7ಕೆಆರ್ ಎಂಎನ್ 11.ಜೆಪಿಜಿರಾಮನಗರ ಐಜೂರು ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha
Image Credit: KP
ರಾಮನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಅವಹೇಳನಕಾರಿಯಾಗಿ ರಾವಣನಿಗೆ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
-ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ವಿರುದ್ಧ ಆಕ್ರೋಶ -ಮೈಸೂರು - ಬೆಂಗಳೂರು ಹೆದ್ದಾರಿಯಲ್ಲಿ ವಾಹನ ತಡೆ ರಾಮನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಅವಹೇಳನಕಾರಿಯಾಗಿ ರಾವಣನಿಗೆ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ನಗರದ ಐಜೂರು ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ವಿರುದ್ಧ ಘೋಷಣೆ ಕೂಗುತ್ತಾ ಮೈಸೂರು - ಬೆಂಗಳೂರು ಹೆದ್ದಾರಿಯಲ್ಲಿ ವಾಹನ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಧರ್ಮ ಮಾರ್ಗದ ಹಾದಿಯಲ್ಲಿ ನಡೆಯುವ ನಮ್ಮ ರಾಹುಲ್‌ಗಾಂಧಿಗೆ ಸೋಲಿಲ್ಲ, ಅಧರ್ಮಿ ಬಿಜೆಪಿಯವರ ಅಸತ್ಯದ ಹಾದಿಗೆ ಗೆಲುವಿಲ್ಲ, ರಾಹುಲ್ ಧರ್ಮ ರಕ್ಷಕ, ಮೋದಿ ಧರ್ಮ ಭಕ್ಷಕ, ರಾಮನ ನಡೆಯುಳ್ಳ ರಾಹುಲ್ ಜೀಗೆ ರಾಮನ ಮನಸ್ಥಿತಿಯ ಬಿಜೆಪಿಯವರು ತಮ್ಮ ನಿಜ ವೇಷವನ್ನು ಹಾಕಿ ಜನತೆ ಮುಂದೆ ಪುಂಗಿ ಊದಲು ಹೊರಟಿದ್ದಾರೆ ಎಂಬ ಭಿತ್ತಿ ಪತ್ರಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು. ರಾಹುಲ್ ಗಾಂಧಿ ಅವರನ್ನು ತಾತ್ವಿಕವಾಗಿ ಎದುರಿಸಲಾಗದವರು ಇಂತಹ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಬಗ್ಗೆ ವಿಕೃತ ಪೋಸ್ಟರ್ ಬಳಸುತ್ತಿರುವುದನ್ನು ಖಂಡಿಸಿದರು. ಮಾಜಿ ಶಾಸಕ ಕೆ.ರಾಜು ಮಾತನಾಡಿ, ಕೋಮು ದ್ವೇಷದ ಮೂಲಕ ರಾಜಕೀಯ ಮಾಡುತ್ತಿರುವ ಬಿಜೆಪಿ ಸರ್ಕಾರದ ಬಣ್ಣ ಬಯಲು ಮಾಡುತ್ತಿರುವ ರಾಹುಲ್ ಗಾಂಧಿ ಅವರ ವಿರುದ್ಧ ಪ್ರತಿನಿತ್ಯ ಒಂದಲ್ಲೊಂದು ಬಿಜೆಪಿ ಷಡ್ಯಂತ್ರ ಮಾಡುತ್ತಲೇ ಬಂದಿದೆ. ಇದಕ್ಕೆ ಉತ್ತರವಾಗಿ ಸುಮಾರು ದೇಶಾದ್ಯಂತ 4 ಸಾವಿರ ಕಿ.ಮೀ. ಪಾದಯಾತ್ರೆ ನಡೆಸುವ ಮೂಲಕ ಎಲ್ಲಾ ಜಾತಿ, ಮತ, ಧರ್ಮದವರನ್ನು ಸಮಾನವಾಗಿ ಕೊಂಡೊಯ್ಯುವ ಸಂದೇಶ ರವಾನಿಸಿದ ರಾಹುಲ್ ಗಾಂಧಿ ಅವರನ್ನು ಕಟ್ಟಿಹಾಕಲು ಬಿಜೆಪಿ ಕುತಂತ್ರ ಮಾಡುತ್ತಿದೆ ಎಂದು ಟೀಕಿಸಿದರು. ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ರದ್ದು ಮಾಡಿದ್ದ ಬಿಜೆಪಿ ಸರ್ಕಾರದ ತೀರ್ಮಾನಕ್ಕೆ ನ್ಯಾಯಾಲಯ ತಡೆ ನೀಡಿದ್ದು, ರಾಹುಲ್ ಗಾಂಧಿ ಅವರಿಗೆ ಸಿಕ್ಕ ಜಯವಾಗಿದೆ. ಕೋಮುವಾದವನ್ನು ಪ್ರಶ್ನೆ ಮಾಡುವ ಮಾಧ್ಯಮಗಳ ವಿರುದ್ಧವೂ ಬಿಜೆಪಿ ದಾಳಿ ಮಾಡುತ್ತಿದೆ. ಬಿಜೆಪಿಯ ಎಲ್ಲ ಷಡ್ಯಂತ್ರಗಳನ್ನು ಮೆಟ್ಟಿ ನಿಂತಿರುವ ರಾಹುಲ್ ಗಾಂಧಿ ಅವರು ಕೋಮುವಾದಿ ಸರ್ಕಾರವನ್ನು ಕಿತ್ತೊಗೆಯುವ ಶಪತ ಮಾಡಿದ್ದಾರೆ. ಇದರಿಂದ ವಿಚಲಿತರಾಗಿರುವ ಬಿಜೆಪಿ ರಾಹುಲ್ ಗಾಂಧಿ ಅವರನ್ನು ರಾವಣನಿಗೆ ಹೋಲಿಸಿ ಕೀಳು ಮಟ್ಟದ ರಾಜಕೀಯ ಮಾಡಲು ಮುಂದಾಗಿದೆ. ಇದೀಗ ಬಿಜೆಪಿಯ ಸಂಸ್ಕೃತಿ ಎಂತದ್ದು ಎಂಬುದು ಜನರಿಗೆ ಮನವರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಗುರುಪ್ರಸಾದ್ ಮಾತನಾಡಿ, ಕಾಂಗ್ರೆಸ್ ನಾಯಕನನ್ನು ರಾವಣ ಎಂಬಂತೆ ಬಿಂಬಿಸಿರುವ ಬಿಜೆಪಿಯ ಅನಾಗರಿಕ ವರ್ತನೆಯಾಗಿದೆ. ಬಿಜೆಪಿಯೂ ಯಾವಾಗಲೂ ವಾಮಮಾರ್ಗದಲ್ಲಿ ರಾಜಕಾರಣದಲ್ಲಿ ತೊಡಗಿದೆ. ಅದಕ್ಕೆ ರಾಹುಲ್ ಗಾಂಧಿಯವರನ್ನು ನೈತಿಕವಾಗಿ ಎದುರಿಸುವ ಧೈರ್ಯವಿಲ್ಲ. ಹಾಗಾಗಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅವರು ಎಷ್ಟೇ ಅಪಪ್ರಚಾರ ನಡೆಸಿದರೂ ದಿನೇ ದಿನೇ ರಾಹುಲ್ ಗಾಂಧಿಯವರು ಏನೆಂಬುದು ಜನರಿಗೆ ಅರ್ಥವಾಗುತ್ತಿದೆ ಎಂದು ಹೇಳಿದರು. ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ರಾಹುಲ್ ಗಾಂಧಿ ಅವರ ಬಗ್ಗೆ ಕೀಳು ಮಟ್ಟದ ಪೋಸ್ಟ್ ಹಾಕಿರುವುದು ಬಿಜೆಪಿಯವರ ರಾವಣನ ಮನಸ್ಥಿತಿಯನ್ನು ತೋರಿಸುತ್ತಿದೆ. ದೇಶದ ಎಲ್ಲಾ ಜನರನ್ನು ಒಗ್ಗಟ್ಟಿನಿಂದ ಕೊಂಡೊಯ್ಯುತ್ತಿರುವ ರಾಹುಲ್ ಗಾಂಧಿ ಅವರು ಸತ್ಯ ಹೇಳುವುದನ್ನು ಬಿಜೆಪಿ ಸಹಿಸುತ್ತಿಲ್ಲ. ಅವರ ಜನಪ್ರಿಯತೆಯಿಂದ ವಿಚಲಿತರಾಗಿರುವ ಬಿಜೆಪಿ ನಾಯಕರು ಹತಾಶ ಮನೋಭಾವದಿಂದ ವಿಕೃತ ಚೇಷ್ಟೆಗಳನ್ನು ಮಾಡುತ್ತಿದ್ದಾರೆ. ಇದು ಬಿಜೆಪಿಯ ಸೋಲಿನ ಭೀತಿಗೆ ನಿದರ್ಶನ ಎಂದರು. ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಉಪಾಧ್ಯಕ್ಷ ಸೋಮಶೇಖರ್ , ಮಾಜಿ ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ಸದಸ್ಯ ನಿಜಾಮುದ್ದೀನ್, ಗಿರಿಜಮ್ಮ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ನವೀನ್, ಪ್ರಧಾನ ಕಾರ್ಯದರ್ಶಿ ಸಂತೋಷ್, ಯೂತ್ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವಸೀಂ, ಅನಿಲ್ ಜೋಗೇಂದರ್, ಪದಾಧಿಕಾರಿಗಳಾದ ಕಿರಣ್, ಮೋಹನ್, ವಸಂತ್, ಲಿಖಿತ್, ಆನಂದ್ ಮತ್ತಿತರರು ಭಾಗವಹಿಸಿದ್ದರು. 7ಕೆಆರ್ ಎಂಎನ್ 11.ಜೆಪಿಜಿ ರಾಮನಗರ ಐಜೂರು ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.