ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ ತುಮಕೂರು ಮತ್ತು ಹಾಸನ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ತಾಲೂಕಿನ ದೇವ ಮೂಲೆಯಲ್ಲಿ ನೆಲಸಿರುವ ಪುರಾಣ ಪ್ರಸಿದ್ಧ ದೊಡ್ಡದಾಳವಟ್ಟ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಪರ್ತಕರ್ತರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲೇ ಫಲಿತಾಂಶ ತಿಳಿಯಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಈ ಸಲ ಗೆಲುವು ಸಾಧಿಸುವ ಅಭ್ಯರ್ಥಿಗ ಳನ್ನು ಕಣಕ್ಕಿಳಿಸಿದ್ದು ತುಮಕೂರು ಜಿಲ್ಲೆ,ರಾಜ್ಯದ ಹತ್ತಾರು ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸುವ ಮೂಲಕ ನಮ್ಮ ಅಭ್ಯರ್ಥಿ ಮುದ್ದಹನುಮೇಗೌಡರು ಕ್ಷೇತ್ರದ ಮತದಾರರ ಮನಸ್ಸಿನಲ್ಲಿದ್ದಾರೆ. ಅದೇ ರೀತಿ ಹಾಸನ ಕ್ಷೇತ್ರಕ್ಕೆ ಶ್ರೇಯಸ್ ಪಟೇಲ್ ಉತ್ತಮ ಅಭ್ಯರ್ಥಿ. ಕಳೆದ ಬಾರಿ ತುಮಕೂರು ಲೋಕಸಭಾ ಚುನಾವಣೆಯಲ್ಲಿ ಮುದ್ದಹನುಮೇಗೌಡರಿಗೆ ಟಿಕೆಟ್ ಕೈ ತಪ್ಪಿತು. ಈ ಅಭ್ಯರ್ಥಿಗಳ ಬಗ್ಗೆ ಪಕ್ಷಾತೀತವಾಗಿ ಒಲವು ಕಂಡು ಬಂದಿದ್ದು ಮತದಾರರಲ್ಲಿ ಅನುಕಂಪವಿದೆ. ಆದ ಕಾರಣ ಈ ಎರಡು ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಗೆಲುವು ಖಚಿತ ಎಂದರು.2014 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರಸ್ ಅಭ್ಯರ್ಥಿಯಾಗಿದ್ದ ಎಸ್.ಪಿ.ಮುದ್ದಹನುಮೇಗೌಡರ ಪ್ರತಿಸ್ಪರ್ಧಿಗಿಂತ 38,400 ಮತಗಳು ಲಬಿಸಿದ್ದವು. ಈ ಬಾರಿ ಈ ಸಂಖ್ಯೆ ಹೆಚ್ಚಬೇಕು. ಆ ನಿಟ್ಟಿನಲ್ಲಿ ಎಲ್ಲ ಮುಖಂಡರು ಒಮ್ಮತದಿಂದ ಗೌಡರ ಗೆಲುವಿಗೆ ಶ್ರಮಿಸಬೇಕು. ಸಿಎಂ ಸಿದ್ದರಾಮಯ್ಯ, ಡಿಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ನೀಡಿರುವ 5 ಗ್ಯಾರಂಟಿ ಯೋಜನೆಗಳು ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಪೂರಕ ಎಂದರು.ಬಿಜೆಪಿ 400 ಸೀಟು ಗೆದ್ದರೆ ಸಂವಿಧಾನ ತಿದ್ದುಪಡಿ ಮಾಡುತ್ತೇವೆ ಎಂದು ಅನಂತ ಕುಮಾರ್ ಹೆಗ್ಗಡೆ ಹೇಳಿದ್ದಾರೆ ಎಂಬ ಪರ್ತಕರ್ತರ ಪ್ರಶ್ನೆಗೆ ಸಚಿವ ಕೆ.ಎನ್. ರಾಜಣ್ಣ ಅವರ ವಿರುದ್ಧ ಕಿಡಿ ಕಾರಿದರು. ಅನಂತ ಕುಮಾರ್ ಮನುಷ್ಯನೇ ಅಲ್ಲ. ಸಂವಿಧಾನದ ಹಕ್ಕುಗಳಿಗೆ ಚ್ಯುತಿ ಬಂದರೆ ದೇಶದಲ್ಲಿ ಕ್ರಾಂತಿ ಉಂಟಾಗಲಿದೆ ಎಂದು ಎಚ್ಚರಿಸಿದರು. ಸಂವಿಧಾನ ದೇಶದ ಎಲ್ಲ ಬಡವರಿಗೂ ಆಧಾರ ಸ್ಥಂಭ. ಶ್ರೀ ರಾಮನನ್ನು ಬಿಜೆಪಿಯವರಿಗೆ ಜಗೀರ್ ಕೊಟ್ಟಿಲ್ಲ. 2004ರಲ್ಲಿ ನಾನು ದೊಡ್ಡೇರಿ ಹೋಬಳಿ ಕಿತ್ತಗಳಿ ಗ್ರಾಮದಲ್ಲಿ 25 ಲಕ್ಷ ರು. ಖರ್ಚು ಮಾಡಿ ಶ್ರೀರಾಮನ ದೇವಸ್ಥಾನ ಕಟ್ಟಿಸಿದ್ದೇನೆ. ನಾವು ಸಹ ಹಿಂದುಗಳೇ. ಶ್ರೀರಾಮ ದೇವಸ್ಥಾನ ಕಾಂಗ್ರೆಸಿನದ್ದು, ಶ್ರೀರಾಮ ಮಂದಿರ ಬಿಜೆಪಿಯವರದ್ದು ಎಂದು ಟಾಂಗ್ ನೀಡಿದರು.ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಈ ಹಿಂದೆ ಸಂಸದನಾಗಿದ್ದಾಗ ತುಮಕೂರಿನ ಎಚ್‌ಎಂಟಿ ಕಾರ್ಖಾನೆ ಮುಚ್ಚಿದ್ದರಿಂದ ಅಲ್ಲಿನ 120 ಎಕರೆ ಭೂಮಿ ಇಸ್ರೋಗೆ ಹಸ್ತಾಂತರಿಸಿದ್ದು, ಗುಬ್ಬಿಯಲ್ಲಿ ಎಚ್‌ಎಎಲ್ ಪ್ಯಾಕ್ಟರಿಗೆ 610 ಎಕರೆ ಭೂಮಿಗೆ ಶಂಕುಸ್ಥಾಪನೆ, ತುಮಕೂರು ಸ್ಮಾರ್ಟ್ ಸಿಟಿ ಸೇರಿದಂತೆ ಕ್ಷೇತ್ರ ಮತ್ತು ರಾಜ್ಯದ ಹತ್ತಾರು ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಜನರ ಪರವಾಗಿ ಧ್ವನಿ ಎತ್ತಿ ಕೆಲಸ ಮಾಡಿದ್ದೇನೆ.ತುಮಕೂರು -ರಾಯದುರ್ಗ ರೈಲ್ವೆ ಯೋಜನೆಗೆ ಒತ್ತು ನೀಡುವ ಜೊತೆಗೆ ಕಾಡು ಪ್ರಾಣಿಗಳು ನಾಡಿಗೆ ಬಾರದಂತೆ ಕ್ರಮ ವಹಿಸುವ ಜೊತೆಗೆ ಕರಡಿ ದಾಳಿಗೆ ಹಾಗೂ ಕಾಡು ಪ್ರಾಣಿಗಳಿಂದ ಹಾನಿಗೆ ಒಳಗಾದ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸುವ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಿದ್ದೇನೆ. ಸಚಿವ ಕೆ.ಎನ್.ರಾಜಣ್ಣರವರ ಮಾರ್ಗದರ್ಶನದಲ್ಲಿ ಮಧುಗಿರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು. 2014ರಲ್ಲಿ ಕೆ.ಎನ್.ರಾಜಣ್ಣ ಶಾಸಕರಾಗಿದ್ದಾಗ ನನಗೆ ಮಧುಗಿರಿ ಜನತೆ ಹೆಚ್ಚು ಮತ ನೀಡುವ ಮೂಲಕ ನನ್ನ ಗೆಲುವಿಗೆ ಶ್ರಮಿಸಿದ್ದರು. ಪ್ರಸ್ತುತ ಸಹಕಾರ ಸಚಿವರಾಗಿರುವ ಕಾರಣ ಕಳೆದ ಬಾರಿಗಿಂತ ಈ ಸಲ ಅತ್ಯಧಿಕ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆದಿನಾರಾಯಣರೆಡ್ಡಿ, ಗೋಪಾಲಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶಬಾಬು, ಪ್ರಮೀಳಮ್ಮ, ಜಿಪಂ ಮಾಜಿ ಅಧ್ಯಕ್ಷ ಜಿ.ಜೆ.ರಾಜಣ್ಣ, ಸುವರ್ಣಮ್ಮ, ತುಂಗೋಟಿ ರಾಮಣ್ಣ, ಎಂ.ಎಸ್.ಮಲ್ಲಿಕಾರ್ಜುನಯ್ಯ, ಶನಿವಾರಂರೆಡ್ಡಿ, ಸದಾಶಿವರೆಡ್ಡಿ, ನರಸಿಂಹರೆಡ್ಡಿ, ವಕೀಲ ನರಸಿಂಹಮೂರ್ತಿ, ರಾಮಾಂಜಿ, ಮೂರ್ತಿ, ಕೆಎಂಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು, ವೆಂಕಟೇಶ್ ರೆಡ್ಡಿ ಲಕ್ಷ್ಮೀಕಾಂತ, ತಾಡಿ ಶಿರಾಂ, ಚಿನ್ನಪ್ಪ ಸೇರಿ ಇತರರಿದ್ದರು.