ಅರ್ಹರಿಗೆ ಮಾತ್ರ ಕಾಂಗ್ರೆಸ್‌ ಟಿಕೆಟ್‌

| Published : Mar 27 2025, 01:01 AM IST

ಸಾರಾಂಶ

ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದ್ದು ಯಾವುದೇ ಮುಲಾಜಿಗೆ ಒಳಪಟ್ಟದೇ ಜನಾಭಿಪ್ರಾಯದ ಮೇರೆಗೆ ಸೇವಾ ಮನೋಭಾವ ಹೊಂದಿರುವ ಅರ್ಹರಿಗೆ ಮಾತ್ರ ಈ ಬಾರಿ ಕಾಂಗ್ರೆಸ್ ನಿಂದ ಟಿಕೆಟ್‌ ನೀಡಲಾಗುವುದಾಗಿ ಮಾಜಿ ಸಚಿವ ವೆಂಕಟರಮಣಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದ್ದು ಯಾವುದೇ ಮುಲಾಜಿಗೆ ಒಳಪಟ್ಟದೇ ಜನಾಭಿಪ್ರಾಯದ ಮೇರೆಗೆ ಸೇವಾ ಮನೋಭಾವ ಹೊಂದಿರುವ ಅರ್ಹರಿಗೆ ಮಾತ್ರ ಈ ಬಾರಿ ಕಾಂಗ್ರೆಸ್ ನಿಂದ ಟಿಕೆಟ್‌ ನೀಡಲಾಗುವುದಾಗಿ ಮಾಜಿ ಸಚಿವ ವೆಂಕಟರಮಣಪ್ಪ ಹೇಳಿದರು.

ಅವರು ಬುಧವಾರ ನಗರೋತ್ಥಾನ ಹಾಗೂ ಇತರೆ ಸದಸ್ಯರ ಮೀಸಲಿರಿಸಿದ್ದ ಅನುದಾನದ 40ಲಕ್ಷ ವೆಚ್ಚದ ಪುರಸಭೆಯ ನೂತನ ಸಭಾ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭರವಸೆ ಮೇರೆಗೆ ಜನ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ. ಜನತೆಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ವಾರ್ಡ್‌ಗಳಿಗೆ ಭೇಟಿ ನೀಡಿ ಅಲ್ಲಿನ ಜನತೆಯ ವಿಶ್ವಾಸ ಗಳಿಸಿ ಅವರ ಜತೆ ಸಮಸ್ಯೆ ಬಗ್ಗೆ ಚರ್ಚಿಸಿ ಶೋಷಿತರು ನೊಂದವರಿಗೆ ಸೌಲಭ್ಯ ಕಲ್ಪಿಸುವ ಮೂಲಕ ವಾರ್ಡ್‌ಗಳ ಪ್ರಗತಿಗೆ ಅಸಕ್ತಿವಹಿಸುವಂತೆ ಸಲಹೆ ನೀಡಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರವಾಗುತ್ತಿದ್ದು ಈ ಬಾರಿ ಮಾಜಿ ಸಚಿವ ಹಾಗೂ ಶಾಸಕರಿದ್ದಾರೆ ಎಂಬ ಭ್ರಮೆ ಬಿಡಿ ಜನತೆಯ ಅಭಿಪ್ರಾಯ ಉತ್ತಮವಾಗಿದ್ದರೆ ಮಾತ್ರ ಸದಸ್ಯರಿಗೆ ಮತ್ತೆ ಕಾಂಗ್ರೆಸ್‌ ಬೆಂಬಲಿಸಿ ಟಿಕೆಟ್‌ ನೀಡುತ್ತೇವೆ. ಸೇವೆ ಮಾಡಿದ್ದರೆ ಜನತೆ ಮತ ಹಾಕುತ್ತಾರೆ. ಇಲ್ಲವಾದರೆ ಮನೆಗೆ ಕಳುಹಿಸುತ್ತಾರೆ. ಹೀಗಾಗಿ ಅಭಿಪ್ರಾಯ ಸರಿಯಿಲ್ಲದಿದ್ದರೆ ಈಗಿನ ಅಧ್ಯಕ್ಷರು ಸೇರಿದಂತೆ ಯಾರಿಗೂ ಪುರಸಭೆಯ ಟಿಕೆಟ್‌ ನೀಡಲು ಸಾಧ್ಯವಿಲ್ಲ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಪುರಸಭೆ ವ್ಯಾಪ್ತಿಯ 5ಕಿಮೀ ಹಳ್ಳಿಗಳಲ್ಲಿ ಪಟ್ಟಣಕ್ಕೆ ಸೇರಿಸಿಕೊಳ್ಳುವ ಮೂಲಕ ಆ ಗ್ರಾಮಗಳಿಗೆ ಸೌಲಭ್ಯ ಕಲ್ಪಿಸಬೇಕು. ಸದಸ್ಯರು ಸಭೆಯಲ್ಲಿ ಚರ್ಚಿಸಿ ರೂಪರೇಷ ಸಿದ್ದತೆಯ ತೀರ್ಮಾನ ಕೈಗೊಳ್ಳಬೇಕು. ನಿಮ್ಮ ಮನವಿಯ ಮೇರೆಗೆ ಸರ್ಕಾರದ ಹಂತದಲ್ಲಿ ಶಾಸಕರು ಹಾಗೂ ನಾವು ಚರ್ಚಿಸಿ ಪಾವಗಡವನ್ನು ನಗರ ಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸಹಕರಿಸುವುದಾಗಿ ಹೇಳಿದರು.

ನೂತನ ಭವನದ ಉದ್ಘಾಟನೆ ನೆರೆವೇರಿಸಿದ ಬಳಿಕ ಶಾಸಕ ಎಚ್.ವಿ.ವೆಂಕಟೇಶ್‌ ಮಾತನಾಡಿ ಡಿಸಿ ಕಚೇರಿ ಹಾಗೂ ಜಿಪಂನಲ್ಲಿ ಸಹ ಇಲ್ಲದಾಂತಹ ಸುಸಜ್ಜಿತವಾದ ಅಧುನಿಕ ಮಾದರಿಯಲ್ಲಿ ಪುರಸಭೆಯ ಸಭಾ ಭವನ ನಿರ್ಮಿಸಿದ್ದು ಸಂತಸ ತಂದಿದೆ. ನಾವು ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಬೆಂಗಳೂರಿನ ವಿಧಾನ ಸೌಧದ ಸೇಷನ್‌ ಮಾದರಿಯಲ್ಲಿ ಪುರಸಭೆಯ ಸಭಾ ಭವನ ನಿರ್ಮಿಸುತ್ತೇವೆ ಎಂದು ಅಧ್ಯಕ್ಷ ಹಾಗೂ ಸದಸ್ಯರು ಹೇಳುತ್ತಿದ್ದರು. ಅದರಂತೆಗೆ ಸಭಾ ಭವನ ನಿರ್ಮಿಸಿದ್ದು ಖುಷಿ ತಂದಿದೆ ಎಂದರು.

ಟ್ರಾಫಿಕ್‌ ಹಾಗೂ ಜನದಟ್ಟಣೆ ನಿಯಂತ್ರಿಸುವ ಹಿನ್ನೆಲೆಯಲ್ಲಿ ಪಟ್ಟಣದ ಹೊರವಲಯದಲ್ಲಿ ರಿಂಗ್‌ ರಸ್ತೆ ನಿರ್ಮಾಣಕ್ಕೆ ಅಂದಾಜು ವೆಚ್ಚ 150ಕೋಟಿಗೆ ಪ್ರಸ್ತಾವನೆ ಸಲ್ಲಿಸಿದ್ದು ಈ ಸಂಬಂಧ ಲೋಕೋಪಯೋಗಿ ಸಚಿವರಾದ ಸತೀಶ್‌ ಜಾರಕಿ ಹೊಳಿ ಅವರು ಅನುದಾನ ಕಲ್ಪಿಸುವ ಭರವಸೆ ನೀಡಿದ್ದಾರೆ. ರಿಂಗ್‌ ರಸ್ತೆ ಪ್ರಗತಿಗೆ ಡಿಪಿಆರ್‌ ಸಿದ್ದಪಡಿಸಿ ವರದಿ ಸಲ್ಲಿಸಲು ಈಗಾಗಲೇ ಸರ್ಕಾರದಿಂದ 27ಲಕ್ಷ ಅನುದಾನ ಬಿಡುಗಡೆಯಾಗಿದೆ. ಈ ಸಂಬಂಧ ಶೀಘ್ರದಲ್ಲಿ ರಿಂಗ್‌ ರಸ್ತೆಯ ಸರ್ವೆ ಕಾರ್ಯಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು. ತಾಲೂಕಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವಿಶೇಷ ಒತ್ತು ನೀಡಿದ್ದು ಈಗಾಗಲೇ ಸರ್ಕಾರದಿಂದ ಐಟಿಐ ಕಾಲೇಜು ಮುಂಜೂರಾತಿ ಸಿಕ್ಕಿದೆ. ಇದೇ ರೀತಿ ಡಿಪ್ಲೋಮಾ ಕಾಲೇಜ್‌ ಮಂಜೂರಾತಿಗೆ ಮನವಿ ಸಲ್ಲಿಸಲಾಗಿದೆ. ಸಮಸ್ಯೆ ಕುರಿತು ಪಟ್ಟಿ ಕೊಡಿ ಪಟ್ಟಣದ ಪ್ರಗತಿಗೆ ಶಾಸಕರ ನಿಧಿಯಿಂದ ಪಟ್ಟಿ ಕೊಡಿ 10ಕೋಟಿ ರು.ಹಣ ಕೊಡುವುದಾಗಿ ಹೇಳಿದರು.

ಪುರಸಭೆ ಅಧ್ಯಕ್ಷ ಪಿ.ಎಚ್.ರಾಜೇಶ್ ಮಾತನಾಡಿದರು. ಪುರಸಭೆ ಸದಸ್ಯರಾದ ಸುದೇಶ್‌ ಬಾಬು, ಪುರಸಭೆಯ ಮುಖ್ಯಾಧಿಕಾರಿ ಜಾಫರ್‌ ಷರೀಫ್‌, ಆರೋಗ್ಯಧಿಕಾರಿ ಶಂಷುದ್ದೀನ್‌, ಎಂಜಿನಿಯರ್‌ ಹೆಂಗೇಶ್‌ ಬಾಬು, ಲೆಕ್ಕಾಧಿಕಾರಿ ಹರೀಶ್‌, ಮುಖಂಡರಾದ ತೆಂಗಿನಕಾಯಿ ರವಿ, ಕೆ.ವಿ.ಶ್ರೀನಿವಾಸ್‌, ವೆಂಕಟಮ್ಮನಹಳ್ಳಿ ನಾಗೇಂದ್ರರಾವ್‌, ಆರ್‌.ಎ.ಹನುಮಂತರಾಯಪ್ಪ, ನಾಗರಾಜಪ್ಪ, ಷಾಬಾಬು, ರಿಜ್ವಾನ್, ಕಿರಣ್‌ ಕುಮಾರ್‌ ಅಮರ್‌ ಇತರರಿದ್ದರು.