ಕಾಂಗ್ರೆಸ್‌ಗೆ ಲಕ್ಷಕ್ಕೂ ಅಧಿಕ ಅಂತರದ ಜಯ: ಹರೀಶ್‌ಕುಮಾರ್‌ ಭವಿಷ್ಯ

| Published : Apr 30 2024, 02:00 AM IST

ಕಾಂಗ್ರೆಸ್‌ಗೆ ಲಕ್ಷಕ್ಕೂ ಅಧಿಕ ಅಂತರದ ಜಯ: ಹರೀಶ್‌ಕುಮಾರ್‌ ಭವಿಷ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ಒಳ್ಳೆಯ ಚುನಾವಣೆಯನ್ನು ಎದುರಿಸಿದ್ದೇವೆ ಎಂಬ ಸಂತೃಪ್ತಿ ಇದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆದ 14 ಕ್ಷೇತ್ರಗಳಲ್ಲಿ 11ರಲ್ಲಿ ಕಾಂಗ್ರೆಸ್‌ ಗೆಲ್ಲುವ ವಿಶ್ವಾಸವಿದೆ. 2ನೇ ಹಂತದಲ್ಲೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ. ಪಕ್ಷದ ಗ್ಯಾರಂಟಿ ಯೋಜನೆಗಳು, ಜನಪರ ಆಡಳಿತಕ್ಕೆ ಜನ ಮನ್ನಣೆ ನೀಡಿದ್ದಾರೆ ಎಂದು ಹರೀಶ್‌ ಕುಮಾರ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ಕಳೆದ 33 ವರ್ಷಗಳಿಂದ ಕಾಂಗ್ರೆಸ್‌ ವಿಫಲವಾಗಿತ್ತು. ಈ ಬಾರಿ 1 ಲಕ್ಷಕ್ಕೂ ಅಧಿಕ ಅಂತರದಿಂದ ಗೆಲ್ಲಲಿದ್ದೇವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಎಂಎಲ್ಸಿ ಹರೀಶ್‌ ಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಕ್ಷೇತ್ರದ ಎಲ್ಲೂ ಭಿನ್ನಾಭಿಪ್ರಾಯ ಇರಲಿಲ್ಲ. ಎಲ್ಲರೂ ಪಕ್ಷಕ್ಕೆ ಹೆಚ್ಚು ಮತ ಗಳಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಕನಿಷ್ಠ 1 ಲಕ್ಷ ಅಂತರದಿಂದ ಕಾಂಗ್ರೆಸ್‌ ಗೆಲುವು ಸಾಧಿಸುವುದು ನಿಶ್ಚಿತ ಎಂದರು.

ಈ ಬಾರಿ ಒಳ್ಳೆಯ ಚುನಾವಣೆಯನ್ನು ಎದುರಿಸಿದ್ದೇವೆ ಎಂಬ ಸಂತೃಪ್ತಿ ಇದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆದ 14 ಕ್ಷೇತ್ರಗಳಲ್ಲಿ 11ರಲ್ಲಿ ಕಾಂಗ್ರೆಸ್‌ ಗೆಲ್ಲುವ ವಿಶ್ವಾಸವಿದೆ. 2ನೇ ಹಂತದಲ್ಲೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ. ಪಕ್ಷದ ಗ್ಯಾರಂಟಿ ಯೋಜನೆಗಳು, ಜನಪರ ಆಡಳಿತಕ್ಕೆ ಜನ ಮನ್ನಣೆ ನೀಡಿದ್ದಾರೆ ಎಂದರು.

ಪರಿಹಾರ ವಿಚಾರದಲ್ಲಿ ಬಿಜೆಪಿ ಸುಳ್ಳು:

18,171 ಕೋಟಿ ರು. ಬರ ಪರಿಹಾರ ನೀಡಲು ಕೇಂದ್ರಕ್ಕೆ ಸ್ವತಃ ಸಿಎಂ ಮನವಿ ಮಾಡಿದರೂ ಕೊಟ್ಟಿರಲಿಲ್ಲ. ಆದರೆ ಬಿಜೆಪಿಯವರು ಮಾತ್ರ ಕೊಟ್ಟಾಗಿದೆ ಎನ್ನುತ್ತಿದ್ದರು. ಇತ್ತೀಚೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಕೂಡ ಬರ ಪರಿಹಾರ ಕೊಟ್ಟಿದ್ದೇವೆ ಎಂದೇ ಹೇಳಿದ್ದಾರೆ. ಹೀಗಾಗಿ ದಾರಿ ಇಲ್ಲದೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗಬೇಕಾಯ್ತು. ಇದೀಗ ಮೊದಲ ಹಂತದ ಚುನಾವಣೆಯಲ್ಲಿ ಎನ್‌ಡಿಎ ವಿರುದ್ಧ ಜನ ಮತ ಚಲಾಯಿಸಿದ್ದು ಗೊತ್ತಾಗಿ ದಿಢೀರನೆ 3400 ಕೋಟಿ ರು. ಬಿಡುಗಡೆ ಮಾಡಿದೆ. ಹಾಗಾದರೆ ಈ ಹಿಂದೆ ಬಿಜೆಪಿಯವರು ಬರ ಪರಿಹಾರ ಕೊಟ್ಟಿದ್ದೇವೆ ಎಂದದ್ದು ಯಾವುದು? ಉತ್ತರ ನೀಡಬೇಕು. ಈಗ ಬಿಡುಗಡೆ ಮಾಡಿದ್ದು ಓಟಿನ ಪ್ರೀತಿಯಿಂದಷ್ಟೇ ಎಂದು ಹರೀಶ್‌ ಕುಮಾರ್‌ ಟೀಕಿಸಿದರು.‘ಕಾಂಗ್ರೆಸ್‌ ಗೆದ್ದರೆ ಗೋಹತ್ಯೆ ಖಚಿತ, 370 ವಿಧಿ ವಾಪಸ್‌, ಎಸ್ಸಿ ಎಸ್ಟಿ ಮೀಸಲಾತಿ ಬದಲಾವಣೆ, ಮಂಗಳಸೂತ್ರಕ್ಕೆ ರಕ್ಷಣೆ ಇಲ್ಲ’ ಎಂಬಿತ್ಯಾದಿ ಹೇಳಿಕೆಗಳನ್ನು ಮೋದಿ ಸಹಿತ ಬಿಜೆಪಿ ಮುಖಂಡರು ನೀಡಿದ್ದಾರೆ. ಹೀಗೆ ಮಾಡುತ್ತೇವೆ ಎಂದು ಕಾಂಗ್ರೆಸ್‌ ಎಲ್ಲಿ ಹೇಳಿದೆ? ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿದೆಯಾ? ಬಿಜೆಪಿಯವರು ಸುಳ್ಳು ಹೇಳಿಯಾದರೂ ಓಟು ಪಡೆಯುವ ಮಟ್ಟಕ್ಕೆ ತಲುಪಿದ್ದಾರೆ. ಮಂಗಳಸೂತ್ರದ ಬಗ್ಗೆ ಮಾತನಾಡೋರು ಈಗ ಹಾಸನದಲ್ಲಿ ಎಷ್ಟು ಮಂಗಳಸೂತ್ರ ಕಳಚಿ ಬೀಳುತ್ತಿದೆ ಎಂಬುದರ ಕಡೆ ಗಮನ ಹರಿಸಲಿ ಎಂದರು.

ಕಾಂಗ್ರೆಸ್‌ ಮುಖಂಡರಾದ ಶಶಿಧರ ಶೆಟ್ಟಿ, ಮಹಾಬಲ ಮಾರ್ಲ, ಅಶ್ವಿನ್‌ ಕುಮಾರ್‌ ರೈ, ಇಬ್ರಾಹಿಂ, ಪ್ರತಿಭಾ ಕುಳಾಯಿ, ಸ್ಟ್ಯಾನಿ ಆಲ್ವಾರಿಸ್‌, ಗಣೇಶ್ ಪೂಜಾರಿ ಮತ್ತಿತರರಿದ್ದರು.