ಸಾರಾಂಶ
ಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನವಿರೋಧಿ ಧೋರಣೆಗಳು ಬಹಳ ಕಾಲ ಉಳಿಯುವುದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿ: ಕಾನೂನು ಸುವ್ಯವಸ್ಥೆ ನೆಪದಲ್ಲಿ ರಾಹುಲ್‌ಗಾಂಧಿ ಅವರ ಭಾರತ ಜೋಡೋ ನ್ಯಾಯಯಾತ್ರೆಯನ್ನು ಅಸ್ಸಾಂನ ನಾಗಾಂವ್ ಜಿಲ್ಲೆ ಪ್ರವೇಶಿಸದಂತೆ ತಡೆದಿರುವ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದ ರಾಯಲ್ ವೃತ್ತದಲ್ಲಿ ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದರು.
ಮಣಿಪುರದಿಂದ ಜ. 14ರಂದು ಆರಂಭವಾಗಿದ್ದ 67 ದಿನಗಳ ನ್ಯಾಯಯಾತ್ರೆಯು ಅರುಣಾಚಲ ಪ್ರದೇಶದ ಬಳಿಕ ಅಸ್ಸಾಂ ರಾಜ್ಯವನ್ನು ಪ್ರವೇಶಿಸಿತ್ತು. ಆದರೆ, ಬಿಜೆಪಿಯವರು ಭಾರತ ಜೋಡೋ ನ್ಯಾಯಯಾತ್ರೆಯನ್ನು ಸುಮಾರು ಎರಡು ತಾಸುಗಳ ಕಾಲ ಅಸ್ಸಾಂ ಪೊಲೀಸರ ಮೂಲಕ ತಡೆದಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಕೇಂದ್ರದ ಬಿಜೆಪಿ ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗಿದ ಕಾಂಗ್ರೆಸ್ ಕಾರ್ಯಕರ್ತರು, ನ್ಯಾಯಯಾತ್ರೆಯನ್ನು ತಡೆಯುವ ಮೂಲಕ ಬಿಜೆಪಿಯ ಮುಖವಾಡ ಬಯಲಾಗಿದೆ. ಬಿಜೆಪಿಯ ದುರಾಡಳಿತ ನೀತಿಯನ್ನು ಇಡೀ ದೇಶವೇ ಗಮನಿಸುತ್ತಿದೆ. ಕಾಂಗ್ರೆಸ್ ನಾಯಕರಿಗೆ ವಿನಾಕಾರಣ ತೊಂದರೆ ಕೊಡುವ ಬಿಜೆಪಿ ಹುನ್ನಾರಕ್ಕೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಜಗ್ಗುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನವಿರೋಧಿ ಧೋರಣೆಗಳು ಬಹಳ ಕಾಲ ಉಳಿಯುವುದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಹಿರಿಯ ಮುಖಂಡ ಕಲ್ಲುಕಂಬ ಪಂಪಾಪತಿ ಅವರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು. ಮೇಯರ್ ಬಿ. ಶ್ವೇತಾ, ಮಾಜಿ ಮೇಯರ್ ರಾಜೇಶ್ವರಿ, ಉಪಮೇಯರ್ ಜಾನಕಿ, ವೆಂಕಟೇಶ್ ಹೆಗಡೆ, ಬಿ.ಎಂ. ಪಾಟೀಲ್ ಹಾಗೂ ಪಕ್ಷದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.