ಸಾರಾಂಶ
ತಮ್ಮ ಮೇಲಿನ ಆರೋಪಕ್ಕೆ ಸ್ವತಃ ತನಿಖಾ ರಚಿಸಿರುವ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದನ್ನು ವಿಪಕ್ಷಗಳು ಅರಿಯಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ಎಂಡಿಎ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಅಹಿಂದ ಸಂಘಟೆಯವರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಪ್ರತಿಭಟಿಸಿದರು.ನಗರದ ನ್ಯಾಯಾಲಯದ ಮುಂಭಾಗ ಟಯರ್ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆತ್ಲೋಟ್ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜ್ಯಪಾಲರು ಜೆಡಿಎಸ್- ಬಿಜೆಪಿ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಅವರನ್ನು ಕೂಡಲೇ ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು ಮಾತನಾಡಿ, ತಮ್ಮ ಮೇಲಿನ ಆರೋಪಕ್ಕೆ ಸ್ವತಃ ತನಿಖಾ ರಚಿಸಿರುವ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದನ್ನು ವಿಪಕ್ಷಗಳು ಅರಿಯಬೇಕು. ಬಡವರು, ಕಾರ್ಮಿಕರು, ಮಹಿಳೆಯರು ಸೇರಿ ಶೋಷಿತ ವರ್ಗದ ಜನರು ಸರ್ಕಾರದ ಪರ ನಿಂತಿದ್ದಾರೆ. ಆದರೆ, ಆ ಜನರ ದಾರಿ ತಪ್ಪಿಸುವ ಕೆಲಸ ವಿಪಕ್ಷಗಳು ಮಾಡುತ್ತಿವೆ ಎಂದು ಆರೋಪಿಸಿದರು.ರಾಜ್ಯಪಾಲರು ತಮ್ಮ ನಿರ್ಧಾರ ಹಿಂಪಡೆಯಬೇಕು. ಅದು ಸಾಧ್ಯವಾಗದೇ ಹೋದರೆ ಅವರ ರಾಜೀನಾಮೆಗೆ ಒತ್ತಾಯಿಸಿ ರಾಜಭವನ ಚಲೋ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಸ್ಥಳೀಯವಾಗಿ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಅವರು ಎಚ್ಚರಿಸಿದರು.
ಕರ್ನಾಟಕ ಪ್ರಾದೇಶಿಕ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆ ಸಹಿಸದ ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ಬಳಸಿಕೊಂಡು ರಾಜ್ಯ ಸರ್ಕಾರ ಉರುಳಿಸುವ ಹುನ್ನಾರ ನಡೆಸಿದೆ ಎಂದು ದೂರಿದರು.ವಿವಿಧ ಸಂಘಟನೆಗಳ ಮುಖಂಡರಾದ ಎಚ್.ಎಸ್. ಪ್ರಕಾಶ್, ರಾಜೇಶ್, ಬಸವಣ್ಣ, ರವಿನಂದನ್, ಯೋಗೀಶ್ ಉಪ್ಪಾರ, ಮೊಗಣ್ಣಚಾರ್, ಲೋಕೇಶ್, ಮಹೇಂದ್ರ, ಬಸವರಾಜು, ಮಂಜುಳಾ ಮಂಜುನಾಥ್, ಲಕ್ಷ್ಮೀ, ಹಿನಕಲ್ ಉದಯ್, ಕಾಂತರಾಜು, ತಿಮ್ಮಯ್ಯ, ದಿನೇಶ್, ಕೇಶವ್ ಮೊದಲಾದವರು ಇದ್ದರು.