ಸಾರಾಂಶ
ಸಿ.ಟಿ.ರವಿ ಬಂಧನ ಖಂಡಿಸಿ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಪಕ್ಷದಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕಾಂಗ್ರೆಸ್ ಪಕ್ಷ ಪೊಲೀಸರನ್ನು ಬಳಸಿಕೊಂಡು ವಿರೋಧ ಪಕ್ಷದವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಅರುಣಕುಮಾರ್ ಆರೋಪಿಸಿದರು.
ಶುಕ್ರವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಿ.ಟಿ ರವಿ ಬಂಧನ ಖಂಡಿಸಿ ತಾಲೂಕು ಬಿಜೆಪಿಯಿಂದ ನಡೆದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದರು. ವಿಧಾನ ಸಭೆ ಕಲಾಪದಲ್ಲಿ ಸಿ.ಟಿ ರವಿ ಹೇಳಿಕೆ ತಿರುಚಿ ಅವರ ಮೇಲೆ ಸುಳ್ಳು ಆರೋಪ ಮಾಡಿ ಅವರನ್ನು ಬಲವಂತವಾಗಿ ಬಂಧಿಸಲಾಗಿದೆ. ಕಾಲ ಚಕ್ರ ಸದಾ ಬದಲಾಗುತ್ತಿರುತ್ತದೆ. ಸಿಟಿ ರವಿಯವರಿಗೆ ನೀಡಿರುವ ತೊಂದರೆಗೆ ಸಧ್ಯದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಉತ್ತರ ಸಿಗಲಿದೆ. ಒಬ್ಬ ರಾಷ್ಟ್ರೀಯ ನಾಯಕರ ಜತೆ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಸೌಜನ್ಯವಿಲ್ಲದ ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕಾರವಿರಲಿ. ಸಿ.ಟಿ.ರವಿ ಏನು ಹೇಳಿದ್ದಾರೆ ಎನ್ನುವುದನ್ನು ಕೂಲಂಕಷವಾಗಿ ತನಿಖೆ ನಡೆಸದೆ ಉಗ್ರಗಾಮಿಗಳನ್ನು ನಡೆಸಿಕೊಳ್ಳುವ ರೀತಿ ನಡೆಸಿಕೊಂಡಿದ್ದೀರಿ ಎಂದು ದೂರಿದರು.ಸಿ.ಟಿ.ರವಿಯವರನ್ನು ಹತ್ತಿಕ್ಕಲು ಮತ್ತು ಅವರ ಆತ್ಮ ಸ್ಥೈರ್ಯ ಕುಗ್ಗಿಸಲು ಕಾಂಗ್ರೆಸ್ ಸರ್ಕಾರ ಅವರನ್ನು ಬಂಧಿಸಿದೆ. ಇದು ಕಾಂಗ್ರೆಸ್ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ನಿಮ್ಮ ಅಡಳಿತ ಶಾಶ್ವತ ಅಲ್ಲ ಎಂಬುದನ್ನು ಮರೆಯಬೇಡಿ. ಕೂಡಲೇ ಸಿ.ಟಿ ರವಿಯವರನ್ನು ಬಿಡುಗಡೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬಿಜೆಪಿ ಉಗ್ರ ಹೋರಾಟ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.ಬಿಜಿಪಿ ಮುಖಂಡ ಬಿ.ಎಸ್. ಆಶೀಶ್‌ಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಬಿಜೆಪಿಗೆ ಸಮರ್ಥವಾದ ವಿರೋಧ ಪಕ್ಷವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಸಿ.ಟಿ.ರವಿ ಮೇಲೆ ಸುಳ್ಳು ಕೇಸು ಹಾಕಲಾಗಿದೆ. ಸಿ.ಟಿ.ರವಿ ಹಿಂದುಗಳ ಪರವಾಗಿ ಧ್ವನಿ ಎತ್ತಿದವರು. ಆದ್ದರಿಂದ ಅವರ ಮೇಲೆ ಕೇಸು ಹಾಕಿ, ಆತ್ಮ ಸ್ಥೈರ್ಯ ಕುಗ್ಗಿಸಲಾಗುತ್ತಿದೆ ಎಂದರು.
ತಾಲೂಕು ಬಿಜೆಪಿ ಮಹಿಳಾ ಘಟಕ ಅಧ್ಯಕ್ಷೆ ರಶ್ಮಿ ದಯಾನಂದ್ ಮಾತನಾಡಿ, ಸಿ.ಟಿ.ರವಿ ರಾಷ್ಟ್ರೀಯ ನಾಯಕನಾಗಿ ಬೆಳೆಯುತ್ತಿದ್ದಾರೆ. ಸಮರ್ಥವಾಗಿ ಸರ್ಕಾರದ ತಪ್ಪುಗಳನ್ನು ಎತ್ತಿ ಹಿಡಿಯುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣದಿಂದ ಅವರನ್ನು ಬಂಧಿಸಿದೆ ಎಂದರು. ಬಿಜೆಪಿ ಮುಖಂಡರಾದ ಕೆಸವಿ ಮಂಜು, ಮೂಡಬಾಗಿಲು ಸಚಿನ್, ಜಗದೀಶ್ ಮಾತನಾಡಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಎನ್.ಎಂ.ಕಾಂತರಾಜ್, ಸುರಭಿ ರಾಜೇಂದ್ರ, ಫರ್ವೀಜ್,ಎನ್.ಡಿ.ಪ್ರಸಾದ್, ಹಂಚಿನ ಮನೆ ರಾಘು, ಲಾಡ್ ಮಂಜು,ಪ್ರವೀಣ,ಪ್ರೀತಮ್,ಸುಧಾಕರ್,ವಿಜಯಕುಮಾರ್,ಸಾರ್ಥಕಗೌಡ ಮುಂತಾದವರು ಭಾಗವಹಿಸಿದ್ದರು.