ಕಾಂಗ್ರೆಸ್‌ ಗೆಲುವು, ಕಾರ್ಯಕರ್ತರಿಂದ ವಿಜಯೋತ್ಸವ

| Published : Nov 24 2024, 01:48 AM IST

ಕಾಂಗ್ರೆಸ್‌ ಗೆಲುವು, ಕಾರ್ಯಕರ್ತರಿಂದ ವಿಜಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್‌ಖಾನ್ ಪಠಾಣ ಗೆಲವು ಸಾಧಿಸುತ್ತಿದ್ದಂತೆ, ಪಕ್ಷದ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ, ಬಣ್ಣ ಎರಚುವ ಮೂಲದ ವಿಜಯೋತ್ಸವ ಆಚರಿಸಿದರು.

ಹಾವೇರಿ: ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್‌ಖಾನ್ ಪಠಾಣ ಗೆಲವು ಸಾಧಿಸುತ್ತಿದ್ದಂತೆ, ಪಕ್ಷದ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ, ಬಣ್ಣ ಎರಚುವ ಮೂಲದ ವಿಜಯೋತ್ಸವ ಆಚರಿಸಿದರು. ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಮತ ಎಣಿಕೆ ಕೇಂದ್ರದ ಎದುರು ಬೆಳಗ್ಗೆಯಿಂದಲೇ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನೆರೆದಿದ್ದರು. ಮತ ಎಣಿಕೆ ಕಾರ್ಯ ಆರಂಭಗೊಂಡು ಮೊದಲ ಸುತ್ತಿನಿಂದ ಆರನೇ ಸುತ್ತಿನವರೆಗೆ ಮತ ಎಣಿಕೆ ಕೇಂದ್ರದ ಎದುರು ಬಿಜೆಪಿ ಪಕ್ಷದ ಬಾವುಟಗಳು ರಾರಾಜಿಸಿದವು. ಏಳನೇ ಸುತ್ತಿನ ಫಲಿತಾಂಶ ಬಂದು ಕೈ ಅಭ್ಯರ್ಥಿ ಮುನ್ನಡೆ ಗಳಿಸುತ್ತಿದ್ದಂತೆ ಕಾಂಗ್ರೆಸ್‌ನ ಬಾವುಟಗಳು ಹಾರಾಡಲು ಆರಂಭಿಸಿದವು. ನಂತರ ಪ್ರತಿ ಸುತ್ತಿನಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಳ್ಳತೊಡಗಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರ ಜೈಕಾರ, ಹರ್ಷೋದ್ಘಾರ ಜೋರಾಯಿತು. ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿದ್ದ ಚುನಾವಣಾ ಫಲಿತಾಂಶ ಮೈಕ್‌ನಲ್ಲಿ ಘೋಷಣೆ ಆಗುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಹೊರಗಿದ್ದ ಅಪಾರ ಪ್ರಮಾಣದ ಕಾರ್ಯಕರ್ತರು ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸುತ್ತಿದ್ದರು. ಕೈ ಕಾರ್ಯಕರ್ತರು ಕೈ ತೋಳು ತಟ್ಟಿ ಫೈಲ್ವಾನ್ ಪಠಾಣ್‌ಗೆ ಜೈ, ಖಾದ್ರಿ ಸಾಹೇಬ್ರಿಗೆ ಜೈ, ಡಿಕೆಶಿಗೆ, ಸಿದ್ದರಾಮಯ್ಯಗೆ, ಜಾರಕಿಹೊಳಿಗೆ ಜೈ ಎಂಬ ಘೋಷಣೆಗಳು ಮೊಳಗಿದವು. ಆರಂಭದಲ್ಲಿ ಹಾರಾಡಿದ್ದ ಬಿಜೆಪಿ ಬಾವುಟ ಮಾಯವಾದವು. ಸಂಭ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು: ಮತ ಎಣಿಕೆ ಕೇಂದ್ರದ ಎದುರು ನೆರೆದಿದ್ದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಫಲಿತಾಂಶ ಚಿತ್ರಣ ಸಿಕ್ಕ ಬಳಿಕ ಕಾಂಗ್ರೆಸ್‌ನ ಮುಖಂಡರುಗಳನ್ನು ಹೆಗಲ ಮೇಲೆ ಹೊತ್ತು ಅಭಿಮಾನ ಮೆರೆದರು. ಮತ ಎಣಿಕೆ ಮುಗಿದ ಬಳಿಕ ಕೇಂದ್ರಕ್ಕೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್‌ಖಾನ್ ಪಠಾಣಗೆ ಬಣ್ಣ ಹಚ್ಚಿ, ಹೂ ಮಾಲೆ ಹಾಕಿ, ಹೆಗಲ ಮೇಲೆ ಹೊತ್ತು ಜಯಘೋಷಣೆಗಳನ್ನು ಮೊಳಗಿಸಿ ಸಂಭ್ರಮಿಸಿದರು. ಬಿಜೆಪಿ ಏಜೆಂಟರನ್ನು ಅಡ್ಡಗಟ್ಟಿದ ಕೈ ಕಾರ್ಯಕರ್ತರು: ಮತ ಎಣಿಕೆ ಪೂರ್ಣಗೊಂಡು ಘೋಷಣೆ ಬಾಕಿ ಇರುವಂತೆ ಕಾಂಗ್ರೆಸ್ ಅಭ್ಯರ್ಥಿ ಯಾಸಿರಖಾನ ಪಠಾಣ ಮತ ಎಣಿಕೆ ಕೇಂದ್ರಕ್ಕೆ ಆಗಮಿಸುತ್ತಿದ್ದರು. ಈ ವೇಳೆ ನಿರಾಸೆಯಲ್ಲಿ ಬಿಜೆಪಿ ಏಜೆಂಟರು ಹೊರಗೆ ಹೋಗುತ್ತಿದ್ದರು. ಆಗ ಕೆಲ ಬಿಜೆಪಿ ಏಜೆಂಟರನ್ನು ಅಡ್ಡಗಟ್ಟಿದ ಕೈ ಕಾರ್ಯಕರ್ತರು, ಫೈಲ್ವಾನ್, ಫೈಲ್ವಾನ್ ಎಂದು ಘೋಷಣೆ ಕೂಗಿದರು. ಇದರಿಂದ ಸ್ಥಳದಲ್ಲಿ ಉದ್ನಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಾಠಿ ಬೀಸಿದರು. ಅಲ್ಲದೇ ಒಮ್ಮೆಮ್ಮೊ ಎಣಿಕೆ ಕೇಂದ್ರದ ಗಡಿರೇಖೆ ದಾಟದಂತೆ ಪೊಲೀಸರು ನಡೆಸಿದ ಪ್ರಯತ್ನ ವಿಫಲಗೊಂಡು, ಕೆಲವರು ವಿವಿಧ ಘೋಷಣೆ ಕೂಗಿ ನುಗ್ಗಲು ಮುಂದಾದರು. ಈ ವೇಳೆ ಉದ್ರಿಕ್ತರನ್ನು ನಿವಾರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸುವ ಮೂಲಕ ಅಲ್ಲಿನ ಜನಸಂದಣಿಯನ್ನು ನಿಯಂತ್ರಿಸಿದರು.