ಕನ್ನಡಪ್ರಭ ವಾರ್ತೆ ಬೆಂಗಳೂರು ದೇಶದ ಶಿಕ್ಷಣ ವ್ಯವಸ್ಥೆ ಹೊಣೆಗಾರಿಕೆ ಹೊಂದಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ (ಕೆಪಿವೈಸಿಸಿ) ವತಿಯಿಂದ ಛಾತ್ರೋನ್ ಕಿ ಗೂಂಜ್ (ವಿದ್ಯಾರ್ಥಿಗಳ ಧ್ವನಿ) ಅಭಿಯಾನದ ಎರಡನೇ ಬೃಹತ್ ಪಂಜಿನ ಮೆರವಣಿಗೆ ನಡೆಸಲಾಯಿತು.ಕೆಪಿವೈಸಿಸಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಅವರ ನೇತೃತ್ವದಲ್ಲಿ ಶುಕ್ರವಾರ ಮಹದೇವಪುರದ ಕನ್ನಮಂಗಲದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಯುವಕರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಮಾಸ್ಕ್ (ಮುಖವಾಡ) ಧರಿಸಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸುವ ಫಲಕ (ಪ್ಲಕಾರ್ಡ್) ಹಾಗೂ ಪಂಜನ್ನು ಹಿಡಿದು, ಪಾರದರ್ಶಕ ಶಿಕ್ಷಣ ವ್ಯವಸ್ಥೆಯ ಉತ್ತರದಾಯಿತ್ವ ಹಾಗೂ ಸೋರಿಕೆ, ಅಕ್ರಮ ರಹಿತ ಪರೀಕ್ಷೆಗಳಿಗಾಗಿ ಮೆರವಣಿಗೆ ಸಾಗಿದರು.ಕೆಪಿವೈಸಿಸಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಮಾತನಾಡಿ, ಅಸಮರ್ಥ ಕೇಂದ್ರ ಶಿಕ್ಷಣ ಸಚಿವ ಹಾಗೂ ಎನ್‌ಟಿಎ ಎಂಬ ಭ್ರಷ್ಟರ ಕೂಪದಿಂದ ಇಂದು ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಜೀವ ಕಳೆದುಕೊಳ್ಳುತ್ತಿದ್ದಾರೆ. ಮೃತ ವಿದ್ಯಾರ್ಥಿಗಳನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ, ಭವಿಷ್ಯದಲ್ಲಿ ಯಾವುದೇ ವಿದ್ಯಾರ್ಥಿಯೂ ವ್ಯವಸ್ಥೆಯ ಲೋಪದಿಂದ ಸಾಯಬಾರದು. ಲೋಪಮುಕ್ತ ವ್ಯವಸ್ಥೆ ಜಾರಿಗೊಳಿಸುವುದು ಪ್ರತೀ ನಾಗರಿಕನ ಕರ್ತವ್ಯವಾಗಿದ್ದು, ಪಾರದರ್ಶಕ ಶಿಕ್ಷಣ ವ್ಯವಸ್ಥೆಗಾಗಿನ ನಮ್ಮ ಹೋರಾಟ ದೇಶದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಹುಟ್ಟುಹಾಕಲಿದೆ ಎಂದು ಭರವಸೆ ನೀಡಿದರು.ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಬೇಕು. ಎನ್‌ಟಿಎ ವ್ಯವಸ್ಥೆಯ ವಿರುದ್ಧ ಸಮಗ್ರ ತನಿಖೆ ಮತ್ತು ಸುಧಾರಣೆ ಆಗಬೇಕು. ಪರೀಕ್ಷೆಗಳು, ಫಲಿತಾಂಶಗಳು ಮತ್ತು ಉದ್ಯೋಗಾವಕಾಶಗಳಿಗಾಗಿ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಸಿದ್ಧಪಡಿಸಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂಬುದು ನಮ್ಮ ಅಭಿಯಾನದ ಪ್ರಮುಖ ಬೇಡಿಕೆಗಳಾಗಿದ್ದು, ಇವುಗಳು ಈಡೇರುವವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.ಈ ವೇಳೆ ಎಂಎಲ್‌ಸಿ ಡಿ.ಟಿ.ಶ್ರೀನಿವಾಸ್, ಮಾಜಿ ಸಂಸದ ರಾಜೀವ್ ಗೌಡ, ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ.ಮೋಹನ್, ಮಾಜಿ ಶಾಸಕರಾದ ಎಚ್. ನಾಗೇಶ್ ಉಪಸ್ಥಿತರಿದ್ದರು.ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಪ್ರಧಾನಿ ಮೋದಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅಥವಾ ಎನ್‌ಟಿಎಯ ಯಾರೊಬ್ಬರೂ ಇದರ ಹೊಣೆಗಾರಿಕೆ ತೆಗೆದುಕೊಳ್ಳುತ್ತಿಲ್ಲ. ಸುಪ್ರೀಂ ಕೋರ್ಟ್ ಕೂಡ ತೃಪ್ತಿಕರ ನಿಲುವು ಕೈಗೊಂಡಿಲ್ಲ. ಆದರೆ, ಈ ವಿಷಯದಲ್ಲಿ ರಾಹುಲ್ ಗಾಂಧಿ ಅವರು ಮಾತ್ರ ನಿಲುವು ತೆಗೆದುಕೊಂಡಿದ್ದಾರೆ. ದೇಶದ ಹಿತಾಸಕ್ತಿ, ಉತ್ತಮ ಶಿಕ್ಷಣಕ್ಕಾಗಿ ನಮ್ಮ ಹೋರಾಟ ನಿರಂತರವಾಗಿರಲಿದೆ.
-ಮನ್ಸೂರ್ ಅಲಿ ಖಾನ್, ರಾಜ್ಯಸಭಾ ಸದಸ್ಯಯುಪಿಎ ಸರ್ಕಾರ ಜನರ ಭಾವನೆ ಅರ್ಥ ಮಾಡಿಕೊಂಡು ನಾನಾ ಯೋಜನೆಗಳನ್ನು ನೀಡಿದೆ. ಆದರೆ, 2014ರ ನಂತರದ ಬಿಜೆಪಿ ಸರ್ಕಾರ ದೇಶಕ್ಕೆ ಕೊಟ್ಟಿರುವ ಕೊಡುಗೆ ಬರೀ ಸುಳ್ಳು. ಶಿಕ್ಷಣ ವ್ಯವಸ್ಥೆ ಐಸಿಯುನಲ್ಲಿದೆ ಎಂದು ರಾಹುಲ್ ಗಾಂಧಿಯವರು ಸುಮ್ಮನೆ ಹೇಳಿಲ್ಲ. ಪ್ರಶ್ನೆ ಪತ್ರಿಕೆ ಲೀಕ್ ಕಾರಣದಿಂದಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಬಿಜೆಪಿ ಸರ್ಕಾರದ ಯಾವೊಬ್ಬ ನಾಯಕರೂ ತಲೆ ಕೆಡಿಸಿಕೊಳ್ಳುತ್ತಿಲ್ಲ.
-ಪೂರ್ಣಿಮಾ, ಮಾಜಿ ಶಾಸಕಿ