ಹುಬ್ಬಳ್ಳಿ: ನವದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗ ಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಅರೆಬೆತ್ತಲೆ ಪ್ರತಿಭಟನೆ ಖಂಡಿಸಿ ಶನಿವಾರ ಹು-ಧಾ ಮಹಾನಗರ ಬಿಜೆಪಿ ಯುವ ಮೋರ್ಚಾ ಘಟಕದ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಹಲವು ಕಾರ್ಯಕರ್ತರನ್ನು ಬಂಧಿಸುವ ಮೂಲಕ ಯತ್ನವನ್ನು ವಿಫಲಗೊಳಿಸಿದರು.
ಶೃಂಗಸಭೆ ನಡೆಯುತ್ತಿರುವಾಗ ಏಕಾಏಕಿ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಚಿತ್ರಗಳಿರುವ ಟಿಶರ್ಟ್ ಹಿಡಿದುಕೊಂಡು ಪ್ರತಿಭಟನೆ ಆರಂಭಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು, ಭಾರತ- ಅಮೆರಿಕ ನಡುವಿನ ಒಪ್ಪಂದದಲ್ಲಿ ಮೋದಿ ರಾಜಿ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನೆ ನಡೆಸಿದ್ದರು. ಅಲ್ಲದೇ, ಸಮಿಟ್‌ಗೆ ಬಂದಿದ್ದ ವಿಶ್ವ ಗಣ್ಯರ ಮುಂದೆ ಭಾರತಕ್ಕೆ ಅಪಮಾನವಾಗಿದೆ ಎಂದು ಆರೋಪಿಸಿದ್ದರಲ್ಲದೆ, `ಅಮೆರಿಕದ ಜತೆ ಟ್ರೇಡ್ ಡೀಲ್ ಎಂದು ಘೋಷಣೆ ಕೂಗಿದ್ದರು.ಕಾಂಗ್ರೆಸ್‌ನ ಈ ನಡೆಯನ್ನು ಖಂಡಿಸಿ ಆ ಪಕ್ಷದ ಕಚೇರಿಯೆದುರು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೂರ್ಣ ಪ್ರಮಾಣದಲ್ಲಿ ಸತ್ಯಾಸತ್ಯತೆಯನ್ನು ಅರಿಯದೇ ವಿಶ್ವದ ವಿವಿಧ ದೇಶಗಳಿಂದ ಆಗಮಿಸಿದ್ದ ಅತಿಥಿಗಳ ಎದುರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದರು.ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಸಾಕಷ್ಟು ಸಮಾಧಾನ ಪಡಿಸಿದರೂ ಜಗ್ಗದ ಬಿಜೆಪಿ ಕಾರ್ಯಕರ್ತರು, ಬ್ಯಾರಿಕೇಡ್‌ಗಳನ್ನು ತಳ್ಳಾಡಿ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಚಕಮಕಿ ನಡೆಯಿತು. ಪೊಲೀಸರು ಹಲವರನ್ನು ಬಂಧಿಸಿ, ಅಲ್ಲಿಂದ ಕರೆದುಕೊಂಡು ಹೋದರು. ಈ ಮೂಲಕ ಕಾಂಗ್ರೆಸ್ ಕಚೇರಿ ಮುತ್ತಿಗೆ ಹಾಕುವ ಯತ್ನವನ್ನು ವಿಫಲಗೊಳಿಸಿದರು.
ಈ ವೇಳೆ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನುಪಕುಮಾರ್ ಬಿಜವಾಡ, ಮಂಡಳ ಅಧ್ಯಕ್ಷ ಮಂಜು ಕಾಟಕರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರೀತಮ್ ಅರಕೇರಿ, ಮಂಡಳ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ಕುಬಸದ, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಸತೀಶ ಶೇಜವಾಡಕರ, ರಂಗಾ ಕಠಾರೆ, ಮಂಜುನಾಥ ಚಿಂತಗಿಂಜಲ, ಗುರು ಬನ್ನಿಕೊಪ್ಪ, ನಾಗರತ್ನಾ ಬಳ್ಳಾರಿ, ಅರುಣ ಹುದಲಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.