ಉಪ ಚುನಾವಣೆಗೆ ಸಜ್ಜಾಗಿರುವ ಮೂರು ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರವಾದ ಸಂಡೂರಿನಲ್ಲಿ ಎದ್ದಿದ್ದ ತುಸು ಭಿನ್ನ ಸ್ವರವನ್ನು ಬದಿಗೆ ಸರಿಸಿ ಅಭ್ಯರ್ಥಿ ಅಖೈರು ಮಾಡುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ.

ಎಸ್‌. ಗಿರೀಶ್ ಬಾಬು

ಕನ್ನಡಪ್ರಭ ವಾರ್ತೆ, ಬೆಂಗಳೂರು

ಉಪ ಚುನಾವಣೆಗೆ ಸಜ್ಜಾಗಿರುವ ಮೂರು ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರವಾದ ಸಂಡೂರಿನಲ್ಲಿ ಎದ್ದಿದ್ದ ತುಸು ಭಿನ್ನ ಸ್ವರವನ್ನು ಬದಿಗೆ ಸರಿಸಿ ಅಭ್ಯರ್ಥಿ ಅಖೈರು ಮಾಡುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ. ಆದರೆ, ಉಳಿದ ಎರಡು ಕ್ಷೇತ್ರಗಳಾದ ಶಿಗ್ಗಾವಿ ಹಾಗೂ ಚನ್ನಪಟ್ಟಣ ಕ್ಷೇತ್ರಗಳ ಗೋಜಲು ಮುಂದುವರೆದಿದೆ.

ಈ ಪೈಕಿ ಟಿಕೆಟ್‌ಗಾಗಿ ಮುಸ್ಲಿಂ ಹಾಗೂ ಲಿಂಗಾಯತ ಸಮುದಾಯದ ನಡುವೆ ಪೈಪೋಟಿ ನಡೆದಿರುವ ಶಿಗ್ಗಾವಿ ಕ್ಷೇತ್ರದ ಬಗ್ಗೆ ಹೈಕಮಾಂಡ್‌ ಖಚಿತ ನಿರ್ಧಾರಕ್ಕೆ ಬಂದಿದೆ. ಕಳೆದ ಐದು ಬಾರಿ ಟಿಕೆಟ್‌ ಪಡೆದು ಸೋಲುಂಡಿದ್ದ ಮುಸ್ಲಿಂ ಸಮುದಾಯಕ್ಕೆ ಈ ಬಾರಿ ಟಿಕೆಟ್‌ ಬೇಡ. ಬದಲಾಗಿ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್‌ ನೀಡಬೇಕು ಎಂಬುದು ಆ ನಿರ್ಧಾರ.

ಆದರೆ, ಇದರಿಂದ ಅಸಮಾಧಾನಗೊಳ್ಳಲಿರುವ ಅಲ್ಪಸಂಖ್ಯಾತರನ್ನು ಸಮಾಧಾನಗೊಳಿಸುವುದು ಹೇಗೆ ಎಂಬ ಚಿಂತೆ ಪಕ್ಷವನ್ನು ಕಾಡುತ್ತಿದೆ. ಭವಿಷ್ಯದಲ್ಲಿ ಒಂದು ಎಂಎಲ್‌ಸಿ ಹುದ್ದೆ ನೀಡುವ ಹೈಕಮಾಂಡ್‌ ಭರವಸೆಗೆ ಅಲ್ಪಸಂಖ್ಯಾತ ಸಮುದಾಯದ ನಾಯಕರು ಸಮಾಧಾನಗೊಂಡರೆ, ಆಗ ಈ ಕ್ಷೇತ್ರ ಖಚಿತವಾಗಿ ಪಂಚಮಸಾಲಿ ಅಭ್ಯರ್ಥಿಯ ಪಾಲಾಗಲಿದೆ.

ಆದರೆ, ಇದಕ್ಕೆ ಅಲ್ಪಸಂಖ್ಯಾತ ನಾಯಕರು ಒಪ್ಪದೇ ಕ್ಷೇತ್ರವನ್ನು ತಮ್ಮ ಸಮುದಾಯಕ್ಕೆ ಉಳಿಸಬೇಕು ಎಂದು ಪಟ್ಟು ಹಿಡಿದರೆ ಮಾತ್ರ ಹೈಕಮಾಂಡ್‌ ಅದನ್ನು ನಿಭಾಯಿಸುವಲ್ಲಿ ಹೆಣಗಾಡಬೇಕಿದೆ.ಏಕೆಂದರೆ, ಎಐಸಿಸಿ ಪಡೆದಿರುವ ಖಾಸಗಿ ಸಮೀಕ್ಷಾ ವರದಿಯು (ಸುನೀಲ್ ಕುನಗೋಲು ತಂಡ) ಬಿಜೆಪಿಯ ಟಿಕೆಟ್‌ ಅನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್‌ ಬೊಮ್ಮಾಯಿಗೆ ನೀಡಿರುವುದರಿಂದ ಬಿಜೆಪಿಯ ತಳಮಟ್ಟದ ಕಾರ್ಯಕರ್ತರಲ್ಲಿ ಉಂಟಾಗಿರುವ ಅಸಮಾಧಾನದ ಲಾಭ ಪಡೆಯಲು ಈ ಬಾರಿ ಕಾಂಗ್ರೆಸ್‌ಗೆ ದೊಡ್ಡ ಅವಕಾಶವಿದೆ. ಅಲ್ಲದೆ, ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯು ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

ಇದೇ ವೇಳೆ ಕ್ಷೇತ್ರದ ಮುಸ್ಲಿಂ ಸಮುದಾಯ ಯಾವ ಕಾರಣಕ್ಕೂ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆಯಿಲ್ಲ. ಮುಸ್ಲಿಂ ಸಮುದಾಯದ ಮನವೊಲಿಸಿ ಈ ಕ್ಷೇತ್ರದ ಟಿಕೆಟ್‌ ಅನ್ನು ಪಂಚಮಸಾಲಿಗೆ ನೀಡಿದರೆ ಮುಸ್ಲಿಂ ಮತಗಳು ಹಾಗೂ ವಿಭಜನೆಗೊಳ್ಳುವ ಪಂಚಮಸಾಲಿ ಮತಗಳು ಮತ್ತು ತುಸು ಉತ್ತಮ ಪ್ರಮಾಣದಲ್ಲಿರುವ ಕುರುಬ ಹಾಗೂ ಹಿಂದುಳಿದ ವರ್ಗದ ಸಾಂಪ್ರದಾಯಿಕ ಮತಗಳು ಒಗ್ಗೂಡಿ ಕಾಂಗ್ರೆಸ್‌ ಗೆಲ್ಲುವ ಸಾಧ್ಯತೆ ಹೆಚ್ಚು ವರದಿ ಹೇಳಿದೆ.ಇದನ್ನು ಕಾಂಗ್ರೆಸ್‌ ಹೈಕಮಾಂಡ್‌ ಬಲವಾಗಿ ನಂಬಿದೆ. ಹೀಗಾಗಿಯೇ ಪಟ್ಟು ಹಿಡಿದಿರುವ ಮುಸ್ಲಿಂ ನಾಯಕರಿಗೆ ಎಂಎಲ್‌ಸಿ ಸೇರಿದಂತೆ ಪರ್ಯಾಯ ಆಫರ್‌ಗಳನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ನಾಯಕರು ಒಪ್ಪುವರೋ ಅಥವಾ ಇಲ್ಲವೋ ಎಂಬುದರ ಮೇಲೆ ಶಿಗ್ಗಾಂವ್‌ ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದು ನಿರ್ಧಾರವಾಗಲಿದೆ.

ವಿನಯ್‌ ಮಗಳು ವೈಶಾಲಿಗೆ ಶಿಗ್ಗಾವಿ?

ಮೂಲಗಳ ಪ್ರಕಾರ, ಪಂಚಮಸಾಲಿ ಸಮಾಜಕ್ಕೆ ಈ ಟಿಕೆಟ್‌ ನೀಡಬೇಕು ಎಂಬ ನಿರ್ಧಾರವೇನಾದರೂ ಹೈಕಮಾಂಡ್‌ ತೆಗೆದುಕೊಂಡರೆ ಆಗ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಅವರ ಮಗಳು ವೈಶಾಲಿ ಕುಲಕರ್ಣಿ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.ವೈಶಾಲಿಯಲ್ಲದೆ, ಇದೇ ಸಮುದಾಯದಿಂದ ಸೋಮಣ್ಣ ಬೇವಿನಮರದ್‌ ಹಾಗೂ ರಾಜನ್‌ ಕುನ್ನೂರು ಅವರ ಹೆಸರು ಹೈಕಮಾಂಡ್‌ ಮುಂದಿರುವ ಪ್ಯಾನಲ್‌ನಲ್ಲಿ ಇದೆ. ಇನ್ನು ಅಲ್ಪಸಂಖ್ಯಾತರಿಗೆ ನೀಡುವ ನಿರ್ಧಾರವಾದರೆ ಆಗ ಯೂಸೂಫ್‌ ಪಠಾಣ್‌ ಅಥವಾ ಅಜ್ಜಂ ಪೀರ್‌ ಖಾದ್ರಿ ಪೈಕಿ ಒಬ್ಬರಿಗೆ ಅದೃಷ್ಟ ಒಲಿಯಬಹುದು.ಗಿರಕಿ ಹೊಡೆಸುತ್ತಿರುವ ಯೋಗೇಶ್ವರ್‌!:ಇನ್ನು ಅತ್ಯಂತ ಕುತೂಹಲ ಹುಟ್ಟಿಸಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ ಮಾತ್ರ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಮೂರು ಪಕ್ಷಗಳಿಗೂ ಗಿರಕಿ ಹೊಡೆಸುತ್ತಿದ್ದಾರೆ. ಮೈತ್ರಿ ಕೂಟದ ಮೂಲಕ ಬಿಜೆಪಿ ಚಿಹ್ನೆಯಡಿಯಲ್ಲೇ ತಮಗೆ ಟಿಕೆಟ್‌ ನೀಡಬೇಕು ಎಂಬುದು ಅವರ ಪಟ್ಟು. ಅದಾಗದಿದ್ದರೆ ನಿಮ್ಮ ಪಕ್ಷಕ್ಕೆ ಸೇರುವುದಾಗಿ ಕಾಂಗ್ರೆಸ್‌ ನಾಯಕರಿಗೆ ಭರವಸೆ ನೀಡಿ ಇಡೀ ಪಕ್ಷ ಅವರಿಗಾಗಿ ಬಿ-ಫಾರಂ ಹಿಡಿದು ಕಾದು ನಿಲ್ಲುವಂತೆ ಮಾಡಿದ್ದಾರೆ. ನಾವು ಟಿಕೆಟ್‌ ನೀಡಲು ಸಿದ್ಧ ಎಂದು ಜೆಡಿಎಸ್‌ ಘೋಷಿಸಿದರೂ ಅಲ್ಲಿಗೆ ಹೋಗುವ ಮನಸ್ಸು ಸಿ.ಪಿ. ಯೋಗೇಶ್ವರ್‌ಗೆ ಇಲ್ಲ. ಏಕೆಂದರೆ, ಜಯಮುತ್ತು ಸೇರಿದಂತೆ ಏಳೆಂಟು ಸ್ಥಳೀಯ ಜೆಡಿಎಸ್‌ ನಾಯಕರು ಯೋಗೇಶ್ವರ್‌ಗೆ ಟಿಕೆಟ್‌ ನೀಡಿದರೆ ತಾವು ತಟಸ್ಥವಾಗಿ ಉಳಿಯುವ ಎಚ್ಚರಿಕೆ ನೀಡಿದ್ದಾರೆ. ಜೀವನ ಪೂರ್ತಿ ಯೋಗೇಶ್ವರ್‌ ವಿರುದ್ಧ ರಾಜಕೀಯ ಮಾಡಿಕೊಂಡು ಬಂದಿರುವ ನಮಗೆ ಈಗ ಅವರ ಪರ ನಿಲ್ಲಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸೂಚನೆ ನೀಡಿರುವುದನ್ನು ತಿಳಿದಿರುವ ಯೋಗೇಶ್ವರ್‌ಗೆ ಜೆಡಿಎಸ್‌ ಟಿಕೆಟ್‌ ರುಚಿಸುತ್ತಿಲ್ಲ.ಆದರೆ, ಮೈತ್ರಿ ಸೂತ್ರದಂತೆ ಈ ಕ್ಷೇತ್ರದ ಟಿಕೆಟ್ ಜೆಡಿಎಸ್‌ಗೆ ಉಳಿಯುವ ಸಾಧ್ಯತೆಯಿರುವುದರಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುವುದೋ ಅಥವಾ ಕಾಂಗ್ರೆಸ್‌ ಟಿಕೆಟ್‌ ನಿಂದ ಸ್ಪರ್ಧಿಸುವುದೋ ಎಂಬುದನ್ನು ಯೋಗೇಶ್ವರ್‌ ಇನ್ನೂ ನಿರ್ಧರಿಸಿದಂತಿಲ್ಲ. ಯೋಗೇಶ್ವರ್‌ ಬರದಿದ್ದರೆ ಕಾಂಗ್ರೆಸ್ಸಿನಿಂದ ಡಮ್ಮಿ?ಕಾಂಗ್ರೆಸ್‌ ಮಾತ್ರ ಯೋಗೇಶ್ವರ್‌ ಬಂದರೆ ಅವರಿಗೆ ಟಿಕೆಟ್‌ ನೀಡುವ ನಿರ್ಧಾರ ಮಾಡಿದೆ . ಆದರೆ, ಯೋಗೇಶ್ವರ್‌ ಪಕ್ಷಕ್ಕೆ ಬರದಿದ್ದರೆ ಯಾರನ್ನು ಕಣಕ್ಕೆ ಇಳಿಸುವುದು ಎಂಬ ಚಿಂತೆ ಕಾಂಗ್ರೆಸ್‌ ಪಕ್ಷವನ್ನು ಕಾಡುತ್ತಿದೆ. ಏಕೆಂದರೆ, ಯೋಗೇಶ್ವರ್‌ ಬರದಿದ್ದರೆ ಡಿ.ಕೆ. ಸುರೇಶ್‌ ಅವರನ್ನು ಕಣಕ್ಕೆ ಇಳಿಸಬೇಕು ಎಂಬ ಚಿಂತನೆ ಹೈಕಮಾಂಡ್‌ ಮಟ್ಟದಲ್ಲಿ ಇದೆ.ಆದರೆ, ಸುರೇಶ್‌ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದು, ಯೋಗೇಶ್ವರ್‌ ಸ್ವತಂತ್ರ ಅಭ್ಯರ್ಥಿಯಾಗಿ, ಜೆಡಿಎಸ್‌ನಿಂದ ನಿಖಿಲ್‌ ಸೇರಿದಂತೆ ಯಾರೇ ಕಣಕ್ಕೆ ಇಳಿದರೂ ಅದು ಪ್ರಬಲ ತ್ರಿಕೋನ ಸ್ಪರ್ಧೆ ನಡೆಯುತ್ತದೆ. ಸುರೇಶ್‌ ಹಾಗೂ ಯೋಗೇಶ್ವರ್‌ ತಿಕ್ಕಾಟದಲ್ಲಿ ಜೆಡಿಎಸ್‌ಗೆ ಲಾಭವಾಗುವ ಸಾಧ್ಯತೆ ಹೆಚ್ಚು ಎಂಬ ವರದಿ ಇದೆ. ಹೀಗಾಗಿ ಯೋಗೇಶ್ವರ್‌ ಸ್ವತಂತ್ರವಾಗಿ ಸ್ಪರ್ಧಿಸಿದರೆ ಜೆಡಿಎಸ್‌ ಗೆಲ್ಲುವಂತೆ ಮಾಡುವುದಕ್ಕಿಂತ ಯೋಗೇಶ್ವರ್‌ ಗೆಲ್ಲುವಂತಹ ತಂತ್ರ ಬಳಸುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಎಂಬ ಚಿಂತನೆ ಕಾಂಗ್ರೆಸ್‌ನಲ್ಲಿದೆ.ಹೀಗಾಗಿ, ಯೋಗೇಶ್ವರ್‌ ಕೈ ಕೊಟ್ಟರೆ ಕಾಂಗ್ರೆಸ್‌ನಿಂದ ದುರ್ಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಸಾಧ್ಯತೆಯಿದೆ. ಆದಾಗ್ಯೂ ಅಂತಿಮ ಹಂತದಲ್ಲಿ ಯೋಗೇಶ್ವರ್‌ ಪಕ್ಷ ಸೇರುವ ಸಾಧ್ಯತೆಯೇ ಹೆಚ್ಚು ಎಂದು ಕಾಂಗ್ರೆಸ್‌ ಮೂಲಗಳು ಹೇಳುತ್ತವೆ. ಹೀಗಾಗಿಯೇ ಈ ಎರಡು ಕ್ಷೇತ್ರಗಳ ಅಭ್ಯರ್ಥಿ ಹೆಸರನ್ನು ಅಂತಿಮ ಹಂತದವರೆಗೂ ಘೋಷಣೆಯಾಗುವ ಸಾಧ್ಯತೆ ಕಡಿಮೆ. ಇನ್ನೂ ಸಂಡೂರು ಕ್ಷೇತ್ರದ ಟಿಕೆಟ್‌ ಸಂಸದ ಇ. ತುಕಾರಾಂ ಪತ್ನಿ ಅನ್ನಪೂರ್ಣ ಅವರಿಗೆ ಎಂಬುದು ನಿರ್ಧಾರವಾಗಿದೆ.