗಿಲು ಮುಟ್ಟಿತ್ತು. ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.

ಮೆರವಣಿಗೆ ವೇಳೆಯಲ್ಲಿ ವಿಜಯೇಂದ್ರ ಅವರು ರಸ್ತೆ ಇಕ್ಕೆಲಗಳಲ್ಲಿ ನಿಂತ ಜನರತ್ತ ಕೈಬೀಸುತ್ತಿದ್ದರು. ಪಕ್ಷದ ಕಚೇರಿಗೆ ಆಗಮಿಸುತ್ತಿದ್ದ ವೇಳೆ ಪುಷ್ಪ ಮಳೆಗೈದು ಮಹಿಳೆಯರು ಸ್ವಾಗತಿಸಿಕೊಂಡರು. ಇದೇ ವೇಳೆ ಮಹಿಳೆಯರು ರಾಜ್ಯಾಧ್ಯಕ್ಷರೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂತಸ ಪಟ್ಟರು.

ಪಕ್ಷದ ಕಚೇರಿ ಬಳಿಯೇ ತೆರೆದ ವಾಹನದಲ್ಲಿ ಮಾತನಾಡಿದ ವಿಜಯೇಂದ್ರ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸೋಲಾಗಿದೆ. ಆದರೆ ಲೋಕಸಭೆ ಚುನಾವಣೆ ನಮ್ಮ ಮುಂದಿರುವ ದೊಡ್ಡ ಸವಾಲು. ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಗ್ಯಾರಂಟಿ ಎಂದರು.

ಆದರೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಪಕ್ಷ ಲೋಕಸಭಾ ಚುನಾವಣೆಯಲ್ಲೂ ಗೆದ್ದೆ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿತ್ತು. ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಕಾಂಗ್ರೆಸ್‌ ಪಕ್ಷದ ಜಂಘಾಬಲವೇ ಉಡಗಿಸಿದೆ ಎಂದರು.

ಇತ್ತೀಚೆಗೆ ರಾಜಕೀಯದಲ್ಲಾದ ವಿದ್ಯಮಾನ, ಬದಲಾವಣೆಗಳ ಪರಿಣಾಮ ಪಕ್ಷ ಮತ್ತಷ್ಟು ಬಲಿಷ್ಠಗೊಂಡಿದೆ. ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಭಿವೃದ್ಧಿ ಮರೆತು ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ. ಎಂಟು ತಿಂಗಳಿಂದ ಅಧಿಕಾರ ನಡೆಸುತ್ತಿದ್ದರೂ ಶಾಸಕರಿಗೆ ₹1 ಅನುದಾನ ಸಹ ನೀಡಿಲ್ಲ. ಯಾವುದೇ ಹೊಸ ಯೋಜನೆ ಜಾರಿಗೊಳಿಸಿಲ್ಲ ಕಿಡಿಕಾರಿದರು.

ಈಗಾಗಲೇ ಕಾಂಗ್ರೆಸ್‌ ಶಾಸಕ ಬಾಲಕೃಷ್ಣ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲದಿದ್ದಲ್ಲಿ ಗ್ಯಾರಂಟಿ ಯೋಜನೆಗಳೆಲ್ಲ ಬಂದ್‌ ಆಗಲಿವೆ ಎಂದು ಹೇಳಿಕೆ ನೀಡಿದ್ದಾರೆ. ಇದು ಶಾಸಕರ ಮಾತಲ್ಲ. ಬದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನದಾಳದ ಮಾತನ್ನು ಹೀಗೆ ಶಾಸಕರ ಮೂಲಕ ಹೇಳಿಸುತ್ತಿದ್ದಾರೆ. ಈ ಮೂಲಕ ಮತದಾರರಿಗೆ ಧಮ್ಕಿ ಹಾಕುತ್ತಿದ್ದಾರೆ. ಅಭಿವೃದ್ಧಿ ಎಂಬುದೇ ಇಲ್ಲವಾಗಿದೆ. ಇದರಿಂದ ಕಾಂಗ್ರೆಸ್‌ ಮತ ಹಾಕಿದವರೇ ಇದೀಗ ಹಿಡಿಶಾಪ ಹಾಕುವಂತಾಗಿದೆ ಎಂದರು.

ಈ ಸಲ ಲೋಕಸಭೆ ಚುನಾವಣೆಯಲ್ಲಿ ಎಲ್ಲ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ನಿಶ್ಚಿತ ಎಂದ ಅವರು, ಜಗದೀಶ ಶೆಟ್ಟರ್‌ ಮರಳಿ ಬಿಜೆಪಿಗೆ ಬಂದಿರುವುದು ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದು ನುಡಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್‌. ಪಾಟೀಲ, ಪ್ರದೀಪ ಶೆಟ್ಟರ್‌, ಎಸ್‌.ವಿ.ಸಂಕನೂರ, ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ರಾಜಣ್ಣ ಕೊರವಿ, ಪ್ರಭು ಕುಂದಗೋಳಮಠ, ಸಂತೋಷ ಚವ್ಹಾಣ, ಅಶೋಕ ಕಾಟವೆ, ವೆಂಕಟೇಶ ಕಾಟವೆ, ಅನೂಪ ಬಿಜವಾಡ ಸೇರಿದಂತೆ ಇತರರು ಇದ್ದರು.