ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣ: ಕೆ.ಜಿ. ಬೋಪಯ್ಯ ಕಿಡಿ

| Published : Dec 24 2023, 01:45 AM IST / Updated: Dec 24 2023, 01:46 AM IST

ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣ: ಕೆ.ಜಿ. ಬೋಪಯ್ಯ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಓಲೈಕೆ ರಾಜಕಾರಣ ಮಾಡುತ್ತಿದೆ, ವೋಟಿಗಾಗಿ ಒಂದು ವರ್ಗವನ್ನು ಓಲೈಸುತ್ತಿದೆ. ಅದಕ್ಕಾಗಿ ಹಿಜಾಬ್‌ ನಿಷೇಧ ವಾಪಸ್‌ ಪಡೆಯುವ ಬಗ್ಗೆ ಮುಖ್ಯಮಂತ್ರಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಿನಿಂದ ಬರೀ ವಿವಾದಗಳನ್ನೇ ಮಾಡುತ್ತಿದೆ. ಒಂದು ವರ್ಗದ ಜನರನ್ನು ಓಲೈಸಿ ಓಟ್ ಬ್ಯಾಂಕ್ ಮಾಡುತ್ತಿದೆ ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಜಾಬ್ ನಿಷೇಧ ವಾಪಸ್ ಪಡೆಯುತ್ತೇವೆಂಬ ಮುಖ್ಯಮಂತ್ರಿ ಸಿದ್ದರಾಮ್ಯಯ ಹೇಳಿಕೆಗೆ ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ದಿನದ ಹಿಂದೆ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೋಡುತ್ತೇವೆ ಎಂದರು. ರಾಜ್ಯದಲ್ಲಿ ಬರ ಬಂದು ಜನ ಸಾಯುತ್ತಿದ್ದಾರೆ. ಅದರ ಬಗ್ಗೆ ಸರ್ಕಾರಕ್ಕೆ ಚಿಂತೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಜಾಬ್ ವಿಷಯ ವಿದ್ಯಾರ್ಥಿಗಳಿಗೆ ಮರೆತೇ ಹೋಗಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲರೂ ಸಮವಸ್ತ್ರ ಹಾಕಬೇಕೆಂದು ನಮ್ಮ ಸರ್ಕಾರ ಹಿಜಾಬ್ ನಿಷೇಧಿಸಿತು. ಶಿಕ್ಷಣ ಸಂಸ್ಥೆಯಲ್ಲಿ ಧರ್ಮ ಯಾವುದೂ ಇರಬಾರದು ಎನ್ನುವುದು ನಮ್ಮ ಉದ್ದೇಶ ಆಗಿತ್ತು. ಹಿಜಾಬ್ ವಿಷಯವನ್ನು ಕೆಲವು ಧರ್ಮಾಂಧರು ವಿವಾದ ಮಾಡಿ ಕಿಡಿ ಹಚ್ಚಿದರು. ಇದರಿಂದ ಸಾಕಷ್ಟು ತೊಂದರೆ ಆಯಿತು

ವಿದ್ಯಾರ್ಥಿಗಳು ನೋವು ಅನುಭವಿಸಿದರು. ಈಗ ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಮುಸ್ಲಿಂ ಮತಗಳಿಗಾಗಿ ಕಾಂಗ್ರೆಸ್‌ ಸರ್ಕಾರ ಈ ರೀತಿ ಮಾಡುತ್ತಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಏನು ಬೇಕಾದರೂ ಆಗಲಿ ಎನ್ನುವುದು ಇವರ ಉದ್ದೇಶ ಎಂದ ಬೋಪಯ್ಯ, ಶಿಕ್ಷಣ ಸಚಿವರಿಗಾದರೂ ಇದರ ಬಗ್ಗೆ ಚಿಂತನೆ ಇರಬೇಕಿತ್ತು. ಶಿಕ್ಷಣ ಸಚಿವರದ್ದು ‘ಎಸ್ ಬಾಸ್’ ಎನ್ನುವ ಸ್ಥಿತಿಯಾಗಿದೆ. ಶಿಕ್ಷಣ ಸಂಸ್ಥೆಯಲ್ಲಿ ಧರ್ಮ ಧರ್ಮ ಎಂದು ಹೊಡೆದಾಡಿಕೊಳ್ಳಬೇಕಾ? ಎಂದು ಅವರು ಪ್ರಶ್ನಿಸಿದರು.