ಮಡಿಕೇರಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಜಾಗತಿಕ ತೈಲ ಮಾರುಕಟ್ಟೆಯ ಅಸ್ಥಿರತೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಉಳಿತಾಯ ಹಾಗೂ ಆರ್ಥಿಕ ಶಿಸ್ತಿನ ಬಗ್ಗೆ ದೇಶದ ಜನತೆಗೆ ನೀಡಿರುವ ಸಲಹೆಯನ್ನು ಕಾಂಗ್ರೆಸ್ ಪಕ್ಷ ಕ್ಷುಲ್ಲಕ ರಾಜಕಾರಣಕ್ಕಾಗಿ ಬಳಸುತ್ತಿರುವುದು ಖಂಡನೀಯ ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಸಂದಿಗ್ಧತೆ ಇಡೀ ವಿಶ್ವದ ಮೇಲೆ ಪರಿಣಾಮ ಬೀರಿದೆ. ಮುಂದಿನ ದಿನಗಳಲ್ಲಿ ದೇಶದ ಜನರಿಗೆ ಸಮಸ್ಯೆಯಾಗಬಾರದು ಎನ್ನುವ ದೂರದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕ ಶಿಸ್ತಿನ ಕುರಿತು ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳದ ಕಾಂಗ್ರೆಸ್ಸಿಗರು ದೇಶದ ಆಂತರಿಕ ಸಮಸ್ಯೆ ಎಂಬಂತೆ ಪ್ರತಿಬಿಂಬಿಸಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಗಳಾಗಿದ್ದಾಗ ಚಿನ್ನದ ಮೇಲಿನ ಅವಲಂಬನೆ ಕಡಿಮೆ ಮಾಡಲು ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಮಿತವಾಗಿ ಬಳಸಲು ಕರೆ ನೀಡಿದ್ದರು. ಆದರೆ ಆ ಸಂದರ್ಭ ಯಾವುದೇ ಯುದ್ಧ ಇರಲಿಲ್ಲ, ಕೇವಲ ಆರ್ಥಿಕ ನಿರ್ವಹಣೆಯ ಕೊರತೆ ಇತ್ತು ಎಂದು ಟೀಕಿಸಿದ್ದಾರೆ.