ಸಾರಾಂಶ
ಕನ್ನಡಪ್ರಭ ವಾರ್ತೆ, ಕಡೂರು
ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕಡೂರು ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯರ್ತರು ಪ್ರತಿಭಟನೆ ನಡೆಸಿದರು.ಪಟ್ಟಣದಲ್ಲಿ ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್ ಘಟಕಗಳಿಂದ ನಡೆದ ಪ್ರತಿಭಟನೆ ಯಶಸ್ವಿಯಾಗಿ ನಡೆಯಿತು. ಪಟ್ಟಣದ ಕಾಂಗ್ರೆಸ್ ಕಚೇರಿ ಬಳಿ ಕಾರ್ಯಕರ್ತರು ಮತ್ತು ಮುಖಂಡರು ಸಮಾವೇಶಗೊಂಡು ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆಗೆ ಚಾಲನೆ ನೀಡಲಾಯಿತು.
ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಕೆ ಎಲ್ ವಿ ವೃತ್ತ ದವರೆಗೆ ತೆರಳಿ ಪೇಟೆ ಗಣಪತಿ- ಆಂಜನೇಯ ಸ್ವಾಮಿ ದೇವಾಲಯ ಬಳಿ ಶಿವಮೊಗ್ಗ- ಬೆಂಗಳೂರು ರಸ್ತೆಯಲ್ಲಿ ಘೋಷಣೆ ಕೂಗುತ್ತಾ ಪ್ರತಿಭಟಿಸಿದರು. ರಸ್ತೆ ತಡೆಯಿಂದ ಕೆಲಕಾಲ ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಆನಂತರ ಪೊಲೀಸರು ಪ್ರತಿಭಟನಾಕಾರರನ್ನು ಎಬ್ಬಿಸಿದ್ದರಿಂದ ಮೆರವಣಿಗೆ ಕೆಎಂ ರಸ್ತೆಯಿಂದ ತಾಲೂಕು ಕಚೇರಿ ಮುಂದೆ ಜಮಾಯಿಸಿ ಪ್ರತಿಭಟಿಸಿದರು.ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣ ಮೂರ್ತಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಮೂಲಕ ಉತ್ತಮ ಆಡಳಿತ ನೀಡುತ್ತಿದ್ದು ಬಿಜೆಪಿ ಕುತಂತ್ರ ಎಂದಿಗೂ ನಡೆಯಲ್ಲ. ಮೂಡಾ ಹಗರಣದಲ್ಲಿ ಸಿಎಂ ಸಿಲುಕಿಸುವ ತಂತ್ರ ಫಲಿಸುವುದಿಲ್ಲ. ತಾಳ್ಮೆಯಿಂದ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿಯ ವಿಜಯೇಂದ್ರರು ವಿಷೇಂದ್ರರಾಗಿ ಗದ್ದುಗೆಯಿಂದ ಇಳಿಸುವ ಹುನ್ನಾರ ನಡೆಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪುರಸಭೆ ಹಿರಿಯ ಸದಸ್ಯ ತೋಟದಮನೆ ಮೋಹನ್ ಮಾತನಾಡಿ, ರಾಜ್ಯದ ಸಮಸ್ತ ಬಡವರ ನಾಯಕ ಸಿದ್ದರಾಮಯ್ಯ ಬೆಳವಣಿಗೆ ಸಹಿಸದೆ ಸರ್ಕಾರ ಪತನಕ್ಕೆ ಬಿಜೆಪಿ ತಂತ್ರ ಯಾವುದೇ ಕಾರಣಕ್ಕೂ ಫಲಿಸಲ್ಲ. ಮುಂದೆ ಉಗ್ರ ಹೋರಾಟ ನಡೆಯುತ್ತದೆ ಎಂದರು.ಕೆ.ಎಚ್. ಶಂಕರ್ ಮಾತನಾಡಿ, ಕಳಂಕವಿಲ್ಲದ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮನವರ ಹೆಸರನ್ನುತಂದು ಸಿಎಂ ಹೆಸರಿಗೆ ರಾಜಕೀಯ ವಾಗಿ ಮಸಿ ಬಳಿಯುವ ತಂತ್ರ ಬಿಜೆಪಿ ನಾಯಕರು ಮಾಡುತ್ತಿದ್ದಾರೆ.ಸಿಎಂ ಸಿದ್ದರಾಮಯ್ಯ ರಿಗೆ ತೊಂದರೆ ಮಾಡಿದರೆ ರಕ್ತ ಕ್ರಾಂತಿ ನಡೆಯುತ್ತದೆ ಬಿಜೆಪಿ ನಾಯಕರೆ ಎಚ್ಚರ ಎಂದರು.
ತಹಸೀಲ್ದಾರ್ ಪೂರ್ಣಿಮಾ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಅರ್ಪಿಸಲಾಯಿತು. ಕಾಂಗ್ರೆಸ್‌ನ ಜಿಲ್ಲಾ ಮುಖಂಡ ಎಂ.ಎಚ್ ಚಂದ್ರಪ್ಪ, ಈರಳ್ಳಿ ರಮೇಶ್, ಕಂಸಾಗರ ರೇವಣ್ಣ, ಎಂ. ಸೋಮಶೇಖರ್, ರೇವತಿ ನಾಗರಾಜ್, ಚಂದ್ರಮೌಳಿ, ಅಬಿದ್ ಪಾಶ, ಕಂಸಾಗರ ಸೋಮಶೇಖರ್, ಗಿರೀಶ್, ಪ್ರಕಾಶನಾಯ್ಕ, ಗೋವಿಂದಪ್ಪ, ಜೋಡಿ ತಿಮ್ಮಾಪುರ ನರಸಿಂಹ, ಕಾಂಗ್ರೆಸ್ ಪಕ್ಷದ ವಿವಿಧ ಗ್ರಾಪಂ ಅಧ್ಯಕ್ಷರು, ಸದಸ್ಯರು, ಗ್ರಾಮೀಣ ಭಾಗದ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.19ಕೆಕೆಡಿಯು1.
ಕಡೂರು ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಖಂಡರು ಕಾರ್ಯಕರ್ತರು ತಾಲೂಕು ಕಚೇರಿಯಲ್ಲಿ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿದರು.