ಹಣ, ತೋಳ್ಬಲ, ಭ್ರಷ್ಟಾಚಾರದ ಹಣ ಚೆಲ್ಲಿ ಗೆದ್ದ ಕಾಂಗ್ರೆಸ್‌

| Published : Nov 24 2024, 01:46 AM IST

ಸಾರಾಂಶ

ದಾವಣಗೆರೆ: ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಕ್ಷೇತ್ರಗಳ ಉಪ ಚುನಾವಣೆಯನ್ನು ಹಣ ಬಲ, ತೋಳ್ಬಲ, ಅಧಿಕಾರ ಬಲ, ಭ್ರಷ್ಟಾಚಾರದಿಂದ ಹಣ ಲೂಟಿ ಹೊಡೆದ ಹಣವನ್ನು ಅಲ್ಲಿ ಚೆಲ್ಲಿ ಕಾಂಗ್ರೆಸ್‌ ಗೆದ್ದಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ದಾವಣಗೆರೆ: ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಕ್ಷೇತ್ರಗಳ ಉಪ ಚುನಾವಣೆಯನ್ನು ಹಣ ಬಲ, ತೋಳ್ಬಲ, ಅಧಿಕಾರ ಬಲ, ಭ್ರಷ್ಟಾಚಾರದಿಂದ ಹಣ ಲೂಟಿ ಹೊಡೆದ ಹಣವನ್ನು ಅಲ್ಲಿ ಚೆಲ್ಲಿ ಕಾಂಗ್ರೆಸ್‌ ಗೆದ್ದಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದಿಂದ ಹಣ ಲೂಟಿ ಮಾಡಿದ್ದನ್ನು ಚೆಲ್ಲಿ, ಗೆದ್ದಿದೆ. ಈ ಕ್ಷೇತ್ರಗಳಲ್ಲಿ ಬಿಜೆಪಿ ಸೋತಿರುವುದಕ್ಕೆ ಜನಾದೇಶ ನಮ್ಮ ವಿರುದ್ಧವಿದೆ ಅಂತಾ ನಾನು ಹೇಳುವುದಿಲ್ಲ ಎಂದರು. ಉಪ ಚುನಾವಣೆ ಫಲಿತಾಂಶದಿಂದ ನಮ್ಮ ಕಾರ್ಯಕರ್ತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಯಾರೂ ಸಹ ಮನಸ್ಸಿಗೆ ನೋವುಂಟು ಮಾಡಿಕೊಳ್ಳಬಾರದು. ನಮ್ಮ ಪಕ್ಷ, ನಾವೆಲ್ಲರೂ ಕಾರ್ಯಕರ್ತರೊಂದಿಗೆ ಇದ್ದೇವೆ. ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ನಮ್ಮೆಲ್ಲಾ ಕಾರ್ಯಕರ್ತರು, ಮುಖಂಡರು ಅರ್ಥ ಮಾಡಿಕೊಳ್ಳಬೇಕು ಎಂದರು.

ಸಂಡೂರಿನಲ್ಲಿ ಕೇವಲ 8 ಸಾವಿರ ಮತಗಳ ಅಂತರದಿಂದ ನಾವು ಸೋತಿದ್ದೇವೆ. ಮುಂದಿನ ದಿನಗಳಲ್ಲಿ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ 135ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೂ ಬರುತ್ತೇವೆ. ಯಾವುದೇ ಕಾರಣಕ್ಕೂ ನಮ್ಮ ಕಾರ್ಯಕರ್ತರು ಎದೆಗುಂದಬಾರದು ಎಂದರು.

ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಮರ್ಮಾಘಾತವಾಗಿದೆ. ನಮ್ಮ ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿದ್ದು, ಹೇಗೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಣಬಲ, ತೋಳ್ಬಲ, ಅಧಿಕಾರ ಬಲದಿಂದ, ಭ್ರಷ್ಟಾಚಾರದಿಂದ ಲೂಟಿ ಹೊಡೆದ ಹಣವನ್ನು ಚೆಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ದೂರಿದರು.

ಯತ್ನಾಳ್ ವಿರುದ್ಧ ವಾಗ್ದಾಳಿ:

ವಿಜಯೇಂದ್ರಗೆ ವಿರೋಧಿಸುವುದು ಒಂದೇ, ಹೈಕಮಾಂಡ್ ವಿರುದ್ಧ ಮಾತಾಡೋದೂ ಒಂದೇ ನಾನು ಯಾರದ್ದೇ ಹೆಸರನ್ನು ಹೇಳಲು ಇಷ್ಟಪಡುವುದಿಲ್ಲ. 2023ರ ಚುನಾವಣೆಯಲ್ಲಿ ವಿಧಾನಸೌಧದ ಒಳಗೆ, ಹೊರಗೆ ಯಾರು ನಾಲಿಗೆ ಹರಿಬಿಟ್ಟಿದ್ದರು? ಬಾಯಿ ಚಟಕ್ಕೆ ಇಂತಹವರಿಗೆ ಟಿಆರ್‌ಪಿ ಬೇಕು, ಅದಕ್ಕಾಗಿ ಮಾತನಾಡುತ್ತಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಇಂತಹವರೇ ಕಾರಣ. ಆಗ ಹೈಕಮಾಂಡ್ ಕ್ರಮ ಕೈಗೊಳ್ಳಲಿಲ್ಲ. ಹರಕು ಬಾಯಿಯಿಂದ ಯಾರು ಮಾನತಾಡುತ್ತಾರೋ, ಅಂತಹವರೇ ಕಳೆದ ಚುನಾವಣೆಯ ಸೋಲಿಗೂ ಕಾರಣ ಎಂದು ಪರೋಕ್ಷವಾಗಿ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರರನ್ನು ನೇಮಕ ಮಾಡಿದ್ದು ಪಕ್ಷದ ಹೈಕಮಾಂಡ್‌. ಇಂತಹ ವಿಜಯೇಂದ್ರರನ್ನು ವಿರೋಧಿಸುವುದು ಒಂದೇ, ಹೈಕಮಾಂಡ್ ವಿರುದ್ಧ ಮಾತನಾಡುವುದೂ ಒಂದೇ. ಕಾಂಗ್ರೆಸ್ಸಿನಿಂದ ಬಂದ 3-4 ಮಂದಿ ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ಮಾತನಾಡುತ್ತಿದ್ದಾರೆ. ಇಡೀ ರಾಜ್ಯಾದ್ಯಂತ ಸೈಕಲ್‌ ತುಳಿದು, ಪಕ್ಷವನ್ನು ಯಡಿಯೂರಪ್ಪ ಕಟ್ಟಿದ್ದರಿಂದಲೇ ಪಕ್ಷ ಅಧಿಕಾರಕ್ಕೆ ಬಂದಿತ್ತು. ನಿಮ್ಮ ಹರಕು ಬಾಯಿಯಿಂದ ವಿರೋಧ ಮಾಡುವುದು ಸರಿಯಲ್ಲ ಅವರು ಆಕ್ಷೇಪಿಸಿದರು.

ನಿಮ್ಮಗಳ ಹರಕು ಬಾಯಿಯಿಂದಲೇ ರಾಜ್ಯದ ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಇಂತಹವರು ಯಡಿಯೂರಪ್ಪ, ವಿಜಯೇಂದ್ರ, ಪಕ್ಷದ ಹೈಕಮಾಂಡ್‌ ಬಗ್ಗೆಯೇ ಟೀಕಿಸುತ್ತಾರೆ. ಕಾಂಗ್ರೆಸ್ ವಿರುದ್ಧ ಹೋರಾಟ ಬೇಡ, ಅದೇ ಪಕ್ಷದ ಜೊತೆಗೆ ಮ್ಯಾಚ್ ಫಿಕ್ಸ್ ಮಾಡಿಕೊಂಡಿದ್ದಾರೆ. ಮಂತ್ರಿ ಆಗಿಲ್ಲವೆಂಬ ಒಂದೇ ಕಾರಣಕ್ಕಾಗಿ ನಾಲಿಗೆ ಹರಿ ಬಿಟ್ಟು ಮಾತನಾಡುತ್ತಾರೆ. ನಮ್ಮ ಪಕ್ಷದ ಕೆಲ ಹರಕು ಬಾಯಿಯವರಿಂದ ನಾವು ಸೋತಿದ್ದೇವಷ್ಟೇ ಎಂದು ತಿಳಿಸಿದರು.

ಹೈಫೈ ಲೈಫ್ ನಡೆಸುತ್ತಿದ್ದೀರಿ, ಯಡಿಯೂಪ್ಪನವರು ಉಪವಾಸ, ವನವಾಸ ಇದ್ದು ಪಕ್ಷವನ್ನು ಕಟ್ಟಿ, ಜೈಲಿಗೆ ಹೋಗಿದ್ದರು. ದೀಪ ಆರುವಾಗ ಜೋರಾಗಿ ಉರಿಯುತ್ತದೆ. ಪಟಾಕಿ ಹಚ್ಚಿದಾಗ ಸದ್ದು ಬಂದರೂ ನಂತರ ಅದೇ ಪಟಾಕಿ ಸುಟ್ಟು, ಕರಕಲಾಗಿ ಸಿಡಿದು ಹೋಗಿರುತ್ತದೆ. ಯಡಿಯೂರಪ್ಪನವರ ಆಶೀರ್ವಾದದಿಂದ ನೀವು ಶಾಸಕರಾಗಿದ್ದನ್ನು ಮರೆಯಬಾರದು. ಮಂತ್ರಿ ಮಾಡಲಿಲ್ಲವೆಂಬ ಕಾರಣಕ್ಕೆ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಕೆಲವರು ಮಾತನಾಡುತ್ತಾರೆ ಎಂದು ದೂರಿದರು.

ಮುಂದಿನ ವಿಧಾನಸಭೆ ಚುನಾವಣೆಗೆ ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ದಿಕ್ಸೂಚಿಯಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ. ವಿಜಯೇಂದ್ರ ನೇತೃತ್ವದಲ್ಲೇ ಮುಂಬರುವ ವಿಧಾನಸಭೆ ಚುನಾವಣೆಯನ್ನು ಮಾಡುತ್ತೇವೆ. ಮುಂದೆ ಗೂಳಿ ಹೋಗುತ್ತಿದ್ದರೆ, ಹಿಂದೆ ತೋಳ ಹೋಗುತ್ತಿದ್ದಂತೆ. ಅದೇ ರೀತಿ ಕೆಲವರು ಕಾಯುತ್ತಿರಿ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಮುಖಂಡರಾದ ಆಲೂರು ನಿಂಗರಾಜ, ರಾಜು ವೀರಣ್ಣ, ಪ್ರವೀಣ ರಾವ್ ಜಾಧವ್ ಮತ್ತಿತರರಿದ್ದರು.