ಕಾಂಗ್ರೆಸ್ಸಿಗರು ಡಾ.ಅಂಬೇಡ್ಕರ್‌ ಪುಸ್ತಕವನ್ನೇ ಓದಿಲ್ಲ: ಯತ್ನಾಳ

| Published : Nov 15 2024, 12:36 AM IST

ಕಾಂಗ್ರೆಸ್ಸಿಗರು ಡಾ.ಅಂಬೇಡ್ಕರ್‌ ಪುಸ್ತಕವನ್ನೇ ಓದಿಲ್ಲ: ಯತ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಅಜ್ಜಂಪೀರ್‌ ಖಾದ್ರಿ ಒಬ್ಬ ನಾಲಾಯಕ್. ಡಾ.ಅಂಬೇಡ್ಕರ್‌ ಬಗ್ಗೆ ಅಧ್ಯಯನ ಮಾಡದೇ ಮಾತನಾಡುತ್ತಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅಜ್ಜಂಪೀರ್‌ ಖಾದ್ರಿ ಒಬ್ಬ ನಾಲಾಯಕ್. ಡಾ.ಅಂಬೇಡ್ಕರ್‌ ಬಗ್ಗೆ ಅಧ್ಯಯನ ಮಾಡದೇ ಮಾತನಾಡುತ್ತಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಜಿಲ್ಲೆಯ ಚಿಕ್ಕೋಡಿಯಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ಇಸ್ಲಾಂ ಧರ್ಮಕ್ಕೆ ಸೇರಲು ಸಿದ್ಧತೆ ಮಾಡಿಕೊಂಡಿದ್ದರು ಎಂಬ ಕಾಂಗ್ರೆಸ್ ಮುಖಂಡ ಅಜ್ಜಂಪೀರ್‌ ಖಾದ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನ ಅಯೋಗ್ಯರು ಅಂಬೇಡ್ಕರ್‌ ಪುಸ್ತಕ ಓದಿಲ್ಲ. ಮೊದಲು ಅವರ ಆ ಬುಕ್ ಓದಲಿ. ಅಂಬೇಡ್ಕರ್ ಎಂದೂ ಹಿಂದೂ ವಿರೋಧಿ, ದೇಶದ್ರೋಹಿ ಆಗಿರಲಿಲ್ಲ. ಈ ಕಳ್ಳರೆಲ್ಲಾ ಸೇರಿ ಅಂಬೇಡ್ಕರ್ ಫೋಟೋ ಹಾಕುತ್ತಾರೆ. ಈ ಜಿಲ್ಲೆಯಲ್ಲೂ ಕೆಲವರು ರಾಜಕೀಯ ಮಾಡುತ್ತಾರೆ. ಅಂಬೇಡ್ಕರ್ ಹೆಸರಿನಲ್ಲಿ ಸ್ಮಶಾನದಲ್ಲಿ ಹೋಗಿ ಪೂಜೆ ಮಾಡುತ್ತಾರೆ. ಇವರು ಮೊದಲು ಅಂಬೇಡ್ಕರ್‌ ಪುಸ್ತಕ ಓದಲಿ ಎಂದು ಪರೋಕ್ಷವಾಗಿ ಸತೀಶ್ ಜಾರಕಿಹೊಳಿ‌ಗೆ ಟಾಂಗ್ ನೀಡಿದರು.ನಿಜಾಮನ ಬೇಡಿಕೆ ತಿರಸ್ಕರಿದ್ದ ಡಾ.ಅಂಬೇಡ್ಕರ್:

ಡಾ.ಅಂಬೇಡ್ಕರ್ ಅವರಿಗೆ ಹೈದ್ರಾಬಾದ್ ನಿಜಾಮ್ ಇಸ್ಲಾಂ ಸೇರಿದರೆ ಅರ್ಧ ಆಸ್ತಿ ಕೊಡುತ್ತೇನೆ ಎಂದು ಆಮಿಷ ಒಡ್ಡಿದ್ದ. ಆದರೆ, ಡಾ.ಬಾಬಾಸಾಹೇಬರು ನನ್ನ ಕುಟುಂಬದ ಉದ್ಧಾರಕ್ಕಾಗಿ ಇಂತಹ ಹೇಯ ಕೆಲಸ ಮಾಡಲ್ಲ. ಇಸ್ಲಾಂ ನಾನು ಸೇರಿದ್ರೂ ನಮ್ಮನ್ನ ಮತ್ತೆ ದಲಿತರ ಹಾಗೆ ಕಾಣುತ್ತಾರೆ. ಹಾಗಾಗಿ ಇಸ್ಲಾಂ ಸೇರಲ್ಲ ಎಂದು ನಿಜಾಮ್ ಕೊಟ್ಟ ಆಹ್ವಾನ ತಿರಸ್ಕರಿಸಿದ್ದರು. ಇಸ್ಲಾಂ ಸೇರಿದರೆ ಇಡೀ ದೇಶ ರಾಷ್ಟ್ರಾಂತರ ಆಗುತ್ತೆ. ಹಿಂದೂ-ಮುಸ್ಲಿಂ ಜಗಳ ಆಗಲಿದೆ. ಅದಕ್ಕೆ ನಾನು ಅವಕಾಶ ಕೊಡಲ್ಲ. ಬೌದ್ಧ ಧರ್ಮ ಭಾರತದಲ್ಲೇ ಜನ್ಮ ತಾಳಿದ ಧರ್ಮ. ಬೌದ್ಧ ಧರ್ಮ ಸ್ವೀಕಾರ ಮಾಡುತ್ತೇನೆಂದು ಬೌದ್ಧಧರ್ಮಕ್ಕೆ ಸೇರಿದರು ಎಂದು ಹೇಳಿದರು.

ದೇಶ ಒಡೆದು ಪಾಕಿಸ್ತಾನ ಕೊಡುವುದಕ್ಕೂ ಡಾ.ಅಂಬೇಡ್ಕರ್‌ ವಿರೋಧ ಮಾಡಿದ್ದರು. ಪಾಕಿಸ್ತಾನ ದೇಶ ಕೊಟ್ರೆ ಅಲ್ಲಿರುವ ಹಿಂದೂಗಳನ್ನು ಭಾರತಕ್ಕೆ, ಇಲ್ಲಿರುವ ಮುಸ್ಲಿಮರನ್ನು ಅಲ್ಲಿಗೆ ಕಳುಹಿಸಿ. ಇಸ್ಲಾಂ ಧರ್ಮದಲ್ಲಿ ಸಹೋದರತ್ವ ಭಾವನೆ ಇಲ್ಲ. ಇವರು ಎಲ್ಲಿಯವರೆಗೆ ಭೂಮಿ ಮೇಲೆ ಇರುತ್ತಾರೋ ಗದ್ದಲ ಮಾಡುತ್ತಲೇ ಇರುತ್ತಾರೆ ಎಂದರು.

ಭಯೋತ್ಪಾದಕರನ್ನು ಹುಟ್ಟುವ ಕಾರ್ಖಾನೆ ಮಾಡುತ್ತಾರೆ ಎಂದು ಪಾರ್ಟಿಷನ್ ಆಫ್ ಪುಸ್ತಕದಲ್ಲಿ ಡಾ.ಅಂಬೇಡ್ಕರ್‌ 1942ದಲ್ಲಿ ಕ್ಲಿಯರ್ ಆಗಿ ಬರೆದಿದ್ದಾರೆ ಎಂದು ಹೇಳಿದರು.

ಕನ್ಹೇರಿ ಶ್ರೀಗಳ ಹೇಳಿಕೆ ಸಮರ್ಥಿಸಿದ ಯತ್ನಾಳ:

ಹಿಂದೂ-ಮುಸ್ಲಿಂ ಭಾಯಿ ಭಾಯಿ ಆಗಲ್ಲ ಎಂದು ಕನ್ಹೇರಿ ಮಠದ ಸ್ವಾಮೀಜಿ ಹೇಳಿದ್ದು ನಿಜ ಇದೆ. ಖಾದ್ರಿಗೆ ಬುದ್ಧಿ ಮತ್ತು ಮರ್ಯಾದೆ ಇಲ್ಲ. ನಮ್ಮ ಜನರು ಡಾ.ಅಂಬೇಡ್ಕರ್ ವಿಚಾರಧಾರೆ ಓದಿಲ್ಲದಿರುವುದೇ ಈ ದೇಶದ ದುರ್ದೈವ. ಬರೀ ಗಾಂಧಿ ಬೆನ್ನು ಹತ್ತಿದ್ದಾರೆ. ಗಾಂಧಿಗಿಂತ ಶ್ರೇಷ್ಠ ಮನುಷ್ಯ ಅಂಬೇಡ್ಕರ್. ಗಾಂಧೀಜಿಗೆ ಮಹಾತ್ಮ, ರಾಷ್ಟ್ರಪಿತ ಎಂದು ಕರೆಯಬೇಡಿ. ರಾಷ್ಟ್ರಪಿತ ಹೇಗೆ ಆಗುತ್ತಾರೆ? ದೇಶಕ್ಕೇನು ಗಂಡ ಇರ್ತಾನಾ. ಇದನ್ನು ನಾನು ಹೇಳಿಲ್ಲ. ಡಾ.ಅಂಬೇಡ್ಕರ್‌ ತಮ್ಮ ಪುಸ್ತಕದಲ್ಲಿಯೇ ಬರೆದಿದ್ದಾರೆ ಎಂದು ಹೇಳಿದರು.

ಡಿ.9ರೊಳಗೆ ಮೀಸಲಾತಿ ಘೋಷಿಸದಿದ್ರೆ ಸುವರ್ಣವಿಧಾನ ಸೌಧಕ್ಕೆ ಮುತ್ತಿಗೆ:

ಮುಗಳಖೋಡ: ಪಂಚಮಸಾಲಿ ಸಮಾಜಕ್ಕೆ ಆಗುತ್ತಿರುವ ಅನ್ಯಾಯಗಳಿಂದ ವಿದ್ಯಾರ್ಥಿಗಳಿಗೆ ಸರ್ಕಾರಿ ಸೌಲಭ್ಯಗಳು ಸರಿಯಾಗಿ ದೊರಕುತ್ತಿಲ್ಲ. ಸಮಾಜದ ಬೇಡಿಕೆಯಾದ 2ಎ ಮೀಸಲಾತಿ ಸಿಗುವವರೆಗೆ ನಿರಂತರ ಹೋರಾಟ ನಡೆಯಲಿದೆ. ಡಿಸೆಂಬರ್ 9ರ ಒಳಗೆ ನಿರ್ಣಯಿಸಿ ಅಂತ್ಯಗೊಳಿಸದಿದ್ದರೆ ಟ್ರ್ಯಾಕ್ಟರ್ ಗಳೊಂದಿಗೆ ಸುವರ್ಣವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಸಿದ್ಧರಿದ್ದೇವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಕೆ ನೀಡಿದರು.

ಬುಧವಾರ ಪಟ್ಟಣದ ಬಸವಶ್ರೀ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮುಂದಾಳತ್ವದಲ್ಲಿ ನಡೆದ 4 ವರ್ಷಗಳ ಅವಿರತ ಹೋರಾಟದ ಫಲವಾಗಿ ಹಿಂದಿನ ಬಿಜೆಪಿ ಸರ್ಕಾರ 2ಡಿ ಮಿಸಲಾತಿ ನೀಡಿತ್ತಾದರೂ ಅದು ಈವರೆಗೂ ಜಾರಿಯಾಗಿಲ್ಲ. ಎಲ್ಲರ ಬೇಡಿಕೆಗೆ ಸ್ಪಂದಿಸುತ್ತಿರುವ ಸಿದ್ದರಾಮಯ್ಯನವರು ನಮಗೆ ಮಾತ್ರ ನೀತಿ ಸಂಹಿತೆ ಪಾಠ ಹೇಳುವುದು ಯಾವ ನ್ಯಾಯ? ಸಮಾಜದ ರೈತರು, ವಿದ್ಯಾರ್ಥಿಗಳು ಎಲ್ಲರೂ ಸೇರಿ ಒಗ್ಗಟ್ಟಿನಿಂದ ನಮ್ಮ ಬೇಡಿಕೆ ಈಡೇರಿಕೆಗೆ ಸುವರ್ಣ ಸೌಧಕ್ಕೆ ಟ್ರ್ಯಾಕ್ಟರ್‌ಗಳ ಸಮೇತ ಹಾಕಲು ಸಿದ್ದರಾಗಿ ಎಂದು ಕರೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ಹಿರಿಯ ಬಸಗೌಡ ಖೆತಗೌಡರ ಅಧ್ಯಕ್ಷತೆ ವಹಿಸಿದ್ದರು, ಶಶಿಕಾಂತ ಪಡಸಲಗಿ ಅತಿಥಿ ಸ್ಥಾನ ವಹಿಸಿದ್ದರು. ಸಂತೋಷ ಮುಗಳಿ ಸ್ವಾಗತಿಸಿ ನಿರೂಪಿಸಿದರು.