ರಾಜು ಪೂಜಾರಿಗೆ ಒಲಿಯಿತು ಕಾಂಗ್ರೆಸ್ ಟಿಕೆಟ್

| Published : Oct 03 2024, 01:29 AM IST

ಸಾರಾಂಶ

ಸ್ಥಳೀಯ ಆಡಳಿತ ಸಂಸ್ಥೆಗಳ ವಿಧಾನ ಪರಿಷತ್‌ ಸ್ಥಾನದ ಚುನಾವಣೆಗೆ ಕಾಂಗ್ರೆಸ್‌ನಿಂದ ರಾಜು ಪೂಜಾರಿ ಅವರನ್ನು ಕಣಕ್ಕಿಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ದಕ ಜಿಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳ ವಿಧಾನ ಪರಿಷತ್ ಸ್ಥಾನದ ಚುನಾವಣೆಗೆ ಕಾಂಗ್ರೆಸ್ ನಿಂದ ಮಾಜಿ ಜಿಪಂ ಸದಸ್ಯ ರಾಜು ಪೂಜಾರಿ ಅವರನ್ನು ಕಣಕ್ಕಿಳಿಸಲಾಗಿದೆ.

ಉಭಯ ಜಿಲ್ಲೆಗಳ ಸ್ಥಳೀಯಾಡಳಿತ ಸಂಸ್ಥೆಗಳ ಸದಸ್ಯರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಲ್ಲವರಿದ್ದಾರೆ ಎಂಬ ಲೆಕ್ಕಾಚಾರದಂತೆ ರಾಜು ಪೂಜಾರಿ ಅವರಿಗೆ ಟಿಕೆಟ್ ನೀಡಲಾಗಿದೆ.

ಬಿಜೆಪಿಯಿಂದ ಬಿಲ್ಲವ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಕಾದು ನೋಡುವ ತಂತ್ರ ಅನುಸರಿಸಿದ ಕಾಂಗ್ರೆಸ್, ಬಿಜೆಪಿ ಬಿಲ್ಲವೇತರ ಅಭ್ಯರ್ಥಿಗೆ ಟಿಕೆಟ್ ನೀಡಿರುವುದರಿಂದ, ಕಾಂಗ್ರೆಸ್ ಬಿಲ್ಲವ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಅಲ್ಲಿಗೆ ಈ ಬಾರಿಯ ಉಡುಪಿ ದಕ ವಿಧಾನಸಭಾ ಚುನಾವಣೆ ಕಣ ಹೆಚ್ಚು ರಂಗೇರಿದೆ.

ರಾಜು ಪೂಜಾರಿ ಹಿನ್ನೆಲೆ

ಉಡುಪಿ ಜಿಲ್ಲೆಯ ಬೈಂದೂರಿನವರಾದ ರಾಜು ಪೂಜಾರಿ ಬಿಕಾಂ ಪದವೀಧರರು, 1987ರಲ್ಲಿ ವಿದ್ಯಾರ್ಥಿ ಕಾಂಗ್ರೆಸ್ ನಿಂದ ರಾಜಕೀಯಕ್ಕೆ ಬಂದವರು. ನಂತರ ಬೈಂದೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಬ್ಲಾಕ್ ಅಧ್ಯಕ್ಷರಾಗಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ, ಪ್ರಸ್ತುತ ಜಿಲ್ಲಾ ಉಪಾಧ್ಯಕ್ಷರಾಗಿದ್ದಾರೆ.

ಬೈಂದೂರು ಕೋಟಿ ಚೆನ್ನಯ ಗರೋಡಿ ಅಧ್ಯಕ್ಷರು, ಒತ್ತಿನೆಣೆಯ ರಾಘವೇಂದ್ರ ಸ್ವಾಮಿ ಬೃಂದಾವನ ಟ್ರಸ್ಟ್‌ನ ಟ್ರಸ್ಟಿ, ಬೈಂದೂರು ಮಹಾಸತಿ ದೇವಸ್ಥಾನದ ಗೌರವಾಧ್ಯಕ್ಷರು, ಸೇನೇಶ್ವರ ದೇವಸ್ಥಾನದ ಸಾರ್ವಜನಿಕ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿಯೂ ಜನಪ್ರಿಯರಾಗಿದ್ದಾರೆ.

ಅಲ್ಲದೆ ದಕ ಜಿಲ್ಲಾ ಟೆಲಿಕಾಂ ಸಲಹಾ ಸಮಿತಿ, ಖಾದಿ ಬೋರ್ಡ್, ಉಡುಪಿ ಜಿಲ್ಲಾ ಕೆಡಿಪಿ, ಕುಂದಾಪುರ ಎಪಿಎಂಸಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.

ಸ್ಥಳೀಯಾಡಳಿತ ಅನುಭವ

ವ್ಯಾಪಾರದ ಜೊತೆಗೆ ಕೃಷಿಕರಾಗಿರುವ ರಾಜು ಪೂಜಾರಿ ಅವರು ಮರವಂತೆ ಗ್ರಾಪಂ ಸದಸ್ಯರಾಗಿ, ಕುಂದಾಪುರ ತಾಪಂ ಸದಸ್ಯರಾಗಿ, 4 ಬಾರಿ ಉಡುಪಿ ಜಿಪಂ ಸದಸ್ಯರಾಗಿ ಆಡಳಿತ ವಿಫುಲ ಅನುಭವ ಹೊಂದಿದ್ದಾರೆ. ಜಿಪಂನ ಸಾಮಾನ್ಯ ಸಭೆಗಳಲ್ಲಿ ರಾಜು ಪೂಜಾರಿ ಅವರ ಮಾತುಗಳು ಅವರ ಅನುಭವಕ್ಕೆ ಕೈಗನ್ನಡಿಯಾಗಿದ್ದವು.

ಜೊತೆಗೆ 10ಕ್ಕೂ ಹೆಚ್ಚು ಸಹಕಾರಿ ಸಂಘಗಳ ನಿರ್ದೇಶಕರಾಗಿ, ಅಧ್ಯಕ್ಷರಾಗಿ, ಪ್ರಸ್ತುತ ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿದ್ದಾರೆ. ರಾಜ್ಯಮಟ್ಟದ ಉತ್ತಮ ಸಹಕಾರಿ, ಶ್ರೇಷ್ಠ ಸಹಕಾರಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಇಂದು 12 ಗಂಟೆಗೆ ನಾಮಪತ್ರ ಸಲ್ಲಿಕೆ

ಈ ಉಪಚುನಾವಣೆಯ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, ಬೆಳಗ್ಗೆ 11 ಗಂಟೆಗೆ ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಉಡುಪಿ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸಭೆ ಸೇರಿ, ಒಟ್ಟಾಗಿ 12 ಗಂಟೆಗೆ ಮಂಗಳೂರು ದ.ಕ. ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಜು ಪೂಜಾರಿ ಅವರ ನಾಮಪತ್ರ ಸಲ್ಲಿಸಲಾಗುವುದು ಎಂದು ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.