ಒಳ ಮೀಸಲಾತಿ ಜಾರಿಯಾದ್ರೆ ಕಾಂಗ್ರೆಸ್ ಸರ್ವನಾಶ

| Published : Oct 26 2024, 12:49 AM IST

ಸಾರಾಂಶ

ಒಳ ಮೀಸಲಾತಿ ಜಾರಿಗೆ ತಂದಲ್ಲಿ ಕಾಂಗ್ರೆಸ್ ಸರ್ಕಾರವು ಸರ್ವನಾಶವಾಗುತ್ತದೆ. ಆದ್ದರಿಂದ ಹೊಸದಾಗಿ ಜಾತಿ ಸಮೀಕ್ಷೆ ಮಾಡುವ ಮೂಲಕ ಒಳಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಹಿರಿಯ ದಲಿತ ಮುಖಂಡ ಡಾ.ವಿಠಲ್ ದೊಡ್ಡಮನಿ ಪ್ರತಿಪಾದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಒಳ ಮೀಸಲಾತಿ ಜಾರಿಗೆ ತಂದಲ್ಲಿ ಕಾಂಗ್ರೆಸ್ ಸರ್ಕಾರವು ಸರ್ವನಾಶವಾಗುತ್ತದೆ. ಆದ್ದರಿಂದ ಹೊಸದಾಗಿ ಜಾತಿ ಸಮೀಕ್ಷೆ ಮಾಡುವ ಮೂಲಕ ಒಳಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಹಿರಿಯ ದಲಿತ ಮುಖಂಡ ಡಾ.ವಿಠಲ್ ದೊಡ್ಡಮನಿ ಪ್ರತಿಪಾದಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿ ಕುರಿತಾಗಿ ಇದೇ 28ರಂದು ಜರುಗಲಿರುವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುವ ನಿರ್ಧಾರ ಕೈಗೊಳ್ಳುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಒಳಮೀಸಲಾತಿ ಜಾರಿಗೆ ಬಲಗೈ ಸಮುದಾಯವೂ ವಿರೋಧಿಸುತ್ತದೆ. ಅಂಬೇಡ್ಕರ್ ಆಶಯದಂತೆ ಎಲ್ಲರೂ ಸಮಾಜದಲ್ಲಿ ಬಾಳಬೇಕಾದರೆ ಈ ಮೀಸಲಾತಿ ನೀಡುವುದನ್ನು ಮತ್ತೊಮ್ಮೆ ಪರಿಶೀಲಿಸಲಿ ಮತ್ತು ನ್ಯಾಯಯುತವಾಗಿ ವರ್ಗೀಕರಣ ಮಾಡಬೇಕೆಂದು ಒತ್ತಾಯಿಸಿದರು.

ನಮಗೆ ಶೇಕಡಾ 7ರಿಂದ 8ರಷ್ಟು ಮೀಸಲಾತಿ ಕೊಡುವುದಾಗಿ ಮಾತುಕತೆ ನಡೆಯುತ್ತಿದೆ. ಇಷ್ಟು ಕೊಡಲಿಕ್ಕೆ ನಾವೇನು ಕೂಲಿ ಮಾಡ್ತಿದ್ದೇವೆಯೇ? ನಮಗೆ 100ರಷ್ಟು ಮೀಸಲಾತಿ ಬೇಕು ಎಂದು ಹೇಳಿದ ಅವರು, ಈ ವಿಷಯವಾಗಿ ತಾವು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರ ಮಾತನ್ನು ಕೇಳಲ್ಲ. ನಮಗೆ ಬೇಕಾದಷ್ಟು ಮೀಸಲಾತಿಗೆ ಅವರು ಒಪ್ಪಿದರೆ ನಾವು ಖರ್ಗೆ ಮಾತನ್ನು ಕೇಳುತ್ತೇವೆ. ಇಲ್ಲದಿದ್ದರೆ ಯಾರ ಮಾತೂ ಕೇಳುವುದಿಲ್ಲವೆಂದರು.

ತರಾತುರಿಯಲ್ಲಿ ಜಾರಿ ಬೇಡ:

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಹಾಗೂ 2023ರ ಮಾ.27ರಂದು ಬಿಜೆಪಿ ಸರ್ಕಾರ ಹೊರಡಿಸಿದ ಆದೇಶದಲ್ಲಿ ಆದಿ ಕರ್ನಾಟಕ (ಎಕೆ)ಜಾತಿಯನ್ನು ಬಲಗೈ ಮತ್ತು ಆದಿ ದ್ರಾವಿಡ (ಎಡಿ) ಜಾತಿಯನ್ನು ಮಾದಿಗ ಗುಂಪಿನಲ್ಲಿ ಸೇರಿಸಲಾಗಿದೆ. ಸರ್ಕಾರವು ಹೊಸದಾಗಿ ಜಾತಿಗಳ ಸಮೀಕ್ಷೆ ನಡೆಸುವುದೇ ಸಮಸ್ಯೆಗೆ ಪರಿಹಾರ ಎಂದು ಸಲಹೆ ನೀಡಿದರು.

ಜನಗಣತಿ ಮಾಡುವಾಗ ಜನರ ಜಾತಿಯ ಕುರಿತು ಒಂದು ಕಾಲಂ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. 101 ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಬರುವ ಎಎ (ಆಂಧ್ರ ಮತ್ತು ತಮಿಳ್ನಾಡು ಮೂಲದವರು) ಎಡಿ ಮತ್ತು ಎಕೆ ಗುಂಪಿನ ಮೂಲ ಜಾತಿಗಳನ್ನು ಪ್ರತ್ಯೇಕಿಸಿ ಉಳಿದ 98 ಜಾತಿಗಳ ಗಣತಿ ಮಾಡುವುದು ಅನಿವಾರ್ಯ. ಆ ಹಿನ್ನೆಲೆಯಲ್ಲಿ ಎಎ, ಎಡಿ, ಎಕೆ ಜಾತಿಗಳನ್ನು ಸಂವಿಧಾನದ (ಪರಿಶಿಷ್ಟ ಜಾತಿಗಳ) ಆದೇಶ 1950ರ ಪಟ್ಟಿಯಿಂದ ಕೈಬಿಡಲು ಸಂವಿಧಾನದ ಪರಿಚ್ಛೇದ 341(2)ರಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಕ್ಷಣ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

34(1)ರಡಿಯಲ್ಲಿ ಜಾತಿ ಎಂದು ಪರಿಗಣಿಸಲ್ಪಟ್ಟ ಪದಗಳು ಸುಪ್ರಿಂಕೋರ್ಟ್ ತೀರ್ಪಿನ ಪ್ರಕಾರ ಅಪ್ರಸ್ತುತವಾಗಿವೆ. ಮೂಲ ಜಾತಿ, ರಕ್ತ ಸಂಬಂಧ, ಜಾತಿಗಳ ಮದುವೆ ಸಂಬಂಧಗಳು ಮತ್ತು ಏಕರೂಪ ಲಕ್ಷಣಗಳ ಆಧಾರದ ಮೇಲೆ ಬಲಗೈ ಗುಂಪಿನಲ್ಲಿ ಒಂದೆ ಬಗೆಯ ಗುಣಲಕ್ಷಣಗಳನ್ನು ಹೊಂದಿರುವ ಸುಮಾರು 35 ಜಾತಿಗಳಿಗೆ ಹೊಲೆಯ, ಛಲವಾದಿ, ಬೇಗಾರ್, ಮಹಾರ್, ಮಾಲಾ, ಪರಯ್ಯ ಎಂದು ಕರೆಯುತ್ತಾರೆ. 98 ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿ ಸುಪ್ರಿಂಕೋರ್ಟ್ ಆದೇಶದ ಪ್ರಕಾರ ಒಳಮೀಸಲಾತಿಯನ್ನು ಜಾರಿಗೊಳಿಸಬೇಕೆಂದರು.

ಈ ವೇಳೆ ಎ.ಬಿ. ಹೊಸಮನಿ, ಆನಂದ್ ಇದ್ದರು.