ಕಾಂಗ್ರೆಸ್‌ಗೆ ಬೇಕಿರುವುದು ಅಧಿಕಾರ, ಅಭಿವೃದ್ಧಿಯಲ್ಲ

| Published : May 04 2024, 12:38 AM IST

ಕಾಂಗ್ರೆಸ್‌ಗೆ ಬೇಕಿರುವುದು ಅಧಿಕಾರ, ಅಭಿವೃದ್ಧಿಯಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಪಕ್ಷಕ್ಕೆ ದೇಶದ ಅಭಿವೃದ್ಧಿಯ ಬಗ್ಗೆ ಚಿಂತನೆಗಳು ಇಲ್ಲ. ಅವರಿಗೆ ಅದು ಬೇಕಾಗಿಲ್ಲ. ಕೇವಲ ಅಧಿಕಾರ ಬೇಕು, ಕುರ್ಚಿ ಬೇಕು. ಇಂತಹ ಸ್ವಾರ್ಥ ತುಂಬಿದ ಕಾಂಗ್ರೆಸ್ ಪಕ್ಷವನ್ನು ದೇಶದ ಜನರು ತಿರಸ್ಕರಿಸುತ್ತಾ ಸಾಗಿದ್ದಾರೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಕಾಂಗ್ರೆಸ್ ಪಕ್ಷಕ್ಕೆ ದೇಶದ ಅಭಿವೃದ್ಧಿಯ ಬಗ್ಗೆ ಚಿಂತನೆಗಳು ಇಲ್ಲ. ಅವರಿಗೆ ಅದು ಬೇಕಾಗಿಲ್ಲ. ಕೇವಲ ಅಧಿಕಾರ ಬೇಕು, ಕುರ್ಚಿ ಬೇಕು. ಇಂತಹ ಸ್ವಾರ್ಥ ತುಂಬಿದ ಕಾಂಗ್ರೆಸ್ ಪಕ್ಷವನ್ನು ದೇಶದ ಜನರು ತಿರಸ್ಕರಿಸುತ್ತಾ ಸಾಗಿದ್ದಾರೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಹೇಳಿದರು.

ಶುಕ್ರವಾರ ಪಟ್ಟಣದ ರಾಜವಾಡೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಮುದ್ದೇಬಿಹಾಳ ಮತಕ್ಷೇತ್ರದ ಬಿಜೆಪಿ ಶಾಸಕನಾಗಿದ್ದ ಸಮಯದಲ್ಲಿ ಕೇವಲ ಮೂರುವರೇ ವರ್ಷದ ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹5000 ಕೋಟಿ ಅನುದಾನ ತಂದಿದ್ದೇನೆ. ಇದರ ಪರಿಣಾಮ ಇಡೀ ಮುದ್ದೇಬಿಹಾಳ ಮತಕ್ಷೇತ್ರ ನೋಡುವಂತಾಗಿದೆ ಎಂದರು.ಈ ಹಿಂದೆ ೨೫ ವರ್ಷ ಆಳಿಕೆ ಮಾಡಿದವರು ಮತ್ತೆ ಅಧಿಕಾರದಲ್ಲಿದ್ದಾರೆ. ನಾನು ತಂದಷ್ಟು ಅನುದಾನ ಇಡೀ ಅವರ ಅವಧಿಯಲ್ಲಿ ತರಲು ಆಗಿಲ್ಲ. ಮುಂದೆಯೂ ಅವರಿಂದ ತರಲು ಆಗುವುದಿಲ್ಲ. ಯಾಕೆಂದರೆ ಕಾಂಗ್ರೆಸ್ ಪಕ್ಷದವರಿಗೆ ಅಭಿವೃದ್ಧಿ ಎಂಬುವುದು ಬೇಕಿಲ್ಲ. ಇದರ ಪರಿಣಾಮ ಮೋದಿಜಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಜನರು ಬಯಸುತ್ತಾ ಸಾಗಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷವು ಮುಸ್ಲಿಮರ ಪಕ್ಷವಾಗಿ ಯಾವಾಗಲೂ ಪರಿವರ್ತನೆಯಾಗಿದೆ. ಹಿಂದುಗಳ ರಕ್ಷಣೆಗೆ ಹಿಂದುಗಳ ಅಭಿವೃದ್ಧಿಗೆ ಯಾವುದಾದರೂ ಪಕ್ಷ ಇದ್ದರೆ ಅದು ಭಾರತೀಯ ಜನತಾ ಪಕ್ಷವಾಗಿದೆ. ಒಬಿಸಿ ಮೀಸಲಾತಿಯಲ್ಲಿ ಮುಸ್ಲಿಮರನ್ನು ಸೇರಿಸುವುದರೊಂದಿಗೆ ಹಿಂದುಳಿದ ವರ್ಗದ ಜನರಿಗೆ ಮೋಸವೆಸಗುವಂತಹ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿದ್ದಾರೆ ಎಂದು ವಿವರಿಸಿದರು.

ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳುವುದು ಅಗತ್ಯವಿದೆ. ಎಸ್ಸಿ, ಎಸ್ಟಿ ಜನಾಂಗಕ್ಕೆ ಶೇ.೧೮ರಷ್ಟು ಮೀಸಲಿಟ್ಟಿದ್ದ ೨೯ ಸಾವಿರ ಕೋಟಿ ರು. ಅನುದಾನವನ್ನು ತಮ್ಮ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುವುದರ ಮೂಲಕ ಜನಾಂಗಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ಮುಸ್ಲಿಮರನ್ನು ನಂಬಿ ಮೋಸ ಹೋದೆ:

ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಸಮಾಜದವರನ್ನು ನಂಬಿ ಮೋಸ ಹೋಗಿದ್ದೇನೆ. ಅದನ್ನು ಸರಿಪಡಿಸಿಕೊಳ್ಳಲಿದ್ದೇನೆ. ಒಮ್ಮೆ ನಂಬಿ ಹೋದ ಮೋಸವನ್ನು ಮತ್ತೊಂದು ಬಾರಿಗೆ ಹೋಗುವುದಿಲ್ಲ. ಇದನ್ನು ಎಲ್ಲ ನನ್ನ ಹಿಂದು ಸಮಾಜ ಬಾಂಧವರು ತಿಳಿದುಕೊಳ್ಳಿ. ಲೋಕಸಭಾ ಚುನಾವಣೆ ಮುಗಿದ ಬಳಿಕ ಕ್ಷೇತ್ರದ ಪ್ರತಿಯೊಬ್ಬರ ಮನೆ ಬಾಗಿಲಿಗೆ ಬರಲಿದ್ದೇನೆ. ಆಗಿರುವ ತಪ್ಪಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಎಲ್ಲರೂ ಸೇರೋಣ ಎಂದ ಅವರು, ವಿಧಾನಸಭಾ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಈ ಚುನಾವಣೆಯಲ್ಲಿ ಮಾಡುವುದು ಬೇಡ. ಯಾಕೆಂದರೆ ಇದು ದೇಶದ ಭವಿಷ್ಯ ಬರೆಯುವ ಚುನಾವಣೆಯಾಗಿದೆ. ಇದರಲ್ಲಿ ತಪ್ಪು ಮಾಡಿದರೆ ಹಿಂದು ಸಮಾಜದವರೆಲ್ಲರೂ ಪಶ್ಚಾತಾಪ ಪಟ್ಟಿಕೊಳ್ಳಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಮತ ನೀಡಿ ಎಂದು ಮನವಿ ಮಾಡಿದರು.

ಮುನ್ಸಿಪಾರ್ಟಿಗಳು ಹಳ್ಳ ಹಿಡಿದಿವೆ:

ಕ್ಷೇತ್ರದ ಸ್ಥಳೀಯ ಸಂಸ್ಥೆಗಳಾದ ಮುದ್ದೇಬಿಹಾಳ-ತಾಳಿಕೋಟೆ ಪುರಸಭೆ ಆಡಳಿತ ಸಂಪೂರ್ಣ ಹಳ್ಳ ಹಿಡಿದು ಹೋಗಿವೆ. ಯಾಕೆಂದರೆ ವಾರ್ಡ್‌ಗಳ ಚುನಾವಣೆಯಲ್ಲಿ ಪಾರ್ಟಿ ಬೇಸಿಸ್‌ ಮೇಲೆ ವೋಟಿಂಗ್ ನಡೆಯುವುದಿಲ್ಲ. ಇದರಿಂದ ಒಳ್ಳೆಯ ಆಡಳಿತ ನಡೆಸುವವರು ಸಿಗುವುದಿಲ್ಲ. ಒಮ್ಮೆ ಆಯ್ಕೆಯಾಗಿ ಬಂದವರು ಮತ್ತೊಮ್ಮೆ ಬರುವುದಿಲ್ಲ. ಎಲ್ಲಿಯವರೆಗೆ ಪಾರ್ಟಿ ಬೇಸಿಸ್ ಮೇಲೆ ವೋಟಿಂಗ್ ನಡೆಯುವುದಿಲ್ಲವೋ ಅಲ್ಲಿಯವರೆಗೂ ಆಡಳಿತವು ಸುಭದ್ರವಾಗಿ ಇರುವುದಿಲ್ಲ. ಈ ವ್ಯವಸ್ಥೆ ಬದಲಾಗಬೇಕಿದೆ. ನಾನು ಇದೇ ಬಿಜೆಪಿ ಪಕ್ಷದಲ್ಲಿಯೇ ಇರುತ್ತೇನೆ. ಬಿಜೆಪಿ ಕಟ್ಟುತ್ತೇನೆ ಎಂದರು.

---