ಸಾರಾಂಶ
ಸವಣೂರು: ಕಾಂಗ್ರೆಸ್ ಪಕ್ಷ ಉಪಚುನಾವಣೆಗೆ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿಲ್ಲ. ಕ್ಷೇತ್ರದ ಜನರು ಬಯಸಿದಂತಹ ಅಭ್ಯರ್ಥಿಯೇ ಚುನಾವಣೆಯನ್ನು ಎದುರಿಸಲಿದ್ದು, ಪಕ್ಷವನ್ನು ಗೆಲ್ಲಿಸುವ ಮೂಲಕ ರಾಜ್ಯ ಸರಕಾರಕ್ಕೆ ಕ್ಷೇತ್ರದ ಜನತೆ ಕೊಡುಗೆಯನ್ನು ನೀಡಬೇಕು ಎಂದು ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ ಹೇಳಿದರು. ಶನಿವಾರ ಸವಣೂರು ಪಟ್ಟಣದ ಶ್ರೀ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಪುರಸಭೆ, ಜಿಪಂ, ಗ್ರಾಪಂ ಕೋ ಆರ್ಡಿನೆಟರ್ಸ್ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಸಮರ್ಪಕವಾಗಿ ಕೆಲಸವನ್ನು ಮಾಡದೆ ಮೈ ಮರೆತು ಅತಿಯಾದ ಆತ್ಮ ವಿಶ್ವಾಸವನ್ನು ಇಟ್ಟುಕೊಂಡಿರುವುದರಿಂದ ೨೫ ವರ್ಷಗಳ ಕಾಲ ಕಾಂಗ್ರೆಸ್ ಸೋಲನ್ನು ಅನುಭವಿಸುವಂತಾಗಿದೆ. ಉಪ ಚುನಾವಣೆಯಲ್ಲಿ ನಿರಂತರವಾಗಿ ಕೆಲಸ ಮಾಡುವ ಮೂಲಕ ಪಕ್ಷವನ್ನು ಗೆಲ್ಲಲು ಪ್ರತಿಯೊಬ್ಬರೂ ಶ್ರಮವಹಿಸುವಂತೆ ಕರೆ ನೀಡಿದರು. ಸವಣೂರು ಪುರಸಭೆ ಕಾಂಗ್ರೆಸ್ ಪಕ್ಷಕ್ಕೆ ಬಂಗಾರದ ಕಣಜ. ಪ್ರತಿಯೊಂದು ಬೂತ್ ಮಟ್ಟದಲ್ಲಿ ಹಗಲಿರುಳು ಶ್ರಮಿಸಿ ಮನೆಗಳಿಗೆ ಭೇಟಿ ನೀಡಿ ಮನವೊಲಿಸಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ಸೆಳೆದು ವಿಜಯಶಾಲಿಗಳಾಗಲು ಸಾಧ್ಯ. ರಾಜ್ಯದಲ್ಲಿ ೫ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಅಧಿಕಾರವನ್ನು ನಡೆಸಲಿದೆ. ಕ್ಷೇತ್ರದ ಅಭಿವೃದ್ಧಿಗೆ ಜನಪರ ಕೆಲಸ ಮಾಡುವಂತ ಕಾಂಗ್ರೆಸ್ ಪಕ್ಷದ ಶಾಸಕನನ್ನು ಆಯ್ಕೆ ಮಾಡಬೇಕು. ಇದರಿಂದ, ಕ್ಷೇತ್ರ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗಲಿದೆ. ಕಾಂಗ್ರೆಸ್ ಮುಖಂಡ ಆನಂದಸ್ವಾಮಿ ಗಡ್ಡದದೇವರಮಠ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಇಲ್ಲದಿದ್ದರೂ ಕ್ಷೇತ್ರದ ಜನತೆಗೆ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಜನ ಮನ್ನಣೆಯನ್ನು ಪಡೆದುಕೊಂಡಿದ್ದು ಮತದಾರರು ಆಶೀರ್ವಾದ ಮಾಡುವ ಭರವಸೆ ಕಾಂಗ್ರೆಸ್ ಪಕ್ಷಕ್ಕೆ ಇದೆ. ಕಾಂಗ್ರೆಸ್ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಿದಾಗ ಕ್ಷೇತ್ರದಲ್ಲಿ ನಮ್ಮ ಪಕ್ಷ ಹೆಚ್ಚಿನ ಮತಗಳಿಂದ ವಿಜಯ ಶಾಲಿಯಾಗುವುದರಲ್ಲಿ ಸಂಶಯವಿಲ್ಲ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಸಹಿತ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ರಾಜ್ಯಕ್ಕೆ ಕೊಡುಗೆಯನ್ನು ಕ್ಷೇತ್ರದ ಜನರು ನೀಡೋಣ ಎಂದರು.ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ರಘುನಂದನ, ಮಾಜಿ ಶಾಸಕ ಅಜ್ಜಂಫೀರ ಎಸ್. ಖಾದ್ರಿ, ರಘು ಚಿತ್ರದುರ್ಗ, ಸವಣೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಶಿಗ್ಗಾಂವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ. ಪಾಟೀಲ, ಪುರಸಭೆ ಅಧ್ಯಕ್ಷ ಅಲ್ಲಾವುದ್ಧಿನ್ ಮನಿಯಾರ, ಸದಸ್ಯರಾದ ಫಜ್ಜಲಹ್ಮದಖಾನ ಪಠಾಣ, ಫೀರ್‌ಅಹ್ಮದ ಗವಾರಿ, ಉಮೇಶ ಕಲ್ಮಠ, ಅಶೋಕ ಮನ್ನಂಗಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸುಭಾಸ ಮಜ್ಜಗಿ, ರವಿ ಕರಿಗಾರ, ಎಂ.ಎಂ. ಪಠಾಣ, ಶಂಭು ಆಜೂರ, ಕುಮಾರಸ್ವಾಮಿ ಅಡವಿಸ್ವಾಮಿಮಠ, ಗುಡ್ಡಪ್ಪ ಜರದಿ, ಲಕ್ಷ್ಮಣ ಕನವಳ್ಳಿ, ಸಾಧಿಕ ಮನಿಯಾರ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನವಿನ ಬಂಡಿವಡ್ಡರ ನಿರ್ವಹಿಸಿದರು.