ಕಾಂಗ್ರೆಸ್ ಟಿಕೆಟ್ ವಂಚಿತ ವಿನಯಕುಮಾರ್‌ ನಾಮಪತ್ರ

| Published : Apr 13 2024, 01:01 AM IST

ಕಾಂಗ್ರೆಸ್ ಟಿಕೆಟ್ ವಂಚಿತ ವಿನಯಕುಮಾರ್‌ ನಾಮಪತ್ರ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ ಕೈ ತಪ್ಪಿದ, ಬೆಂಗಳೂರಿನ ಇನ್‌ಸೈಟ್ಸ್ ಅಕಾಡೆಮಿ ಸಂಸ್ಥಾಪಕ, ಕಕ್ಕರಗೊಳ್ಳ ಜಿ.ಬಿ.ವಿನಯಕುಮಾರ ಪಕ್ಷೇತರ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ದಾವಣಗೆರೆ ಡಿಸಿ ಅವರಿಗೆ ಸಲ್ಲಿಸಿದರು.

- ಪಕ್ಷೇತರ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಅಹಿಂದ ಯುವ ನಾಯಕ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ ಕೈ ತಪ್ಪಿದ, ಬೆಂಗಳೂರಿನ ಇನ್‌ಸೈಟ್ಸ್ ಅಕಾಡೆಮಿ ಸಂಸ್ಥಾಪಕ, ಕಕ್ಕರಗೊಳ್ಳ ಜಿ.ಬಿ.ವಿನಯಕುಮಾರ ಪಕ್ಷೇತರ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದರು.

ನಗರದ ಡಿಸಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಅವರಿಗೆ ನಾಲ್ವರು ಬೆಂಬಲಿಗರ ಸಮೇತ ಆಗಮಿಸಿದ ವಿನಯಕುಮಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ಇದರಿಂದ ಕಾಂಗ್ರೆಸ್ಸಿಗೆ ಅಧಿಕೃತವಾಗಿ ಬಂಡಾಯ ಸಾರಿದಂತಾಗಿದೆ.

ಅಲ್ಲದೇ, ಏ.18ರಂದು ಮತ್ತೊಮ್ಮೆ ಅದ್ಧೂರಿಯಾಗಿ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಜಿಲ್ಲಾಡಳಿತ ಭವನಕ್ಕೆ ಧಾವಿಸಿ, ನಾಮಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ನನ್ನನ್ನು ಯಾರೂ ಸಂಪರ್ಕಿಸಿಲ್ಲ:

ಜಿ.ಬಿ.ವಿನಯಕುಮಾರ ನಾಮಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆ ಕ್ಷೇತ್ರದ ಜನರ ಅಪೇಕ್ಷೆಯಂತೆ ಪಕ್ಷೇತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ನಾನು ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ ನಂತರ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಗಿನೆಲೆ ಕನಕ ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಸಮಾಜ, ಮುಖಂಡರ ಬಗ್ಗೆ ಅಪಾರ ಗೌರವ, ಪ್ರೀತಿ, ವಿಶ್ವಾಸವಿದೆ ಎಂದರು.

ಈಗಾಗಲೇ ಕ್ಷೇತ್ರದ ಬಹುತೇಕ ಹಳ್ಳಿಗಳಿಗೆ ಹೋಗಿ ಬಂದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಹಿಂದ ವರ್ಗ ಮಾತ್ರವಲ್ಲ ಎಲ್ಲ ಸಮಾಜಗಳ ಮತದಾರರೂ ಬೆಂಬಲಿಸಿ, ಆಶೀರ್ವದಿಸುವ ವಿಶ್ವಾಸವಿದೆ ಎಂದು ತಿಳಿಸಿದರು.

ಯುವ ಮುಖಂಡ ಶರತ್‌ಕುಮಾರ, ನಗರಸಭೆ ಮಾಜಿ ಸದಸ್ಯೆ ಶಾಮನೂರು ಗೀತಾ ಮುರುಗೇಶ, ಅಹಿಂದ ವರ್ಗಗಳ ಮುಖಂಡರು ಇದ್ದರು.

- - - ಬಾಕ್ಸ್‌ ಕಾಂಗ್ರೆಸ್ ಬಂಡಾಯದ ವಿನಯ್ ₹56.21 ಕೋಟಿ ಒಡೆಯ

ದಾವಣಗೆರೆ: ಕಾಂಗ್ರೆಸ್‌ ಬಂಡಾಯಗಾರ, ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ₹56.21 ಕೋಟಿ ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ. ನಾಮಪತ್ರ ಜೊತೆಗೆ ಸಲ್ಲಿಸಿದ ಪ್ರಮಾಣ ಪತ್ರದ ಪ್ರಕಾರ 2022-23ನೇ ಸಾಲಿನಲ್ಲಿ ಒಟ್ಟು ₹4.14 ಕೋಟಿ ಆದಾಯವಿದೆ. ವಿನಯ್‌ ಒಟ್ಟು ಚರಾಸ್ತಿ ಮೌಲ್ಯ ₹9.07 ಕೋಟಿ ಇದ್ದು, ಸ್ಥಿರಾಸ್ತಿ ಮೌಲ್ಯ ₹47.14 ಕೋಟಿಗಳಾಗಿವೆ. ವಿನಯ್‌ ಕೈಯಲ್ಲಿ ₹1.75 ಲಕ್ಷ, ಬ್ಯಾಂಕ್‌ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ₹4.20 ಕೋಟಿ ಠೇವಣಿ, ₹40.97 ಲಕ್ಷ ಬಾಂಡ್‌ಗಳ ಮೇಲೆ ಹೂಡಿಕೆ ಮಾಡಿದ್ದು, ₹4.42 ಕೋಟಿ ಹೂಡಿಕೆ ಮಾಡಿದ್ದಾರೆ.ಅಲ್ಲದೇ, ₹14.41 ಕೋಟಿ ಮೌಲ್ಯದ 92.50 ಎಕರೆ ಕೃಷಿ ಜಮೀನು, ವಿವಿಧ ಬ್ಯಾಂಕ್, ಸಂಸ್ಥೆಗಳಲ್ಲಿ ₹9.58 ಕೋಟಿ ಸಾಲವಿದೆ. ಜಿಎಸ್‌ಟಿ, ಪಾಲಿಕೆ ತೆರಿಗೆ ಸೇರಿದಂತೆ ಸರ್ಕಾರಕ್ಕೆ ₹1.31 ಕೋಟಿ ಪಾವತಿಸಬೇಕಿದೆ. ಬೆಂಗಳೂರಿನ ಗಾರ್ಡನ್ ಸಿಟಿ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪೂರೈಸಿರುವ ವಿನಯ್ ಪತ್ನಿ ಎಸ್.ಎಸ್.ಸ್ವಾತಿ ಅವರ ಕೈಯಲ್ಲಿ ₹5 ಸಾವಿರ ನಗದು, ₹13.48 ಲಕ್ಷ ಠೇವಣಿ, ₹59.61 ಲಕ್ಷ ಹೂಡಿಕೆ ಮಾಡಿದ್ದಾರೆ.ವಿನಯ್ ಬಳಿ ಯಾವುದೇ ಚಿನ್ನಾಭರಣ ಇಲ್ಲ, ವಾಹನಗಳೂ ಇಲ್ಲ. ಪೊಲೀಸ್ ಠಾಣೆಯಲ್ಲಿ ಪ್ರಕರಣಗಳೂ ಇಲ್ಲವೆಂದು ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

- - - -12ಕೆಡಿವಿಜಿ6:

ಕಾಂಗ್ರೆಸ್ ಟಿಕೆಟ್ ವಂಚಿತ ಜಿ.ಬಿ.ವಿನಯಕುಮಾರ ದಾವಣಗೆರೆ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಬೆಂಬಲಿಗರೊಂದಿಗೆ ಆಗಮಿಸಿ ಜಿಲ್ಲಾ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.