ಸಾರಾಂಶ
ಕಾಂಗ್ರೆಸ್‌ನವರಿಗೆ ಚುನಾವಣೆ ಸಂದರ್ಭದಲ್ಲಿ ಅಧಿಕಾರಕ್ಕೆ ಬರುವ ಗ್ಯಾರಂಟಿ ಇರಲಿಲ್ಲ. ಆದ್ದರಿಂದ ಸುಮ್ಮನೆ ಘೋಷಣೆ ಮಾಡಿದ್ದರು. ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಬುದ್ಧಿ ಮಾತನ್ನು ಹೇಳಿದ್ದಾರೆ.
ಹುಬ್ಬಳ್ಳಿ:
ಸದ್ಯ ಪಂಚ ಗ್ಯಾರಂಟಿ ಮರುಪರಿಶೀಲನೆ ಮಾಡುವುದಾಗಿ ಹೇಳುತ್ತಿರುವ ಕಾಂಗ್ರೆಸ್‌ನವರು ಸರಿಯಾಗಿ ನಿರ್ವಹಣೆ ಮಾಡಲಾಗದ ಸ್ಥಿತಿಗೆ ಬಂದಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹರಿಹಾಯ್ದರು.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೊಂದೇ ಗ್ಯಾರಂಟಿ ತೆಗೆಯುತ್ತಾ ಹೋಗುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಚುನಾವಣೆ ಸಂದರ್ಭದಲ್ಲಿ ಅಧಿಕಾರಕ್ಕೆ ಬರುವ ಗ್ಯಾರಂಟಿ ಇರಲಿಲ್ಲ. ಆದ್ದರಿಂದ ಸುಮ್ಮನೆ ಘೋಷಣೆ ಮಾಡಿದರು. ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಬುದ್ಧಿ ಮಾತನ್ನು ಹೇಳಿದ್ದಾರೆ. ಈಗ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಅವರಿಗೆ ಮನವರಿಕೆ ಆಗಿದೆ. ಹೀಗಾಗಿ ಪಂಚ ಗ್ಯಾರಂಟಿ ಮರುಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ ಎಂದರು.
ಕಾಂಗ್ರೆಸ್ ಯೋಜನೆಗಳಿಗೆ ಜನ ಮೆಚ್ಚಿ ಬಹುಮತ ನೀಡಿದ್ದರು. ಆದರೆ ಒಂದೂವರೆ ವರ್ಷದಲ್ಲೇ ಸರ್ಕಾರ ಹಗರಣದಲ್ಲಿ ಸಿಲುಕಿ ನಲುಗಿದೆ. ಮುಡಾ, ವಾಲ್ಮೀಕಿ, ವಕ್ಫ್ ಕಮಿಟಿ ಹೊಸ ನೀತಿಗಳಲ್ಲಿ ಸಿಲುಕಿದೆ. ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್ ಶಾಸಕ ರಾಜು ಕಾಗೆ ಅಭಿವೃದ್ಧಿನೇ ಇಲ್ಲ, ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ. ಅನೇಕ ಕಾಂಗ್ರೆಸ್‌ನ ಹಿರಿಯ, ಕಿರಿಯ ಶಾಸಕರು ಹೇಳಿದ್ದಾರೆ.ಇದು ಮನವರಿಕೆ ಆಗಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಪಂಚ ಗ್ಯಾರಂಟಿ ಮರುಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ರಾಜ್ಯ ನಾಯಕರ ಮೇಲೆ ಖರ್ಗೆ ಅಸಮಾಧಾನ ವ್ಯಕ್ತಪಡಿಸಿ, ನಾಯಕರಿಗೆ ಬುದ್ಧಿ ಮಾತನ್ನು ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ನಿರ್ಣಯ ಕೈಗೊಳ್ಳಬೇಕು ಎಂದರು.
ಬಿಜೆಪಿಯಿಂದ ಕಾಂಗ್ರೆಸ್‌ಗೆ ಎಂಟು ಶಾಸಕರು ಬರುತ್ತಾರೆ ಎನ್ನುವ ಎಸ್.ಟಿ. ಸೋಮಶೇಖರ್ ಹೇಳಿಕೆಗೆ ಕಿಡಿಕಾರಿದ ಟೆಂಗಿನಕಾಯಿ ಅವರು, ಸರ್ಕಾರದ ಮೇಲೆ ಸಮಸ್ಯೆಗಳು ಬಂದಾಗ ಹೊಸ ವಿಷಯ ತಂದು ಕಾಂಗ್ರೆಸ್‌ನವರು ಡೈವರ್ಟ್ ಮಾಡುತ್ತಾರೆ. ಅದರ ಜತೆಗೆ ಯಾರು ಒಂದಿಬ್ಬರು ಸೇರುವಂಥ ಕೆಲಸ ಮಾಡುತ್ತಾರೆ ಎಂದು ಹೇಳಿದರು.