ಸಾರಾಂಶ
ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ ತರಬೇತಿ ಕಾರ್ಯಾಗಾರ: ಶಾಸಕ ಅಶೋಕ್ ರೈ
ಕನ್ನಡಪ್ರಭ ವಾರ್ತೆ ಪುತ್ತೂರುಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಕಾರಿಣಿ ಸಭೆಯು ಮೇ ೧೭ರಂದು ಪುತ್ತೂರಿನ ಎಪಿಎಂಸಿ ಸಭಾಂಗಣದಲ್ಲಿ ನಡೆಯಲಿದೆ. ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಕಾರ್ಯಕಾರಿಣಿ ಪುತ್ತೂರಿನಲ್ಲಿ ನಡೆಯಲಿದ್ದು, ಈ ಕಾರ್ಯಕಾರಣಿಯಲ್ಲಿ ಆಹ್ವಾನಿತರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಾಗಾರವು ೪ ವಿಭಾಗದಲ್ಲಿ ನಡೆಯಲಿದ್ದು, ಬೆಳಗ್ಗೆ ೧೦ರಿಂದ ೧೨ ಗಂಟೆಯ ತನಕ ವಲಯ ಮತ್ತು ಬೂತ್ ಅಧ್ಯಕ್ಷರಿಗೆ, ೧೨ ಗಂಟೆಯಿಂದ ಮಧ್ಯಾಹ್ನ ಗಂಟೆ ೨ರ ತನಕ ಸರ್ಕಾರದ ಹಂತದಲ್ಲಿ ನಾಮನಿರ್ದೇಶಿತ ಮತ್ತು ನೇಮಕಗೊಂಡ ಸದಸ್ಯರಿಗೆ, ಅಪರಾಹ್ನ ೩ ಗಂಟೆ ಗಂಟೆಯಿಂದ ಸಂಜೆ ಗಂಟೆ ೪ರ ತನಕ ಪಕ್ಷದ ಪ್ರಮುಖ ನಾಯಕರಿಗೆ ತರಬೇತಿ ಕಾರ್ಯಾಗಾರ ನಡೆಯಲಿದೆ. ಸಂಜೆ ಗಂಟೆ ೫ ರಿಂದ ರಾತ್ರಿ ಗಂಟೆ ೯ರ ತನಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಕುಟುಂಬ ಸಮ್ಮಿಲನ ನಡೆಯಲಿದೆ. ಪಕ್ಷದ ಎಲ್ಲಾ ಕಾರ್ಯಕರ್ತರು ಅವರ ಮನೆ ಮಂದಿಯೊಂದಿಗೆ ಭಾಗವಹಿಸಲಿದ್ದಾರೆ. ಬಳಿಕ ಕಾಂಗ್ರೆಸ್ ಕಾರ್ಯಕರ್ತರಿಂದ ಸಾಂಸ್ಕೃತಿಕ ರಸಮಂಜರಿ ನಡೆಯಲಿದೆ.ಕಾರ್ಯಕಾರಿಣಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಪಕ್ಷದ ಕಾರ್ಯಾಧ್ಯಕ್ಷ ಕೆ.ಸಿ ಚಂದ್ರಶೇಖರ್, ವಿಧಾನಸಭಾಪತಿ ಅಧ್ಯಕ್ಷ ಯು.ಟಿ.ಖಾದರ್, ಮಂಜುನಾಥ್ ಭಂಡಾರಿ, ಹರೀಶ್ ಕುಮಾರ್, ಐವನ್ ಡಿಸೋಜ, ಮಾಜಿ ಮಂತ್ರಿ ರಮಾನಾಥ ರೈ, ಅಭಯಚಂದ್ರ ಜೈನ್ ಮತ್ತಿತರ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ತಜ್ಞ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ ಎಂದು ತಿಳಿಸಿದರು.
ಒಟ್ಟು ಕಾರ್ಯಾಗಾರಕ್ಕೆ ೪೦ ಲಕ್ಷ ರು. ಖರ್ಚು ಆಗಲಿದೆ. ಈ ಪೈಕಿ ೧೦ ಲಕ್ಷದ ಗಿಫ್ಟ್ ನೀಡಲಾಗುತ್ತಿದೆ. ಕಾರ್ಯಾಗಾರದಲ್ಲಿ ಒಂದೊಂದು ಅವಧಿಗೆ ೧೪೦೦ ಮಂದಿಯಂತೆ ಒಟ್ಟು ೬ ಸಾವಿರ ಮಂದಿ ಭಾಗವಹಿಸಲಿದ್ದು, ಕಾರ್ಯಾಗಾರದಲ್ಲಿ ಆಹ್ವಾನಿತರಿಗೆ ಮಾತ್ರ ಅವಕಾಶವಿದ್ದು, ಸಂಜೆಯ ಕಾರ್ಯಾಗಾರದಲ್ಲಿ ಕುಟುಂಬ ಸಮೇತ ಎಲ್ಲರಿಗೂ ಭಾಗವಹಿಸಲು ಅವಕಾಶವಿದೆ ಎಂದರು.