ಸಾರಾಂಶ
ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಹೇಳಿದರು.
ಮಡಿಕೇರಿ: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಮಡಿಕೇರಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಆತ್ಮಹತ್ಯೆ ಪ್ರಕರಣವನ್ನು ಯುಡಿಆರ್ ಮಾಡಲು ಪೊಲೀಸರಿಗೆ ಒತ್ತಡ ಹೇರಲಾಗುತ್ತಿದೆ. ತನಿಖಾ ಅಧಿಕಾರಿಯನ್ನೇ ಎತ್ತಂಗಡಿ ಮಾಡಲಾಗಿದೆ. ತನಿಖೆ ದಿಕ್ಕು ತಪ್ಪಿಸುವುಕ್ಕೆ ಅಧಿಕಾರಿಯನ್ನೇ ಎತ್ತಂಗಡಿ ಮಾಡಲಾಗಿದೆ. ವಿನಯ್ ಸೋಮಯ್ಯ ಮೃತಪಟ್ಟು ಹತ್ತು ದಿನವಾದರೂ ಯಾವುದೇ ತನಿಖೆ ನಡೆದಿಲ್ಲ. ಆರೋಪಿಗಳಿಗೆ ನೊಟೀಸ್ ಕೊಟ್ಟಿರುವುದಾಗಿ ಪೊಲೀಸ್ ಇಲಾಖೆ ಹೇಳುತ್ತಿದೆ. ಆದರೆ ಇದುವರೆಗೆ ಆರೋಪಿಯ ಬಂಧನವಾಗಿಲ್ಲ, ತನಿಖೆಯೂ ನಡೆದಿಲ್ಲ. ಆರೋಪಿಗಳ ವಿಚಾರಣೆ ಬದಲಾಗಿ ವಿನಯ್ ಕುಟುಂಬದವರ ವಿಚಾರಣೆಗೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಮತ್ತೊಂದು ಕಡೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್ ಮುಖಂಡ ಜಿಲ್ಲೆಯಲ್ಲೇ ಆರಾಮವಾಗಿ ಓಡಾಡಿಕೊಂಡಿದ್ದಾರೆ.ಮಡಿಕೇರಿ ತಾಲೂಕು ಅರವತ್ತೊಕ್ಲು ಗ್ರಾಮದ ದೇವರ ಹಬ್ಬದಲ್ಲಿ ಭಾಗವಹಿಸಿರುವ ಆರೋಪಿ ನೃತ್ಯವನ್ನೂ ಮಾಡಿದ್ದಾರೆ. ಆದರೆ ನೊಟೀಸ್ ಕೊಡುವುದಕ್ಕೂ ಆರೋಪಿ ಸಿಗುತ್ತಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಪೊಲೀಸರು ಯಾರದ್ದೋ ಮಾತು ಕೇಳಿ ಹೀಗೆಲ್ಲಾ ಮಾಡುತ್ತಿದ್ದಾರೆ. ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.