ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಬಿಡದಿ ಪಟ್ಟಣದ ಖಾಸಗಿ ಲಾಡ್ಜ್‌ವೊಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ.ತಾಲೂಕಿನ ಬಿಡದಿ ಹೋಬಳಿ ಕೆಂಚನಕುಪ್ಪೆ ಜನತಾ ಕಾಲೋನಿ ನಿವಾಸಿ ಶಿವರಾಜು(42) ಮೃತರು.ಬಿಡದಿಯ ಕೆಂಚನಕುಪ್ಪೆ ಗೇಟ್ ಬಳಿಯಿರುವ ಖಾಸಗಿ ಲಾಡ್ಜ್‌ನ ರೂಮ್‌ವೊಂದರಲ್ಲಿ ಶಿವರಾಜುರವರ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ದೊರಕಿದೆ.ಬೆಟ್ಟಿಂಗ್ ದಂಧೆಯಲ್ಲಿ ಸಾಲದ ಸುಳಿಗೆ ಸಿಲುಕಿದ ಶಿವರಾಜು, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಶವವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಿದರು. ಮೃತನ ಪತ್ನಿ ಶ್ವೇತಾರವರು ನೀಡಿರುವ ದೂರಿನ ಮೇರೆಗೆ ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಟ್ಟಿಂಗ್ ಕ್ರೇಜ್ ಗೆ ತಬ್ಬಲಿಯಾದ ಕುಟುಂಬ:ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ವೇಳೆ ಮೃತ ಶಿವರಾಜು ಬೆಟ್ಟಿಂಗ್ ದಂಧೆಗಿಳಿದು ಮಧ್ಯಸ್ಥಿಕೆ ವಹಿಸಿ, ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ಪರ ಹಣ ಕಟ್ಟುವ ಬೆಟ್ಟಿಂಗ್ ದಾರರಿಂದ ಭಾರೀ ಮೊತ್ತದ ಹಣ ಸಂಗ್ರಹಿಸಿದ್ದರು. ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್‌ರವರು ಗೆಲ್ಲುತ್ತಾರೆಂದು ಸುಮಾರು 50 ಲಕ್ಷಕ್ಕೂ ಅಧಿಕ ಹಣವನ್ನು ಬೆಟ್ಟಿಂಗ್ ಕಟ್ಟಿದ್ದರು ಎನ್ನಲಾಗಿದೆ.
ಡಿ.ಕೆ.ಸುರೇಶ್‌ರವರು ಚುನಾವಣೆಯಲ್ಲಿ ಸೋಲುತ್ತಿದ್ದಂತೆ ಭಾರೀ ಮೊತ್ತದ ಹಣವನ್ನು ಕಳೆದುಕೊಂಡು ಮನನೊಂದಿದ್ದರು. ಇತ್ತ ಬೆಟ್ಟಿಂಗ್‌ದಾರರಿಗೆ ವಾಪಸ್ ಹಣ ನೀಡಲಾಗದೆ ಒತ್ತಡಕ್ಕೆ ಸಿಲುಕಿದ್ದರೆಂದು ಹೇಳಲಾಗುತ್ತಿದೆ. ಗೋವಾ ಪ್ರವಾಸ ಹೋಗಿದ್ದ ಮೃತ ಶಿವರಾಜು, ಭಾನುವಾರ ಬೆಳಗ್ಗೆ ಬಿಡದಿ ಸಮೀಪದ ಖಾಸಗಿ ಲಾಡ್ಜ್‌ನಲ್ಲಿ ರೂಮ್ ಬಾಡಿಗೆಗೆ ಪಡೆದಿದ್ದರು.ಸೋಮವಾರ ಬೆಳಗ್ಗೆ ಎಂದಿನಂತೆ ರೂಮ್ ಬಾಯ್ ಕೊಠಡಿ ಸ್ವಚ್ಛಗೊಳಿಸಲು ಚೆಕ್ ಔಟ್ ಮಾಡಿದಾಗ ಬಾಗಿಲು ತೆಗೆಯಲಿಲ್ಲ. ಹೀಗಾಗಿ ಅನುಮಾನಗೊಂಡು ಪೊಲೀಸರಿಗೆ ವಿಷಯ ತಿಳಿಸಿದಾಗ ಸ್ಥಳಕ್ಕೆ ಧಾವಿಸಿ ರೂಮ್ ಬಾಗಿಲು ತೆರೆಸಿ, ಪರಿಶೀಲಿಸಿದಾಗ ಶಿವರಾಜು ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತನ ಸಾವಿಗೆ ಚುನಾವಣೆ ಬೆಟ್ಟಿಂಗ್ ದಂಧೆ ಕಾರಣ, ಇದರಿಂದ ಕುಟುಂಬವೇ ತಬ್ಬಲಿಯಾಯಿತು ಎನ್ನುವ ಮಾತು ಹಲವರಿಂದ ಕೇಳಿಬಂದಿತು.
ಚಾಲಕನಾಗಿ ಕ್ರಮೇಣ ಮಾಲೀಕನಾಗಿದ್ದ:ಖಾಸಗಿ ಮಾಲೀಕರೊಬ್ಬರ ಬಳಿ ಲಾರಿ ಚಾಲಕನಾಗಿದ್ದ ಮೃತ ಶಿವರಾಜು, ಕಳೆದ ಆರೇಳು ವರ್ಷಗಳಲ್ಲಿ ಶ್ರಮಪಟ್ಟು ದುಡಿದು ಮೇಲೆ ಬಂದು ಆರ್ಥಿಕವಾಗಿ ಸದೃಢನಾಗಿ ಬೆಳೆದಿದ್ದರು. ಬಿಡದಿ ಪುರಸಭೆ 3ನೇ ವಾರ್ಡ್ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಸುಸಜ್ಜಿತವಾದ ಸ್ವಂತ ಮನೆಯನ್ನು ನಿರ್ಮಿಸಿಕೊಂಡು 4 ಲಾರಿಗಳ ಮಾಲೀಕರಾಗಿದ್ದರು. ಆದರೆ , 2023 ರ ವಿಧಾನಸಭೆ ಚುನಾವಣೆಯ ವೇಳೆ ಬೆಟ್ಟಿಂಗ್ ದಂಧೆ ಸಹವಾಸಕ್ಕೆ ಬಿದ್ದ ಮೃತ ಶಿವರಾಜು ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ಪರ 25 ಲಕ್ಷ ರು.ಗಳನ್ನು ಬೆಟ್ಟಿಂಗ್ ಕಟ್ಟಿ ಗೆದ್ದಿದ್ದರೆಂದು ಹೇಳಲಾಗುತ್ತಿದೆ.